ವಿಜಯವಾಣಿ ಸಂವಾದಕ್ಕೆ ಬರಬೇಕೆಂಬ ಭಾವನೆ ಹೃದಯದಲ್ಲಿ ಬಂದಿದ್ದು, ನಾನು ಡಾ. ವಿಜಯ ಸಂಕೇಶ್ವರ ಅವರನ್ನು ಎರಡು ವರ್ಷದ ಹಿಂದೆ ಭೇಟಿ ಮಾಡಿದ್ದೆ. 2021ರ ಆಗಸ್ಟ್ನಲ್ಲಿ ನಡೆದ ಭೇಟಿ ವೇಳೆ, ‘ವಿಜಯಾನಂದ’ ಫಿಲ್ಮ್ ಮಾಡುತ್ತಿದ್ದೇವೆ, ನೀವು ನನ್ನ ತಂದೆಯ ಪಾತ್ರ ಮಾಡಬೇಕು’ ಎಂದು ಪ್ರಸ್ತಾವನೆ ಇಟ್ಟರು. ‘ಇವತ್ತು ನಾನು ಏನೇ ಆಗಿದ್ದರೂ ಅದಕ್ಕೆ ನಮ್ಮ ತಂದೆ ಬಿ.ಜಿ.ಸಂಕೇಶ್ವರ ಕಾರಣ, ಈ ಪಾತ್ರ ತಾವೇ ಮಾಡಬೇಕು’ ಎಂದು ಕೋರಿದ್ದರು. ಬಳಿಕ ಸಂಬಂಧಪಟ್ಟ ಬರವಣಿಗೆ, ಪುಸ್ತಕ ಕಳಿಸಿಕೊಟ್ಟು ಇದನ್ನು ಓದಿಕೊಂಡರೆ ನಮಗೆ ಸಂತೋಷ ಆಗುತ್ತದೆ ಎಂದರು. ಒಪ್ಪಿಕೊಂಡೆ. ಬಳಿಕ 15 ದಿನಗಳು ಅವರು ಹಾಗೂ ಅವರ ಮಗ ಡಾ. ಆನಂದ್ ಸಂಕೇಶ್ವರ ಜತೆ ಇಂಟರ್ಯಾಕ್ಷನ್ ಇತ್ತು. ಚಿತ್ರ ಒಪ್ಪಿದ ಬಳಿಕ ಮೊದಲ ಪ್ಲಾ್ಯನ್ ಇದ್ದಿದ್ದು ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ಮಾಡಬೇಕೆಂದು. ಆದರೆ, ಇದು ಸಂಕೇಶ್ವರರ ಕುರಿತ ಚಿತ್ರ, ಬಿ.ಜಿ. ಸಂಕೇಶ್ವರರ ಪಾತ್ರದ ಸಂದರ್ಭ. ಹುಬ್ಬಳ್ಳಿ ಧಾರವಾಡ, ಗದಗದಲ್ಲೇ ಮಾಡಿದರೆ ಚೆನ್ನಾಗಿರುತ್ತದೆ, ಇಲ್ಲೇ ಚಿತ್ರೀಕರಣ ಮಾಡಬೇಕೆಂದೆ. ಅವರು ಒಪ್ಪಿಕೊಂಡರು. ಅವರನ್ನು ಭೇಟಿ ಮಾಡಲು ಎರಡು ಮೂರು ಸಲ ಹೋಗಿದ್ದೆ. ಒಮ್ಮೆ ಹಬ್ಬದ ಸಂದರ್ಭದಲ್ಲಿಯೂ ಹೋಗಿದ್ದೆ. ಅವರು ತಮ್ಮ ಕಾರ್ಯಕ್ಷೇತ್ರ, ಕಚೇರಿಗೆ ಕರೆದುಕೊಂಡು ಹೋಗಿದ್ದರು. ಇದಾದ ಬಳಿಕ ಸಂಕೇಶ್ವರ ಕುಟುಂಬದ ಜತೆ ಆತ್ಮೀಯ ಸಂಬಂಧ ಏರ್ಪಟ್ಟಿತು. ಆದ್ದರಿಂದ ಸಂವಾದಕ್ಕೆ ಕರೆದಾಗ, ನನಗಾಗಿ ನಾನು ಬಂದಿದ್ದೇನೆ ಎಂದು ಹೇಳಲು ಸಂತೋಷವಾಗುತ್ತಿದೆ.
