ದಾವಣಗೆರೆ: ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು 'ಈ ಸಲ ಚುನಾವಣೆಗೆ ಸ್ಪರ್ಧಿಸುವುದಿಲ್ಲ' ಎಂದು ನಿನ್ನೆಯಷ್ಟೇ ಹೇಳಿದ್ದು, ಇದೀಗ ಭಾರತೀಯ ಜನತಾ ಪಕ್ಷದ ಇನ್ನೊಬ್ಬ ಶಾಸಕ ಕೂಡ 'ಈ ಚುನಾವಣೆಗೆ ಸ್ಪರ್ಧಿಸುವುದಿಲ್ಲ' ಎಂದಿದ್ದಾರೆ. ಈ ಮೂಲಕ ಬಿಜೆಪಿಯ ಇಬ್ಬರು ಶಾಸಕರು ಶಸ್ತ್ರತ್ಯಾಗ ಮಾಡಿದಂತಾಗಿದೆ.
ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ತಮ್ಮ ನಿಲುವು ತಿಳಿಸಿದ್ದಾರೆ. ಅರ್ಥಾತ್, ಈ ಸಲದ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂಬುದಾಗಿ ಅವರು ಹೇಳಿದ್ದಾರೆ. ಅನಾರೋಗ್ಯದ ಕಾರಣ ತಾವು ಸ್ಪರ್ಧಿಸುತ್ತಿಲ್ಲ ಎಂಬುದಾಗಿ ಅವರು ತಿಳಿಸಿದ್ದಾರೆ.
ರವೀಂದ್ರನಾಥ್ ಹೇಳಿಕೆ ಬೆನ್ನಲ್ಲೇ ದಾವಣಗೆರೆಯ ಶಿರಮಗೊಂಡನಹಳ್ಳಿ ಬಳಿ ಇರುವ ಅವರ ಮನೆ ಮುಂದೆ ನೂರಾರು ಅಭಿಮಾನಿಗಳು ಜಮಾಯಿಸಿದ್ದು, ಈ ಬಾರಿ ಚುನಾವಣೆಗೆ ನಿಲ್ಲುವಂತೆ ಒತ್ತಾಯಿಸಲಾರಂಭಿಸಿದ್ದಾರೆ. ತಾವು ನಿಂತರೆ ತಮ್ಮನ್ನು ಭಾರಿ ಅಂತರದಿಂದ ಗೆಲ್ಲಿಸಿಕೊಂಡು ಬರುವುದಾಗಿ ಕೆಲ ಮಹಾನಗರ ಪಾಲಿಕೆ ಸದಸ್ಯರು, ಕಾರ್ಯಕರ್ತರು ಒತ್ತಡ ಹೇರಿದ್ದಾರೆ. ಆದರೆ ಅನಾರೋಗ್ಯ ಕಾರಣದಿಂದ ನಾನು ಚುನಾವಣೆಯಿಂದ ಹಿಂದೆ ಸರಿದಿದ್ದೇನೆ ಎಂಬುದಾಗಿ ರವೀಂದ್ರನಾಥ್ ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.