ಮಂಜುನಾಥ ಕೋಳಿಗುಡ್ಡ ಬೆಳಗಾವಿ
ಕರ್ನಾಟಕ ಗಡಿಭಾಗದ ಗ್ರಾಮಗಳಲ್ಲಿ ತನ್ನ ಹಕ್ಕು ಸಾಧನೆಗೆ ಒಂದಿಲ್ಲೊಂದು ಕುತಂತ್ರ ಹೂಡುತ್ತಿರುವ ಮಹಾರಾಷ್ಟ್ರ ಸರ್ಕಾರ ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಬೆಳಗಾವಿ ನಗರದಿಂದ ಕೇವಲ 15 ಕಿಮೀ ದೂರದಲ್ಲಿರುವ ಶಿನೋಳ್ಳಿ ಗ್ರಾಮದಲ್ಲಿ ತಾಲೂಕುಮಟ್ಟದ ಸರ್ಕಾರಿ ಕಚೇರಿ ಆರಂಭಿಸಲು ಭರದ ಸಿದ್ಧತೆ ನಡೆಸಿದೆ.
ಈ ಕಚೇರಿಗೆ ತಹಸೀಲ್ದಾರ್ ಮಟ್ಟದ ಅಧಿಕಾರಿಗಳನ್ನು ನೇಮಿಸಿ ಆ ಮೂಲಕ ತನ್ನ ಕಾರ್ಯಚಟುವಟಿಕೆಗಳನ್ನು ನಡೆಸಲು ಹೊಂಚು ಹಾಕಿದೆ. ಅಲ್ಲದೆ ಶಿನೋಳ್ಳಿಯಲ್ಲಿ ಮರಾಠಿ ಭಾಷಿಕರ ಬೃಹತ್ ಸಮಾವೇಶ ನಡೆಸಲು ಯೋಜನೆ ರೂಪಿಸಿದ್ದು, ಕೊಲ್ಲಾಪುರ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಲಿದ್ದಾರೆಂದು ಮಾಹಿತಿಯೂ ಲಭ್ಯವಾಗಿದೆ.
ಮರಾಠಿ ಭಾಷಿಕರ ಸಮಸ್ಯೆಗಳ ಕುರಿತು ಕೊಲ್ಲಾಪುರ ಇಲ್ಲವೇ ಮುಂಬೈಗೆ ಹೋಗಿ ಮನವಿ ಸಲ್ಲಿಸಲು ಆಗುವುದಿಲ್ಲ. ಹೀಗಾಗಿ ಶಿನೋಳ್ಳಿಯಲ್ಲಿ ತಾಲೂಕುಮಟ್ಟದ ಕಚೇರಿ ಆರಂಭಿಸಿ ತಹಸೀಲ್ದಾರ್ ಮಟ್ಟದ ಅಧಿಕಾರಿ ನೇಮಿಸಲು ಮನವಿ ಸಲ್ಲಿಸಿದ್ದೇವೆ. ಇದಕ್ಕೆ ಕೊಲ್ಲಾಪುರ ಜಿಲ್ಲಾಧಿಕಾರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರ ಕಚೇರಿ ಆರಂಭಗೊಳ್ಳಲಿದೆ ಎಂದು ಎಂಇಎಸ್ ಮುಖಂಡರು ತಿಳಿಸಿದ್ದಾರೆ. ಅಸ್ತಿತ್ವ ಕಳೆದುಕೊಂಡಿರುವ ಎಂಇಎಸ್ ಮುಖಂಡರು ರಾಜಕೀಯ ಅಸ್ತಿತ್ವಕ್ಕಾಗಿ ಇದೇ ವಿಷಯ ಬಂಡವಾಳ ಮಾಡಿಕೊಂಡು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಂಚು ರೂಪಿಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಮಹಾತ್ಮ ಜ್ಯೋತಿರಾವ್ ಫುಲೆ ಜನಾರೋಗ್ಯ ಯೋಜನೆ ಅನುಷ್ಠಾನಕ್ಕಾಗಿಯೇ ತಹಸೀಲ್ದಾರ್ ಮಟ್ಟದ ಅಧಿಕಾರಿಗಳನ್ನು ಮಹಾಸರ್ಕಾರ ನಿಯೋಜಿಸಿದೆ. ಕರ್ನಾಟಕದ ಐದು ಜಿಲ್ಲೆಗಳಲ್ಲಿ 865ಕ್ಕೂ ಅಧಿಕ ಹಳ್ಳಿಗಳ ಮರಾಠಿಗರು ಹಾಗೂ ಇತರ ಭಾಷಿಕರಿಗೂ ಈ ಯೋಜನೆ ವಿಸ್ತರಿಸಲು ಹೊರಟಿದೆ. ಇದಕ್ಕೆ ಕರ್ನಾಟಕ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿ ರಾಜ್ಯದಲ್ಲಿ ತೆರೆದಿದ್ದ ಯೋಜನೆಯ ನೋಂದಣಿ ಕೇಂದ್ರಗಳನ್ನು ಬಂದ್ ಮಾಡಿದೆ. ಅಷ್ಟಾದರೂ ಸುಮ್ಮನಿರದೆ ಮೊಂಡುತನ ಪ್ರದರ್ಶಿಸುತ್ತಿದೆ.
ಬೆಳಗಾವಿ, ವಿಜಯಪುರ, ಕಲಬುರಗಿ, ಬೀದರ ಹಾಗೂ ಉತ್ತರಕನ್ನಡ ಜಿಲ್ಲೆಗಳ ಹಳ್ಳಿಗಳ ಜನರು ಆರೋಗ್ಯ ಚಿಕಿತ್ಸೆಗಾಗಿ ಹೆಚ್ಚಾಗಿ ಮಹಾರಾಷ್ಟ್ರದ ಮಿರಜ್, ಪುಣೆ, ಸಾಂಗ್ಲಿ, ಕೊಲ್ಲಾಪುರ, ಸೊಲ್ಲಾಪುರಗಳಿಗೆ ಹೋಗುವುದು ಸಹಜ. ಮಹಾರಾಷ್ಟ್ರ ಸರ್ಕಾರ ಯೋಜನೆ ಹೆಸರಿನಲ್ಲಿ ಅಲ್ಲಿಗೆ ತೆರಳುವವರೆಲ್ಲರನ್ನೂ ‘ತನ್ನವರು’ ಎಂದು ಬಿಂಬಿಸಿಕೊಳ್ಳಲು ಹೊರಟಿದೆ. ಈಗಾಗಲೇ ಬೆಳಗಾವಿ ಮಹಾನಗರ ಸೇರಿ ಕರ್ನಾಟಕದ ಒಳಗಿರುವ 865 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹೋರಾಟ ನಡೆಸಿದೆ. ಈ ವಿವಾದ ಸುಪ್ರೀಂ ಕೋರ್ಟ್ನಲ್ಲಿದೆ. ಮಹಾರಾಷ್ಟ್ರ ಸರ್ಕಾರವು ಕೋರ್ಟ್ ಆದೇಶ ಉಲ್ಲಂಘಿಸುತ್ತಿದ್ದರೂ ಕರ್ನಾಟಕ ಸರ್ಕಾರ ಯಾವುದೇ ದೂರು ನೀಡುತ್ತಿಲ್ಲ. ಹಾಗಾಗಿಯೇ ಗಡಿಭಾಗದಲ್ಲಿ ತನ್ನ ಯೋಜನೆಗಳನ್ನು ಅನುಷ್ಠಾನಕ್ಕೆ ಪ್ರಯತ್ನಿಸುತ್ತಿದೆ ಎಂದು ಕನ್ನಡಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ನಿರ್ಲಕ್ಷ್ಯ ಸಲ್ಲದು: 2009ರಲ್ಲಿ ಸ್ಥಾಪನೆಯಾದ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರ ನೇಮಕ ಆಗಿಲ್ಲ. ಗಡಿ ಸಂರಕ್ಷಣಾ ಆಯೋಗದ ಅಧ್ಯಕ್ಷ ಶಿವರಾಜ ಪಾಟೀಲ ಬೆಂಗಳೂರು ಬಿಟ್ಟು ಹೊರ ಬರುತ್ತಿಲ್ಲ. 2018ರಿಂದ ಗಡಿ ಉಸ್ತುವಾರಿ ಸಚಿವರ ನೇಮಕ ಆಗಿಲ್ಲ. 2014ರ ಅಕ್ಟೋಬರ್ನಲ್ಲಿ ಗಡಿ ಸಮಸ್ಯೆಗಳ ಕುರಿತು ರ್ಚಚಿಸಲು ಅವತ್ತಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ಕರೆದಿದ್ದರು. ಬಳಿಕ ಹತ್ತು ವರ್ಷದಿಂದ ಗಡಿ ಸಮಸ್ಯೆ ಕುರಿತು ಒಂದೇ ಒಂದು ಸಭೆ ಕರೆದಿಲ್ಲ. ಸಂಘಟನೆಗಳ ಹೋರಾಟಕ್ಕೂ ಸರ್ಕಾರ ಬೆಲೆ ಕೊಡುತ್ತಿಲ್ಲ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಡಿ ಸಮಿತಿಗೆ ಸಚಿವರ ನೇಮಕ ಇಲ್ಲ: ಸುಪ್ರೀಂಕೋರ್ಟ್ ಆದೇಶ ಬರುವವರೆಗೆ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು 2022ರ ಡಿ.14ರಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಅಲ್ಲದೆ, ಉಭಯ ರಾಜ್ಯದ ತಲಾ ಮೂವರು ಸಚಿವರನ್ನು ಒಳಗೊಂಡ ಸಮಿತಿ ರಚನೆ ಮಾಡಿತ್ತು. ಆದರೆ, ಇಲ್ಲಿಯವರೆಗೆ ಸಮಿತಿಯ ಒಂದೇ ಒಂದು ಸಭೆ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ 2023 ಫೆಬ್ರವರಿ ಮತ್ತು ಡಿಸೆಂಬರ್ 5ರಂದು ಉಭಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನೋಟಿಸ್ ನೀಡಿತ್ತು. ಅದಕ್ಕೂ ಉತ್ತರಿಸಿಲ್ಲ. ಅಲ್ಲದೆ, 2023ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಗಡಿ ಸಮಿತಿಗೆ ಸಚಿವರನ್ನು ನೇಮಿಸದಿರುವುದು ಕೂಡ ವಿಷಾದನೀಯ ಸಂಗತಿ.
ಬೆಳಗಾವಿ ನಗರದಿಂದ 15 ಕಿಮೀ ದೂರದಲ್ಲಿರುವ ಶಿನೋಳ್ಳಿಯಲ್ಲಿ ಮಹಾರಾಷ್ಟ್ರ ಕಚೇರಿ ಆರಂಭಿಸುತ್ತಿದೆ. ಇದು ಮರಾಠಿ ಭಾಷಿಕರ ಮೇಲೆ ಪರಿಣಾಮ ಉಂಟು ಮಾಡುವ ಸಾಧ್ಯತೆಯಿದೆ. ಕರ್ನಾಟಕ ಸರ್ಕಾರ ಎಚ್ಚೆತ್ತು ಗಡಿಭಾಗದ ಸಮಸ್ಯೆಗಳ ಕುರಿತು ಸಭೆ ಕರೆಯಬೇಕು. ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು.
| ಅಶೋಕ ಚಂದರಗಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