ಶಂಕರ್ನಾಗ್ ನನಗಿಂತ 6 ವರ್ಷ ಚಿಕ್ಕವನು. ನನ್ನ ಜತೆಗೆ ಬೆಳೆದವನು. ಅವನನ್ನು ಮುಂಬೈಗೆ ಕಳುಹಿಸಿದಾಗ ತಂದೆಯವರು, ‘ನೀನು ಮಾಡಿದ್ದು ನೋಡಿದ್ದೇನೆ. ಅವನನ್ನಾದರೂ ಚೆನ್ನಾಗಿ ನೋಡಿಕೊ’ ಎಂದು ಹೇಳಿದ್ದರು. ಅವನಿಗೆ ನಿರ್ದೇಶನದ ಕಡೆ ಹೆಚ್ಚು ಒಲವು. ಶಂಕರನ ಒಂದು ನಾಟಕ ನೋಡಿ ಗಿರೀಶ್ ಕಾರ್ನಾಡ್, ‘ಸಿನಿಮಾ ಮಾಡುತ್ತಿದ್ದೇವೆ ಬಾ’ ಎಂದು ಕರೆದಿದ್ದರು. ಆದರೆ, ಶಂಕರ ನನಗೆ ಕರೆ ಮಾಡಿ, ‘ಅಣ್ಣಾ, ಅವರು ಸಿನಿಮಾದಲ್ಲಿ ಒಂದು ಪಾತ್ರ ಮಾಡೋಕೆ ಹೇಳಿದ್ದಾರೆ. ನಾನು ನಿರ್ದೇಶನದ ಕಡೆಗೆ ಹೋಗಬೇಕು ಅಂತಿದ್ದೇನೆ. ನನಗಿಷ್ಟ ಇಲ್ಲ, ನಾನು ಬರಲ್ಲ ಅಂತ ಅವರಿಗೆ ಹೇಳಿಬಿಡು’ ಎಂದಿದ್ದ. ಅವನನ್ನು ಒಪ್ಪಿಸಲು ಹರಸಾಹಸ ಪಡಬೇಕಾಯಿತು.
ಶಂಕರ್ನಾಗ್ ಓದು ಮುಗಿಸಿದಾಗ ಅವರ ಸ್ನೇಹಿತರೆಲ್ಲ ವಿದೇಶಕ್ಕೆ ಹೋಗುತ್ತಿದ್ದರು, ಶಂಕರ್ ‘ನನ್ನನ್ನು ವಿದೇಶಕ್ಕೆ ಕಳುಹಿಸು. ಅಲ್ಲಿಗೆ ಹೋಗಿ ದುಡಿದು ನಿನಗೆ ಹಣ ವಾಪಸ್ಸು ಕೊಡುತ್ತೇನೆ’ ಎನ್ನುತ್ತಿದ್ದ. ಆಮೇಲೆ ನಮ್ಮ ನಾಡಿನಲ್ಲೇ ಏನಾದರೂ ಸಾಧನೆ ಮಾಡಲು ಒಪ್ಪಿಸಿದೆ. ಮೊದಲು ಒಂದು ಸಿನಿಮಾ ಮಾಡಲು ಹೇಳಿದೆ. ಅವನ ಅದೃಷ್ಟ ಚೆನ್ನಾಗಿತ್ತು. ಮೊದಲ ಸಿನಿಮಾ ‘ಒಂದಾನೊಂದು ಕಾಲದಲ್ಲಿ’ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದ. ಇದರ ಯಶಸ್ಸಿನ ಬೆನ್ನಲ್ಲೇ ಒಂದಾದಮೇಲೆ ಒಂದರಂತೆ ಒಳ್ಳೊಳ್ಳೆಯ ಸಿನಿಮಾಗಳನ್ನು ಮಾಡಿದ. ‘ಸೀತಾರಾಮು’ ಸೇರಿ ಗಲ್ಲಾಪೆಟ್ಟಿಗೆಯಲ್ಲಿ ಹಿಟ್ ಸಿನಿಮಾ ಒಂದರ ಹಿಂದೊಂದು ಬಂದವು. ಎಲಾ ಇವನಾ, ನಾನು 10-12 ವರ್ಷಗಳಿಂದ ಅಲೆದಾಡುತ್ತಿರುವೆ, ಪ್ರಶಸ್ತಿ ಬರಲಿಲ್ಲ, ತಕ್ಷಣಕ್ಕೆ ಹಿಟ್ ಆಗಲಿಲ್ಲವಲ್ಲ ಎಂದು ಯೋಚಿಸಿದೆ. ಶಂಕರನನ್ನು ಕರೆದು ಅಲ್ಲ, ವಿದೇಶಕ್ಕೆ ಹೋಗ್ತೀನಿ ಅಂದಿದ್ದೆ. ಹಣ ಕೊಡಲಾ? ಹೋಗ್ತೀಯಾ? ಎಂದು ಕೇಳಿದೆ. ಯಾಕಣ್ಣ? ಎಂದು ಶಂಕರ ಮರುಪ್ರಶ್ನಿಸಿದ್ದ.
‘ಒಂದು ದಿನ ಶಂಕರ, ಅಣ್ಣಾ, ನಟನೆಯ ಜತೆಗೆ ನಾವು ನಮ್ಮದೇ ಪ್ರೊಡಕ್ಷನ್ ಶುರು ಮಾಡೋಣ ಎಂದ. ಅವೆಲ್ಲ ನಮಗಾಗಲ್ಲ ಎಂದು ಎಷ್ಟು ಹೇಳಿದರೂ ಕೇಳಲಿಲ್ಲ. ಹಾಗೇ ಶುರುವಾದ ಸಿನಿಮಾ ‘ಮಿಂಚಿನ ಓಟ’. ಬಿಡುಗಡೆಯಾಗಿ ಮೂರು ದಿನ ಸಖತ್ತಾಗಿ ಓಡಿತು, ಅದರೆ ಆಮೇಲೆ ಜನರೇ ಇಲ್ಲ. ಆದರೆ, ಆ ಚಿತ್ರಕ್ಕೆ ಏಳು ಪ್ರಶಸ್ತಿಗಳು ಬಂದವು. ಅದಾದಮೇಲೆೆ ‘ಆಕ್ಸಿಡೆಂಟ್’ಚಿತ್ರ ಮಾಡಿದೆವು. ಆ ಬಳಿಕ ಶಂಕರ, ಅಣ್ಣಾ, ಇವೆಲ್ಲ ಯಾಕೋ ಕೈ ಹಿಡಿಯುತ್ತಿಲ್ಲ. ಕಮರ್ಷಿಯಲ್ ಸಿನಿಮಾ ಮಾಡೋಣ ಎಂದ. ‘ಜನ್ಮ ಜನ್ಮದ ಅನುಬಂಧ’, ‘ಗೀತಾ’, ಹೀಗೆ ಕೆಲವು ಸಿನಿಮಾಗಳನ್ನು ಮಾಡಿದೆವು. ಆದರೆ, ನಿರ್ಮಾಣ ನಮಗೆ ಕೈಗೂಡಿ ಬರುತ್ತಿರಲಿಲ್ಲ. ಹೀಗಾಗಿ ಅವನಿಗೆ, ಪ್ರೊಡಕ್ಷನ್ ಸಾಕು, ನಾವು ಅಭಿನಯ ಮಾಡಿಕೊಂಡೇ ಇರೋಣ ಎಂದೆ. ‘ಇನ್ನೊಂದು ಪ್ರಾಜೆಕ್ಟ್ ಮಾಡೋಣ’ ಎಂದು ಶಂಕರ ಹೇಳಿದಾಗ ಅವನಿಗೆ ‘ಮಾಲ್ಗುಡಿ ಡೇಸ್’ ಬಗ್ಗೆ ಹೇಳಿದೆ. ಆರ್.ಕೆ. ನಾರಾಯಣ್ರ ಕಥೆಯಿದೆ, ಅದಕ್ಕೆ ತಕ್ಕ ಕಾರ್ಟೂನ್ ಇವೆ, ನೀನು ನಿರ್ದೇಶನದಲ್ಲಿ ಒಂದು ಧಾರಾವಾಹಿ ಮಾಡು ಎಂದೆ. ಅದು ಅವನಿಗೆ ಹೆಸರು ನೀಡಿತು. ಆದರೆ ದೈವದ ಆಟ ಬೇರೆಯೇ ಇತ್ತು.
