ಪ್ರೀತಿ ನಿರಾಕರಿಸಿದ್ದಕ್ಕೆ 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಗರಗಸದಿಂದ ಹಲ್ಲೆ  
ನ್ಯೂಸ್

ಪ್ರೀತಿ ನಿರಾಕರಿಸಿದ್ದಕ್ಕೆ ಕೋಪ: ಕ್ಲಾಸ್‌ರೂಮ್‌ನಲ್ಲೇ ವಿದ್ಯಾರ್ಥಿನಿ ಮೇಲೆ ಗರಗಸದಿಂದ ಅಟ್ಯಾಕ್! | Chainsaw attack

ಪ್ರೀತಿ ನಿರಾಕರಿಸಿದ್ದಕ್ಕೆ 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಭೀಕರ ಹಲ್ಲೆ

ಗರಗಸದಿಂದ ವಿದ್ಯಾರ್ಥಿನಿ ಕೊಲೆಗೆ ಯತ್ನಿಸಿದ ಪಾಗಲ್​ ಪ್ರೇಮಿ?

ಹಲ್ಲೆ ತಡೆಯಲು ಯತ್ನಿಸಿದ ಮತ್ತೊಬ್ಬ ವಿದ್ಯಾರ್ಥಿನಿಗೂ ಗಾಯ

ಘಟನೆಯನ್ನು ತೀವ್ರವಾಗಿ ಖಂಡಿಸಿದ ಸಿಎಂ ಚಂದ್ರಬಾಬು ನಾಯ್ಡು

Andhra 10 student attack: ಆಂಧ್ರಪ್ರದೇಶದಲ್ಲಿ ಅತ್ಯಂತ ಆಘಾತಕಾರಿ ಘಟನೆಯೊಂದು ನಡೆದಿದ್ದು, ಪ್ರೀತಿ ನಿರಾಕರಿಸಿದ ಕೋಪಕ್ಕೆ 10ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಯುವಕನೊಬ್ಬ ಗರಗಸದಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ತಡೆಯಲು ಬಂದ ಮತ್ತೊಬ್ಬ ವಿದ್ಯಾರ್ಥಿನಿಗೂ ಗಾಯಗಳಾಗಿವೆ. ಘಟನೆಯನ್ನು ಖಂಡಿಸಿರುವ ಸಿಎಂ ಚಂದ್ರಬಾಬು ನಾಯ್ಡು, ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಪ್ತಾಡು ಜಿಲ್ಲಾ ಪರಿಷತ್ ಪ್ರೌಢಶಾಲೆಯಲ್ಲಿ ಭೀಕರ ಕೃತ್ಯ ನಡೆದಿದೆ. 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಗೋಪಿಕಾ ಎಂಬ ವಿದ್ಯಾರ್ಥಿನಿಯ ಮೇಲೆ ತರಗತಿಯ ಒಳಗಡೆಯೇ ಮರ ಕತ್ತರಿಸುವ ಚೈನ್​ಸಾದಿಂದ ಭೀಕರವಾಗಿ ಹಲ್ಲೆ ನಡೆಸಲಾಗಿದೆ.

ಪಾಠ ಕೇಳುತ್ತಿದ್ದ ವಿದ್ಯಾರ್ಥಿನಿ ಮೇಲೆ ದಾಳಿ

ಕ್ಲಾಸ್‌ರೂಮ್‌ನಲ್ಲಿ ಪಾಠ ಕೇಳುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಆರೋಪಿ ಏಕಾಏಕಿ ಚೈನ್​ಸಾದಿಂದ ದಾಳಿ ನಡೆಸಿ ಮುಖ, ತಲೆ ಹಾಗೂ ಬೆನ್ನಿನ ಭಾಗಕ್ಕೆ ಗಂಭೀರ ಗಾಯಗೊಳಿಸಿದ್ದಾನೆ. ಆಕೆಯನ್ನು ಬಚಾವ್ ಮಾಡಲು ಹೋದ ಲಕ್ಷ್ಮಿ ಎಂಬ ಹುಡುಗಿಗೂ ಗಾಯಗಳಾಗಿವೆ. ಘಟನೆ ಬಳಿಕ ಆರೋಪಿ ಪರಾರಿಯಾಗಿದ್ದು, ರಕ್ತದ ಮಡುವಿನಲ್ಲಿದ್ದ ಗೋಪಿಕಾಳನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪ್ರೀತಿಸವಂತೆ ಕಿರುಕುಳ ನೀಡುತ್ತಿದ್ದ ಪಾಗಲ್​?

ಆರೋಪಿ ಗೋಪಿಕಾಗೆ ದೂರದ ಸಂಬಂಧಿಯಾಗಿದ್ದು, ಹಲವು ದಿನಗಳಿಂದ ಪ್ರೀತಿಸವಂತೆ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಆತನ ನೀಚ ಕೃತ್ಯಕ್ಕೆ ಹೆದರದ ಗೋಪಿಕಾ, 'ಮನೆಗೆ ವಿಷಯ ತಿಳಿಸುತ್ತೇನೆ' ಎಂದು ಎಚ್ಚರಿಸಿದ್ದಳು. ಇದರಿಂದ ಆಕ್ರೋಶಗೊಂಡ ಕಿರಾತಕ ಈ ದಾಳಿ ನಡೆಸಿದ್ದಾನೆ.

ಇದನ್ನೂ ಓದಿ: BMW Driver Clash With Cop: ಬಿಎಂಡಬ್ಲ್ಯೂ ಚಾಲಕಿಯ ರಂಪಾಟ: ಕಾರು ನಿಲ್ಲಿಸೋಕೆ ಬಂದ ಟ್ರಾಫಿಕ್ ಪೊಲೀಸ್‌ಗೇ ಢಿಕ್ಕಿ ಹೊಡೆಯಲು ಹೋದ ಮಹಿಳೆ!

ಸಿಎಂ ಚಂದ್ರಬಾಬು ನಾಯ್ಡು ಬೇಸರ

ಶಾಲೆಯಲ್ಲೇ ನಡೆದ ಈ ದೌರ್ಜನ್ಯಕ್ಕೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಬೇಸರ ವ್ಯಕ್ತಪಡಿಸಿದ್ದಾರೆ.

ಸಂತ್ರಸ್ತ ವಿದ್ಯಾರ್ಥಿನಿಗೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದು, ತನಿಖೆಯನ್ನು ತ್ವರಿತವಾಗಿ ನಡೆಸಿ ಕಿರಾತಕ ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ಪೊಲೀಸರಿಗೆ ನಿರ್ದೇಶಿಸಿದ್ದಾರೆ. (ಏಜೆನ್ಸೀಸ್​)