Phone : ಮೊಬೈಲ್ ಫೋನ್ ನುಂಗಿ ಮಹಿಳೆಯೊಬ್ಬರು ದುರಂತ ಸಾವಿಗೀಡಾಗಿರುವ ಘಟನೆ ಆಂಧ್ರ ಪ್ರದೇಶದಲ್ಲಿ ಭಾನುವಾರ (ಜ.26) ನಡೆದಿದೆ.
ಮೃತಳನ್ನು ರಮ್ಯಾ ಸ್ಮೃತಿ (35) ಎಂದು ಗುರುತಿಸಲಾಗಿದೆ. ಈಕೆ ರಾಜಮಂಡ್ರಿಯ ಬೊಮ್ಮೂರಿನ ನಿವಾಸಿ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಳು. ಆಕೆಯನ್ನು ಶನಿವಾರ ರಾಜಮಂಡ್ರಿ ಸರ್ಕಾರಿ ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗಕ್ಕೆ ದಾಖಲಿಸಲಾಗಿತ್ತು. ಅಲ್ಲಿ ಸರಿಯಾದ ಮೇಲ್ವಿಚಾರಣೆ ಇಲ್ಲದ ಕಾರಣ, ಕೀಪ್ಯಾಡ್ ಫೋನ್ ನುಂಗಿದ್ದಳು. ವೈದ್ಯರು ತಕ್ಷಣ ಆಕೆಗೆ ಚಿಕಿತ್ಸೆ ನೀಡಿ ಫೋನ್ ತೆಗೆದುಹಾಕಿದರು.
ಫೋನ್ ತೆಗೆದುಹಾಕಿದರು ಕೂಡ ಆಕೆಯ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿತು. ರಮ್ಯಾಳ ಅನ್ನನಾಳ ಸಂಪೂರ್ಣವಾಗಿ ಹಾನಿಗೊಳಗಾದರಿಂದ ವೈದ್ಯರು ಕಾಕಿನಾಡ ಆಸ್ಪತ್ರೆಗೆ ಶಿಫಾರಸು ಮಾಡಿದರು. ಅದರಂತೆ ರಮ್ಯಾಳನ್ನು ಶನಿವಾರ ರಾತ್ರಿ ಕಾಕಿನಾಡ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಪಡೆಯುತ್ತಿದ್ದಾಗ, ಭಾನುವಾರ ಬೆಳಗಿನ ಜಾವ ನಿಧನರಾದರು.
ಸೆಲ್ ಫೋನ್ ತೆಗೆಯುವ ಪ್ರಕ್ರಿಯೆಯಲ್ಲಿ ರಾಜಮಂಡ್ರಿ ಆಸ್ಪತ್ರೆಯ ವೈದ್ಯರು ಮಾಡಿದ ತಪ್ಪಿನಿಂದಾಗಿ ತಮ್ಮ ಮಗಳು ಸಾವಿಗೀಡಾಗಿದ್ದಾಳೆ ಎಂದು ರಮ್ಯಾ ತಂದೆ ಗಂಭೀರ ಆರೋಪ ಮಾಡಿದ್ದಾರೆ. ರಮ್ಯಾಳ ಆರೋಗ್ಯ ಸ್ಥಿತಿ ಸ್ಥಿರವಾಗುವವರೆಗೂ ಅಲ್ಲಿಯೇ ಇರಿಸಲು ವಿನಂತಿಸಿದ್ದೆ. ಆದರೆ, ರಾಜಮಂಡ್ರಿ ಆಸ್ಪತ್ರೆ ಅಧಿಕಾರಿಗಳು ಬಲವಂತವಾಗಿ ಕಾಕಿನಾಡಕ್ಕೆ ಸ್ಥಳಾಂತರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜಮಂಡ್ರಿಯಿಂದ ಕಾಕಿನಾಡ ತಲುಪಲು ಎರಡು ಗಂಟೆಗಳು ಬೇಕಾಯಿತು. ಆ ಸಮಯದಲ್ಲಿ ರಮ್ಯಾ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿತು. ಇದು ಆಕೆಯ ಸಾವಿಗೆ ಕಾರಣವಾಯಿತು ಎಂದು ರಮ್ಯಾ ತಂದೆ ಆರೋಪ ಮಾಡಿದ್ದಾರೆ. (ಏಜೆನ್ಸೀಸ್)