ಜಿ.ವಿ. ಅಯ್ಯರ್ ಅವರ ‘ಹಂಸಗೀತೆ’ಯಲ್ಲಿ ನನ್ನ ಅಭಿನಯ ನೋಡಿ ಮಲಯಾಳಂನಲ್ಲಿ ‘ಸ್ವಾತಿ ತಿರುನಾಳ್‘ ಚಿತ್ರಕ್ಕೆ ಆಹ್ವಾನ ಬಂತು. ಸ್ವಾತಿ ತಿರುನಾಳ್ ತಿರುವನಂತಪುರದ ಪ್ರಸಿದ್ಧ ರಾಜ ಹಾಗೂ ಕರ್ನಾಟಕ ಮತ್ತು ಹಿಂದುಸ್ಥಾನಿ ಶೈಲಿಯಲ್ಲಿ 400ಕ್ಕೂ ಹೆಚ್ಚು ಸಂಗೀತ ಕೃತಿಗಳನ್ನು ರಚಿಸಿದ ಸಂತಕವಿ. ಈ ಚಿತ್ರದ ಬಿಡುಗಡೆ ಸಂದರ್ಭದಲ್ಲಿ ತಿರುವನಂತಪುರದಲ್ಲಿ ಆನೆ ಮೇಲೆ ಸ್ವಾತಿ ತಿರುನಾಳ್ ಮೆರವಣಿಗೆಗೆ ನಿರ್ವಪಕರು ಪ್ಲಾ್ಯನ್ ಮಾಡಿದ್ದರು. ಆನೆ ಮೇಲೆ ಅನಂತಪದ್ಮನಾಭ ದೇವರ ಫೋಟೋ, ಸ್ವಾತಿ ತಿರುನಾಳ್ ಫೋಟೊ ಮತ್ತು ಸ್ವಾತಿ ತಿರುನಾಳ್ ಪಾತ್ರಧಾರಿಯಾಗಿ ನನ್ನ ಮೆರವಣಿಗೆಗೆ ಪ್ಲಾ್ಯನ್ ಮಾಡಿದ್ದರು. ಆದರೆ, ಆನೆ ಮೇಲೆ ಕುಳಿತುಕೊಳ್ಳಲು ನಾನು ಒಪ್ಪಲಿಲ್ಲ. ನಾನು ಶ್ರದ್ಧೆಯಿಂದ ಪಾತ್ರ ನಿರ್ವಹಿಸಿದ್ದೇನೆ. ಆದರೆ, ಮೆರವಣಿಗೆ ನನಗೆ ಇಷ್ಟವಿಲ್ಲ ಎಂದೆ. ಆ ಚಿತ್ರ ಬಿಡುಗಡೆಗೊಂಡ ಬಳಿಕ ಕೇರಳದಲ್ಲಿ ಎಲ್ಲರೂ ನನ್ನನ್ನು ಅನಂತ್ ನಾಗ್ ಬದಲು ಸ್ವಾತಿ ತಿರುನಾಳ್ ಎಂದೇ ಗುರುತಿಸುತ್ತಿದ್ದರು, ಭಕ್ತಿಭಾವದಿಂದ ಗೌರವಿಸುತ್ತಿದ್ದರು. ಇದೇ ಕಾರಣಕ್ಕಾಗಿ ನಾನು ಮಲಯಾಳಂನಲ್ಲಿ ಮುಂದೆ ಯಾವುದೇ ಚಿತ್ರ ಒಪ್ಪಿಕೊಳ್ಳಲಿಲ್ಲ. ಹೊಸ ಪಾತ್ರಗಳನ್ನು ಒಪ್ಪಿಕೊಂಡಾಗ, ಸ್ವಾತಿ ತಿರುನಾಳ್ ಭಾವನೆ ಮಾಸುವುದು ಬೇಡ ಎಂಬುದು ನನ್ನ ಉದ್ದೇಶವಾಗಿತ್ತು.
