ನ್ಯೂಸ್

ಅನ್ನಭಾಗ್ಯ ಸಂಕಷ್ಟ: ಈ ತಿಂಗಳೂ ಸಿಗಲ್ಲ ಹೆಚ್ಚುವರಿ 5 ಕೆ.ಜಿ. ಅಕ್ಕಿ

ಬೆಂಗಳೂರು: ಐದು ಗ್ಯಾರಂಟಿಗಳ ಮೂಲಕ ಬಹುಮತ ಗಳಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್​​ಗೆ ಗ್ಯಾರಂಟಿಗಳ ಪೈಕಿ ಒಂದಾಗಿರುವ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಜತೆ ಸಂಘರ್ಷ ಉಂಟಾಗಿದೆ. ಈ ಸಂಘರ್ಷ ಇನ್ನೂ ಬಗೆಹರಿಯದ ಕಾರಣ ಅನ್ನಭಾಗ್ಯಕ್ಕೂ ಸಂಕಷ್ಟ ಎದುರಾಗಿದೆ.

ಕೇಂದ್ರ ಸರ್ಕಾರ ಅಕ್ಕಿ ನೀಡಲು ತಕರಾರು ತೆಗೆದಿದ್ದರಿಂದ ಹಾಗೂ ಅನ್ನಭಾಗ್ಯ ಯೋಜನೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್​ಗೆ ಅನನುಕೂಲವಾದ್ದರಿಂದ ಅದು ಹೆಚ್ಚುವರಿ ಅಕ್ಕಿಯ ಬದಲಿಗೆ ಹಣ ನೀಡುವುದಾಗಿ ಹೇಳಿತ್ತು. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಇನ್ನೂ ಎರಡು ತಿಂಗಳು ಹೆಚ್ಚುವರಿ ಅಕ್ಕಿ ಸಿಗುವುದು ಕಷ್ಟ ಎಂಬಂತಾಗಿದೆ.

ಈ ಕುರಿತು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಇಂದು ದೇವನಹಳ್ಳಿಯಲ್ಲಿ ಮಾಹಿತಿ ನೀಡಿದ್ದಾರೆ. ಈ ತಿಂಗಳು ಹೆಚ್ಚುವರಿ 5 ಕೆ.ಜಿ. ಅಕ್ಕಿ ಸಿಗುವುದಿಲ್ಲ, ಅದರ ಬದಲಿಗೆ ಪಡಿತರದಾರರ ಖಾತೆಗೆ ಹಣ ಜಮೆ ಮಾಡಲಾಗುವುದು ಎಂದಿದ್ದಾರೆ. ಆಗಸ್ಟ್​ ಮಾತ್ರವಲ್ಲದೆ ಸೆಪ್ಟೆಂಬರ್​ನಲ್ಲೂ ಹೆಚ್ಚುವರಿ ಅಕ್ಕಿ ಸಿಗುವುದರ ಕುರಿತು ಅನುಮಾನ ವ್ಯಕ್ತಪಡಿಸಿರುವ ಅವರು, ಆದಷ್ಟು ಬೇಗ ಅಕ್ಕಿ ಹೊಂದಿಸಿ ಕೊಡುವುದಾಗಿ ಹೇಳಿದ್ದಾರೆ.