ನವದೆಹಲಿ: ಜಗತ್ತಿಗೆ ಕರೊನಾ ಮಹಾಮಾರಿ ಹಬ್ಬಿಸಿರುವ ಚೀನಾದಲ್ಲಿ ಈಗ ಮತ್ತೊಂದು ಭಯಾನಕ ವೈರಸ್ ಲ್ಯಾಬ್ವೊಂದರಿಂದ ಸೋರಿಕೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಹೊಸ ಬ್ಯಾಕ್ಟೀರಿಯಾ ಮನುಷ್ಯನನ್ನು ನಪುಂಸಕನನ್ನಾಗಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ 3,245 ಮಂದಿ ಈ ಸೋಂಕಿಗೆ ತುತ್ತಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚೀನಾದ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಹೊಸ ವೈರಸ್ನ ಮೇಲ್ವಿಚಾರಣೆಗೆ 11 ಸಾರ್ವಜನಿಕ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳನ್ನು ನಿಯೋಜಿಸಲಾಗಿದ್ದು, ಇಲ್ಲಿ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ಶೇ. 80 ಚೇತರಿಕೆ: ಭಾರತದಲ್ಲಿ ಕರೊನಾ ಸೋಂಕಿತರ ಸಂಖ್ಯೆಯ ಏರಿಕೆಯ ಬೆನ್ನಲ್ಲೇ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆಯೂ ಗಣನೀಯವಾಗಿ ಏರಿಕೆ ಕಂಡಿದೆ. ಭಾನುವಾರ 93 ಸಾವಿರದಷ್ಟು ಸೋಂಕಿತರು ಚೇತರಿಸಿಕೊಂಡಿದ್ದು, ಗುಣಮುಖ ಪ್ರಮಾಣವು ಶೇ. 80ಕ್ಕೂ ಹೆಚ್ಚಾಗಿದೆ. 3ನೇ ದಿನವೂ ಸೋಂಕಿತರಿಗಿಂತ ಆರೋಗ್ಯ ಮೇಲಾದವರ ಸಂಖ್ಯೆಯೇ ಅಧಿಕವಾಗಿದೆ. ಕಳೆದ ಮೂರು ದಿನಗಳಿಂದ ಪ್ರತಿದಿನ 90 ಸಾವಿರಕ್ಕೂ ಅಧಿಕ ಮಂದಿ ಚೇತರಿಸಿಕೊಂಡಿದ್ದಾರೆ. ವಿಶ್ವದಲ್ಲಿ ಸೋಂಕಿನಿಂದಾಗಿ ಗುಣಮುಖರಾಗಿರುವವರಲ್ಲಿ ಭಾರತ ಶೇ. 19 ಪಾಲನ್ನು ಹೊಂದಿದೆ. 12 ರಾಜ್ಯಗಳಲ್ಲಿ ಗುಣಮುಖ ಪ್ರಮಾಣ ದೇಶದ ಚೇತರಿಕೆ ಪ್ರಮಾಣಕ್ಕಿಂತ ಹೆಚ್ಚಿದೆ. ಗುಣಮುಖರಲ್ಲಿ ಶೇ. 79 ಪಾಲು 10 ರಾಜ್ಯಗಳು ಹೊಂದಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಭಾನುವಾರ 87,400 ಜನರಲ್ಲಿ ಸೋಂಕು ದೃಢವಾಗಿದೆ. ಈ ಮೂಲಕ ದೇಶದ ಒಟ್ಟಾರೆ ಸೋಂಕಿತರ ಸಂಖ್ಯೆ 55 ಲಕ್ಷದಷ್ಟಾಗಿದೆ. 