ಕೆಜಿಎಫ್-2 ಮಾತ್ರವಲ್ಲ, ಯಾವುದೇ ಚಿತ್ರದ ಮುಂದು ವರಿದ ಭಾಗದಲ್ಲಿ ನಾನು ನಟಿಸುವುದಿಲ್ಲ. ಒಮ್ಮೆ ಒಂದು ಚಿತ್ರ ಮಾಡಿದ ಮೇಲೆ ಅಲ್ಲಿ ಆ ಪಾತ್ರವನ್ನು ಸಮಗ್ರವಾಗಿ ಅನುಭವಿಸಿ ಅಭಿನಯಿಸಿರುತ್ತೇವೆ. ಮತ್ತೆ ಮತ್ತೆ ಅದನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ. ಚಿತ್ರರಂಗ ಕ್ರಿಯಾಶೀಲ ಮಾಧ್ಯಮ. ಅಲ್ಲಿ ಹೊಸಹೊಸದನ್ನು ಸೃಷ್ಟಿಸಬೇಕು. ಇದು ನನಗೆ ನಾನು ಹಾಕಿಕೊಂಡ ನಿಯಮವೂ ಹೌದು. ನಾನು ಕೆಜಿಎಫ್-2 ಮಾಡುವುದಿಲ್ಲ ಎಂದಾಗ ನೂರಾರು ಜನ ಯುವಕರು ನೀವು ಅಭಿನಯಿಸಲೇಬೇಕು. ಇಲ್ಲವಾದರೆ ನಿಮ್ಮ ಮನೆಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಪಟ್ಟು ಹಿಡಿದರು. ಆದರೆ, ನಾನು ಕೆಜಿಎಫ್ ಮಾತ್ರವಲ್ಲ, ಉದ್ಭವ, ಮುಂಗಾರು ಮಳೆ ಸಹಿತ ಯಾವ ಭಾಗ-2ರಲ್ಲ್ಲೂ ನಟಿಸಿಲ್ಲ. ನನ್ನ ಈ ನಿರ್ಧಾರ ಅಚಲ.
ಧರ್ಮದ ಛಾಯೆ ಇರುವಂತಹ ಪಾತ್ರಗಳಿದ್ದರೆ ಒಂಥರಾ ಆನಂದ. ಇತ್ತೀಚೆಗೆ ಅನೇಕ ಪಾತ್ರ ಮಾಡಿದ್ದೇನೆ. ಪಾತ್ರಗಳಿಂದ ಅನೇಕ ಸಂಗತಿಯನ್ನೂ ಕಲಿತಿದ್ದೇನೆ. ಐದು ರೀತಿಯ ಮುಕ್ತಿಗಳಾದ ಸಾಯುಜ್ಯ, ಸಾರೂಪ್ಯ, ಸಾಲೋಕ್ಯ, ಸ್ರಾಷ್ಟಿ, ಸಾಮೀಪ್ಯ ಬಗ್ಗೆಯೂ ಪಾತ್ರಗಳಿಂದಲೇ ಕಲಿತಿದ್ದು. ಇತ್ತೀಚಿನ ಪಾತ್ರಗಳಲ್ಲಿ ವಿಜಯಾನಂದ ಚಿತ್ರದ ವಿಜಯ ಸಂಕೇಶ್ವರರ ತಂದೆ ಬಿ.ಜಿ.ಸಂಕೇಶ್ವರ್ ಪಾತ್ರ ಬಹಳ ಹಿಡಿಸಿತು. ಆತ ಬಹಳ ಧರ್ಮ ಪ್ರವರ್ತಕನಾದವ. ಪ್ರಾಮಾಣಿಕತನ, ಕರ್ತವ್ಯ ನಿಷ್ಠೆ, ಹೀಗೆ ಅನೇಕ ಸಂಗತಿ ಒಳಗೊಂಡಿದೆ. ಅವರು ಧಾರ್ವಿುಕವಾಗಿ ವೀರಶೈವ ಲಿಂಗಾಯತ. ನಾವು ಸಾರಸ್ವತರು ಶೈವರೇ, ಶಂಕರ, ನಾರಾಯಣ ಇಬ್ಬರನ್ನೂ ಪೂಜಿಸುತ್ತೇವೆ. ಬಿ.ಜಿ.ಸಂಕೇಶ್ವರ್ ಪಾತ್ರದಲ್ಲಿ ಲಿಂಗ ಪೂಜೆ ಮಾಡಿ ಒಂದು ತರಹ ಆನಂದ ಆಯಿತು. ಹಂಸ ಗೀತೆ ಮಾಡುವಾಗಲೂ ಆನಂದ ಸಿಕ್ಕಿತ್ತು. ಅಂತಹ ಪಾತ್ರಗಳೇ ಇಂದು ವಿರಳ.
ನಾನು ಕರಾವಳಿಯಿಂದ ಬಂದವನು. ತಾಯಿ ಆನಂದಿ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದವರು. ತಂದೆ ಸದಾನಂದ ನಾಗರಕಟ್ಟೆ ಕುಮಟಾದಲ್ಲಿ ಬೆಳೆದವರು. ಅವರ ಮೂವರು ಮಕ್ಕಳಲ್ಲಿ ನಾನು ಮಧ್ಯದವನು. ಅಕ್ಕ ಇದ್ದಾಳೆ, ತಮ್ಮ ಶಂಕರನ ಬಗ್ಗೆ ಎಲ್ಲರಿಗೂ ಗೊತ್ತು. ನಾನು ಸಾರಸ್ವತ ಸಮಾಜದವನು. ರಾಮದಾಸರು ಕಾಸರಗೋಡಿನಲ್ಲಿ ಸ್ಥಾಪಿಸಿದ್ದ ಆನಂದಾಶ್ರಮದಲ್ಲಿ ತಂದೆ ಸೇವೆಗಿದ್ದರು. ಹೀಗಾಗಿ ಮೊದಲ ಆರು ವರ್ಷ ಆಶ್ರಮದಲ್ಲಿದ್ದೆ. ಮುಂದೆ ತಂದೆಯವರು ಶಿರಾಡಿ ಚಿತ್ರಾಪುರ ಮಠಕ್ಕೆ ತೆರಳಿದರು. ನಂತರದ ಆರು ವರ್ಷ ಮಠದಲ್ಲಿ. ಹೀಗಾಗಿ ಮೊದಲ 12 ವರ್ಷ ಆಶ್ರಮ, ಮಠದ ವಾತಾವರಣದಲ್ಲಿಯೇ ಇದ್ದೆ. ಖುಷಿಯ ವಾತಾವರಣ, ಶಾಲೆ, ಇತರ ವಿದ್ಯಾರ್ಥಿಗಳ ಜತೆ ಬೆರೆತಿದ್ದು ಎಲ್ಲವೂ ನನ್ನ ಜೀವನದಲ್ಲಿ ಆಗಿದೆ. ಆದರೆ ಒಂದು ತರಹದ ಪ್ರೊಟೆಕ್ಟಿವ್ ಕಸ್ಟಡಿಯಲ್ಲೇ ಬೆಳೆದು ಬಂದೆ.
ಓದು ಸಾಕೆಂದು ಸೈನ್ಯಕ್ಕೆ ನೇಮಕ ಆಗೋಣ ಎಂದು ಹೋದೆ. ಅಲ್ಲಿ ಹೋದರೆ ನಿಗದಿತ ತೂಕಕ್ಕಿಂತ ಐದು ಪೌಂಡ್ ಕಡಿಮೆ ಇದ್ದೀಯ, ತೂಕ ಹೆಚ್ಚಿಸಿಕೊಂಡು ಬಾ ಎಂದು ವಾಪಸ್ ಕಳಿಸಿದರು. ಬಳಿಕ ಪೈಲೆಟ್ ಆಗಬಹುದು ