ತರ್ಬೆಲಾ 5ನೇ ವಿಸ್ತರಣಾ ಜಲವಿದ್ಯುತ್ ಯೋಜನೆಯಲ್ಲಿ ಬಂಡೆ ಕುಸಿತ.
ಸುರಂಗ ಹಾಗೂ ಪವರ್‌ಹೌಸ್ ಪ್ರದೇಶಕ್ಕೆ ನುಗ್ಗಿದ ನೀರು, ಕಾರ್ಮಿಕರ ತುರ್ತು ಸ್ಥಳಾಂತರ
ವಿಶ್ವಬ್ಯಾಂಕ್ ಹಾಗೂ ಎಐಐಬಿ ಸಾಲದ ನೆರವಿನಿಂದ ನಡೆಯುತ್ತಿರುವ ಯೋಜನೆ
Pakistan Hydropower Project: ಪಾಕಿಸ್ತಾನದ ತರ್ಬೆಲಾ ಅಣೆಕಟ್ಟಿನ 5ನೇ ವಿಸ್ತರಣಾ ಜಲವಿದ್ಯುತ್ ಯೋಜನೆಗೆ ಮತ್ತೊಂದು ಬಹುದೊಡ್ಡ ಹಿನ್ನಡೆಯಾಗಿದೆ. ಸುರಂಗ ಕೊರೆಯುವ ಕಾಮಗಾರಿ ನಡೆಯುತ್ತಿದ್ದಾಗ ಬಂಡೆಯ ಭಾಗ ಕುಸಿದು ಬಿದ್ದು, ನಿರ್ಮಾಣ ಹಂತದಲ್ಲಿದ್ದ ಯೋಜನೆಗೆ ನೀರು ನುಗ್ಗಿದೆ. ಇದರಿಂದಾಗಿ ಅಧಿಕಾರಿಗಳು ತಕ್ಷಣವೇ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ.
ಅಭಿವೃದ್ಧಿಪಡಿಸಲಾಗುತ್ತಿರುವ 1,530 ಮೆಗಾವ್ಯಾಟ್ ಸಾಮರ್ಥ್ಯದ ಈ ಯೋಜನೆಯಲ್ಲಿ, ಕನೆಕ್ಟಿಂಗ್ ಸುರಂಗದ ಉತ್ಖನನ ನಡೆಸುವಾಗ ದುರ್ಬಲ ಬಂಡೆಯ ಭಾಗ ಕುಸಿದಿದೆ. ಈ ಪರಿಣಾಮ ಇಂಟೇಕ್ ಪಿಟ್‌ನಿಂದ ನೀರು ಸುರಂಗ ಮತ್ತು ಪವರ್‌ಹೌಸ್ ಪ್ರದೇಶಕ್ಕೆ ನುಗ್ಗಿದ್ದು, ತಕ್ಷಣವೇ ಕಾರ್ಮಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.
ಪಾಕಿಸ್ತಾನದ ಜಲ ಮತ್ತು ವಿದ್ಯುತ್ ಅಭಿವೃದ್ಧಿ ಪ್ರಾಧಿಕಾರ (WAPDA) ನೀಡಿದ ಮಾಹಿತಿಯಂತೆ, ಎಲ್ಲ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲಾಗಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲ. ಮುಖ್ಯ ಸುರಂಗ, ಪವರ್‌ಹೌಸ್, ಟೇಲ್‌ರೇಸ್ ಕಲ್ವರ್ಟ್ ಮತ್ತು ಸ್ವಿಚ್‌ಯಾರ್ಡ್‌ಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿಸಲಾಗಿದ್ದು, ನೀರು ಹೊರಹಾಕುವ ಕಾರ್ಯ ಆರಂಭವಾಗಿದೆ.
ಈ ಯೋಜನೆಯಲ್ಲಿ ಚೀನಾ ಕಂಪನಿಗಳು ಭಾಗಿಯಾಗಿದ್ದು, ಕೆಲವು ತಿಂಗಳ ಹಿಂದಷ್ಟೇ ಕಾಫರ್‌ಡ್ಯಾಮ್ (cofferdam) ಕುಸಿದು ಬಿದ್ದಿತ್ತು. ಅನಧಿಕೃತ ವಿನ್ಯಾಸ ಬದಲಾವಣೆ ಹಾಗೂ ಗುತ್ತಿಗೆದಾರರು ಮತ್ತು ಡಬ್ಲ್ಯುಎಪಿಡಿ ಎಅಧಿಕಾರಿಗಳ ವೈಫಲ್ಯವೇ ಅದಕ್ಕೆ ಕಾರಣ ಎಂದು ಸರ್ಕಾರಿ ತನಿಖಾ ವರದಿ ಹೇಳಿತ್ತು.
ಹಿಂದಿನ ಕುಸಿತದಿಂದಾಗಿ ಯೋಜನೆಯ ವೆಚ್ಚ ಬೃಹತ್ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಆರಂಭದಲ್ಲಿ 82 ಬಿಲಿಯನ್ ಪಾಕಿಸ್ತಾನಿ ರೂಪಾಯಿ (PKR) ಇದ್ದ ಅಂದಾಜು ವೆಚ್ಚ ಶೇ. 285 ಕ್ಕಿಂತ ಹೆಚ್ಚು ಹೆಚ್ಚಿ, ಬರೋಬ್ಬರಿ 317 ಬಿಲಿಯನ್ ಪಾಕಿಸ್ತಾನಿ ರೂಪಾಯಿಗೆ ತಲುಪಿದೆ.
ಅಲ್ಲದೆ, 2026 ಕ್ಕೆ ಪೂರ್ಣಗೊಳ್ಳಬೇಕಿದ್ದ ಈ ಯೋಜನೆ ಈಗ ಜೂನ್ 2028 ಕ್ಕೆ ಮುಂದೂಡಲ್ಪಟ್ಟಿದೆ. ವಿಶ್ವಬ್ಯಾಂಕ್ ಮತ್ತು ಏಷ್ಯನ್ ಇನ್‌ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ (AIIB) ಈ ಯೋಜನೆಗೆ ಸಾಲದ ನೆರವು ನೀಡುತ್ತಿವೆ.