24 ಗಂಟೆಗಳಲ್ಲಿ 1,135 ಜನರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 88 ಸಾವಿರದಷ್ಟಾಗಿದೆ. 44 ಲಕ್ಷದಷ್ಟು ಜನರು ಗುಣಮುಖರಾಗಿದ್ದು, ಕೇವಲ 10 ಲಕ್ಷ ಸಕ್ರಿಯ ಪ್ರಕರಣಗಳಿವೆ ಎಂದು ಸಚಿವಾಲಯಯ ಮಾಹಿತಿ ನೀಡಿದೆ. ಇದನ್ನೂ ಓದಿ: ಡ್ಯಾನ್ಸರ್ ಕಿಶೋರ್ ಜತೆ ಸಂಪರ್ಕ; ಇಬ್ಬರು ಯುವತಿಯರು ಸಿಸಿಬಿ ವಶಕ್ಕೆ
ಕರೊನಾ ಪರೀಕ್ಷೆಗೆ ದೇಶೀಯವಾಗಿ ಸಿದ್ಧಪಡಿಸಲಾಗಿರುವ ‘ಫೆಲುಡಾ’ ವಿಧಾನಕ್ಕೆ ಭಾರತೀಯ ಔಷಧ ನಿಯಂತ್ರಕ ಮಂಡಳಿಯು (ಡಿಜಿಸಿಐ) ಅನುಮೋದನೆ ನೀಡಿದೆ. ಈ ವಿಧಾನದಲ್ಲಿ ಸಿಆರ್ಐಎಸ್ಪಿಆರ್ ಜೀನ್ ಎಡಿಟಿಂಗ್ ತಂತ್ರಜ್ಞಾನ ಬಳಸಿಕೊಂಡು ಪರೀಕ್ಷೆ ನಡೆಸಲಾಗುವುದು. ಈ ಪರೀಕ್ಷೆಯು ವಿಶ್ವದಲ್ಲೇ ಕಡಿಮೆ ಸಮಯದಲ್ಲಿ ವರದಿ ನೀಡುವ ವಿಧಾನ ವಾಗಿದೆ. 2 ಗಂಟೆಗಳಲ್ಲಿ ವರದಿ ಪಡೆಯಬಹುದು. ಇದರ ವೆಚ್ಚ 600 ರೂ. ವೈಜ್ಞಾನಿಕ ಮತ್ತು ಔದ್ಯಮಿಕ ಸಂಶೋಧನಾ ಮಂಡಳಿ ಇನ್ಸ್ಟಿಟ್ಯೂಟ್ ಆಫ್ ಜಿನೋಮಿಕ್ಸ್ ಮತ್ತು ಇಂಟಿಗ್ರೇಟಿವ್ ಬಯೋಲಜಿಯು ಟಾಟಾ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ಇದನ್ನು ಅಭಿವೃದ್ಧಿ ಪಡಿಸಿವೆ. ಇದನ್ನೂ ಓದಿ: ಮಕ್ಕಳ ಚಿಕಿತ್ಸೆಗಾಗಿ ಅಂಗಾಂಗಗಳನ್ನೇ ಮಾರಾಟಕ್ಕಿಟ್ಟ ಮಹಾತಾಯಿ!
ಸರ್ಕಾರದ ಅನ್ಲಾಕ್ 4ರ ನಿಯಮಾವಳಿಯಂತೆ ದೇಶದ ಕೆಲ ರಾಜ್ಯಗಳಲ್ಲಿ ಸೋಮವಾರ ಶಾಲೆಗಳು ಭಾಗಶಃವಾಗಿ ಪುನರಾರಂಭಗೊಂಡಿವೆ. ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ಜಮ್ಮು-ಕಾಶ್ಮೀರ, ಆಂಧ್ರ ಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಶಾಲೆಗಳನ್ನು ತೆರೆಯಲಾಗಿದೆ. ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ವಿದ್ಯಾರ್ಥಿಗಳನ್ನು ತರಗತಿಯೊಳಗೆ ಸೇರಿಸಲಾಗುತ್ತಿದೆ. ಕೆಲ ರಾಜ್ಯದಲ್ಲಿ ಆನ್ಲೈನ್ ತರಗತಿಯಲ್ಲಿ ಹಾಜರಾಗಲು ಸಾಧ್ಯವಿರದ ವಿದ್ಯಾರ್ಥಿಗಳಿಗೆ ಮಾತ್ರವೇ ಶಾಲೆಗೆ ಬರುವಂತೆ ತಿಳಿಸಲಾಗಿದೆ.