ವಿಜಯವಾಡ: ಗೂಡ್ಸ್ ರೈಲಿಗೆ ಸಿಲುಕಿ ಒಂದೇ ಕುಟುಂಬದ ಮೂವರು ಸದಸ್ಯರು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಆಂಧ್ರ ಪ್ರದೇಶದ ( Andhra Couple ) ಕಡಪ ರೈಲು ನಿಲ್ದಾಣದಲ್ಲಿ ಭಾನುವಾರ (ಅ.13) ನಡೆದಿದೆ.
ಮೃತರನ್ನು ಶ್ರೀರಾಮುಲು (35), ಸಿರಿಶಾ (30) ಮತ್ತು ಅವರ ಒಂದೂವರೆ ವರ್ಷದ ಮಗು ರಿತ್ವಿಕ್ ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಶ್ರೀರಾಮುಲು ಕುಟುಂಬ (Andhra Couple), ರೈಲು ಹಳಿಯ ಮೇಲೆ ನಿಂತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದ ಪರಿಣಾಮ ದೇಹ ಛಿದ್ರ ಛಿದ್ರಗೊಂಡು ರೈಲು ಹೇಳಿಗಳ ಮೇಲೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹದ ಭಾಗಗಳನ್ನು ಆರ್ಎಂಎಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸ್ಥಳಾಂತರಿಸಿದರು.
ಪ್ರಾಥಮಿಕ ತನಿಖೆಯ ಪ್ರಕಾರ, ಭಾನುವಾರ ಸಂಜೆ ದಂಪತಿ ನಡುವೆ ತೀವ್ರ ಜಗಳ ನಡೆದಿದೆ. ಬಳಿಕ ಶ್ರೀರಾಮುಲು ಅವರ ಅಜ್ಜಿ ಮಧ್ಯಪ್ರವೇಶಿಸಿ ಅವರಿಬ್ಬರಿಗೂ ಹಿಗ್ಗಾಮುಗ್ಗಾ ಬೈದರು. ಇದೇ ಕೋಪದಿಂದ ದಂಪತಿ ತಮ್ಮ ಮಗುವಿನೊಂದಿಗೆ ಮನೆಯಿಂದ ಹೊರಟು ಹೋದರು. ಇದಾದ ಬಳಿಕ ರೈಲಿಗೆ ಸಿಲುಕಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅಪ್ಪ-ಅಮ್ಮನ ಜಗಳಕ್ಕೆ ಮಗು ಕೂಡ ಬಲಿಯಾಗಿದೆ.
ಮತ್ತೊಂದು ದುರಂತವೆಂದರೆ, ದಂಪತಿ ಮನೆಯಿಂದ ಹೊರಟು ಹೋದ ಸ್ವಲ್ಪ ಸಮಯದಲ್ಲೇ ಶ್ರೀರಾಮುಲು ಅವರ ಅಜ್ಜಿಯು ಕೂಡ ಹೃದಯಾಘಾತದಿಂದ ಮೃತಪಟ್ಟರು ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. (ಏಜೆನ್ಸೀಸ್)