ನವದೆಹಲಿ: ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಂದರ ಹಿಂದೆ ಒಂದರಂತೆ ಆಘಾತ ಎದುರಾಗುತ್ತಿದ್ದು, ಈಗ ಮಹತ್ವದ ಬೆಳವಣಿಗೆ ಒಂದರಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಡಾ. ಕರಣ್ ಸಿಂಗ್ ಯಾದವ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.
ರಾಜಸ್ಥಾನದ ಅಲ್ವಾರ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಕರಣ್ ಸಿಂಗ್ ಈ ಬಾರಿಯೂ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ, ಅವರಿಗೆ ಟಿಕೆಟ್ ನಿರಾಕರಿಸಿದ ಕಾರಣ ಮನನೊಂದು ಪಕ್ಷ ತೊರೆಯುತ್ತಿರುವುದಾಗಿ ತಿಳಿಸಿದ್ದಾರೆ.
ಪಕ್ಷಕ್ಕೆ ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ಕರಣ್ ಸಿಂಗ್, ವೈಯಕ್ತಿಕ ಕಾರಣಗಳಿಂದ ನಾನು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಜನರ ಸೇವೆ ಮಾಡಲು ನನಗೆ ಅವಕಾಶ ಮಾಡಿಕೊಟ್ಟ ಸೋನಿಯಾ ಗಾಂಧಿ, ಅಶೋಕ್ ಗೆಹ್ಲೋಟ್ ಮತ್ತು ರಾಜೇಶ್ ಪೈಲಟ್ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ.
ಇದನ್ನೂ ಓದಿ: ಆರ್ಸಿಬಿ ಪರ ಹೊಸ ದಾಖಲೆ ಬರೆದ ಎಲ್ಲಿಸ್ ಪೆರ್ರಿ
ಈ ಚುನಾವಣೆಯಲ್ಲಿ ನಾನು ಸ್ಪರ್ಧಿಸಿ ಗೆಲ್ಲಬೇಕೆಂದು ಜನರು ಬಯಸಿದ್ದರು. ಆದರೆ, ಪ್ರಜಾಪ್ರಭುತ್ವ ಸ್ಥಾಪಿಸಲು ಆರಂಭದಲ್ಲಿ ಆಡಳಿತದ ವಿರುದ್ಧ ಹೋರಾಡಿದ ಕಾಂಗ್ರೆಸ್ ಈಗ ಅವರ ಪ್ರಭಾವದಿಂದ ಕೆಲಸ ಮಾಡುತ್ತಿದೆ, ಅದಕ್ಕಾಗಿಯೇ ನನಗೆ ಟಿಕೆಟ್ ನಿರಾಕರಿಸಲಾಗಿದೆ. ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಗೆ ಆಪ್ತರಾಗಿರುವ ಭನ್ವರ್ ಜಿತೇಂದ್ರ ಸಿಂಗ್ ರಾಜಸ್ಥಾನದಲ್ಲಿ ಪಕ್ಷವನ್ನು ಹಾಳು ಮಾಡಿದ್ದಾರೆ. ನನ್ನ ಮುಂದಿನ ರಾಜಕೀಯ ನಡೆ ಕುರಿತು ಚರ್ಚಿಸಿ ಆ ನಂತರ ನಿರ್ಧಾರ ಪ್ರಕಟಿಸುತ್ತೇನೆ ಎಂದು ಡಾ. ಕರಣ್ ಸಿಂಗ್ ಯಾದವ್ ತಿಳಿಸಿದ್ದಾರೆ.
2018 ರಲ್ಲಿ ನಡೆದ ಅಲ್ವಾರ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜಯಶಾಲಿಯಾಗಿದ್ದ ಕರಣ್ ಸಿಂಗ್ ಮುಂಬರುವ ಚುನಾವಣೆಯಲ್ಲೂ ಆಕಾಂಕ್ಷಿಯಾಗಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಬೆಹ್ರೋರ್ ವಿಧಾನಸಭಾ ಕ್ಷೇತ್ರದ ಶಾಸಕ ಲಲಿತ್ ಯಾದವ್ ಅವರನ್ನು ಕಣಕ್ಕಿಳಿಸಿದೆ. ರಾಜಸ್ಥಾನದಲ್ಲಿ ಕಳೆದ ಕೆಲ ದಿನಗಳಿಂದ ಪಕ್ಷಾಂತರ ಪರ್ವ ಜೋರಾಗಿ ನಡೆಯುತ್ತಿದ್ದು, ಕಾಂಗ್ರೆಸ್ನ ಹಲವು ಮಾಜಿ ಶಾಸಕರು ಹಾಗೂ ಸಚಿವರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ.