ಮಂಡ್ಯ: ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ವೇ ಸಾವಿನ ಹೆದ್ದಾರಿ ಎಂಬ ಕುಖ್ಯಾತಿ ಗಳಿಸುತ್ತಿದೆ. ಉದ್ಘಾಟನೆಯಾದ ಕೆಲವೇ ತಿಂಗಳುಗಳಲ್ಲಿ ಅಪಘಾತದಿಂದ ಮೃತಪಟ್ಟವರ ಸಂಖ್ಯೆ 100 ದಾಟಿದ್ದು, ಸಾವಿನ ಸರಣಿ ಮುಂದುವರಿದಿದೆ. ಇದೀಗ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ.
ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಸವಾರರಿಬ್ಬರು ಸ್ಥಳದಲ್ಲೇ ದಾರುಣ ಅಂತ್ಯವಾಗಿದ್ದಾರೆ. ಈ ಘಟನೆ ಮದ್ದೂರು ಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿಯ ಫ್ಲೈಓವರ್ ಮೇಲೆ ನಡೆದಿದೆ.
ಮೃತರನ್ನು ಮಣಿ (25) ಮತ್ತು ಜನಾರ್ಧನ ಪೂಜಾರಿ (21) ಎಂದು ಗುರುತಿಸಲಾಗಿದೆ. ಇಬ್ಬರು ಕೋಲಾರ ಹಾಗೂ ಕೊಪ್ಪಳ ಮೂಲದವರು. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ವೀಕೆಂಡ್ ರಜೆ ಹಿನ್ನೆಲೆ ಬೆಂಗಳೂರಿನಿಂದ ಮೈಸೂರಿಗೆ ತೆರಳುವ ವೇಳೆ ಇಂದು ಬೆಳಗ್ಗಿನ ಜಾವ ಘಟನೆ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಮದ್ದೂರು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಯುವಕರ ಶವವನ್ನು ಮದ್ದೂರು ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಮದ್ದೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)