ನ್ಯೂಸ್

17ರಂದು ಹೊರರಾಜ್ಯದ ಬಸ್​ ಕರ್ನಾಟಕಕ್ಕೆ ಎಂಟ್ರಿ: ಯಾವ್ಯಾವ ಊರಿಂದ?

ಹೈದರಾಬಾದ್​: ಲಾಕ್​ಡೌನ್​ ಹಿನ್ನೆಲೆಯಲ್ಲಿ ಎಲ್ಲಾ ಬಸ್​ ಸಂಚಾರಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಸಿಟಿ ಬಸ್​ಗಳ ಓಡಾಟಕ್ಕೆ ಹಾಗೂ ಕರ್ನಾಟಕದ ಬೇರೆ ಬೇರೆ ಊರುಗಳಿಗೆ ಹೋಗುವ ಬಸ್​ಗಳಿಗೆ ಅನುಮತಿ ಸಿಕ್ಕು ವಾರಗಳೇ ಕಳೆದಿವೆ.

ಆದರೆ ಕರೊನಾ ಸೋಂಕಿನ ಭೀತಿಯಿಂದಾಗಿ ಹೊರರಾಜ್ಯಗಳ ಬಸ್​ಗಳ ಆರಂಭವನ್ನು ಇದುವರೆಗೂ ಯಾವುದೇ ಸರ್ಕಾರ ಮಾಡಿರಲಿಲ್ಲ.

ಇದೀಗ ಮೊದಲನೆಯದಾಗಿ ಆಂಧ್ರಪ್ರದೇಶ ಸರ್ಕಾರ ಜೂನ್ 17ರಿಂದ ಕರ್ನಾಟಕಕ್ಕೆ ಅಂತರರಾಜ್ಯ ಬಸ್ ಸೇವೆಯನ್ನು ಆರಂಭಿಸುವ ತೀರ್ಮಾನ ತೆಗೆದುಕೊಂಡಿದೆ. ಮೊದಲ ಹಂತದಲ್ಲಿ 168 ಬಸ್‌ಗಳು ಸಂಚಾರ ಮಾಡುವುದಾಗಿ ಅದು ಹೇಳಿದೆ.

ಊರುಗಳ ಮಾಹಿತಿ ನೀಡಿರುವ ಎಪಿಎಸ್​ಆರ್​ಟಿಸಿ (ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ) ಕರ್ನೂಲ್, ಚಿತ್ತೂರು, ಅನಂತಪುರ ಜಿಲ್ಲೆಗಳಿಂದ ಬಸ್ ಸಂಚಾರ ಆರಂಭವಾಗಲಿದೆ ಎಂದು ಹೇಳಿದೆ.

ಒಟ್ಟು 4 ಹಂತದಲ್ಲಿ 500 ಬಸ್‌ಗಳ ಸೇವೆಯನ್ನು ಆರಂಭಿಸಲಾಗುತ್ತದೆ. ಮೊದಲ ದಿನ ಅಂದರೆ ಜೂನ್​ 17ರಂದು 168 ಬಸ್‌ಗಳು ಸಂಚಾರವನ್ನು ಆರಂಭಿಸಲಿವೆ ಎಂದಿರುವ ಸರ್ಕಾರ ಇಂದಿನಿಂದಲೇ (ಸೋಮವಾರ)ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭಿಸಿದೆ.

ಮೂರು ಜಿಲ್ಲೆಗಳಿಂದ ಸಂಚಾರ ನಡೆಸುವ ಬಸ್‌ಗಳಿಗೆ ಪ್ರಯಾಣಿಕರು ಹೇಗೆ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ಬಳಿಕ ನೆಲ್ಲೂರು, ಕಡಪ, ಪ್ರಕಾಶಂ, ಕೃಷ್ಣ, ಗಂಟೂರು, ಪಶ್ಚಿಮ ಗೋದಾವರಿಯಿಂದ ಬಸ್ ಸಂಚಾರ ಆರಂಭಿಸಲಾಗುತ್ತದೆ ಎಂಬ ಮಾಹಿತಿ ನೀಡಲಾಗಿದೆ.

ಬಸ್ ಸಂಚಾರ ಆರಂಭಿಸುವಾಗ ಕೇಂದ್ರ ಗೃಹ ಇಲಾಖೆ ಹೊರಡಿಸಿರುವ ಮಾರ್ಗಸೂಚಿಯನ್ನು ಪಾಲನೆ ಮಾಡಲಾಗುತ್ತದೆ. ಕರ್ನಾಟಕದಿಂದ ರಾಜ್ಯಕ್ಕೆ ಆಗಮಿಸುವ ಶೇ 5ರಷ್ಟು ಪ್ರಯಾಣಿಕರ ಸ್ಯಾಂಪಲ್ ಸಂಗ್ರಹಣೆ ಮಾಡಿ ಕರೊನಾ ವೈರಸ್​ ಪರೀಕ್ಷೆ ನಡೆಸಲಾಗುತ್ತದೆ. ಬಸ್ ಹತ್ತುವಾಗ ಮತ್ತು ಇಳಿಯುವಾಗ ಸ್ಯಾನಿಟೈಸರ್‌ನಿಂದ ಕೈಗಳನ್ನು ಸ್ವಚ್ಛಗೊಳಿಸಲಾಗುತ್ತದೆ. ಸಾಮಾಜಿಕ ಅಂತರವನ್ನು ಕಾಪಾಡಲು ಬಸ್‌ಗಳ ಸೀಟುಗಳನ್ನು ಬದಲಾವಣೆ ಮಾಡಲಾಗಿದೆ, ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. (ಏಜೆನ್ಸೀಸ್​)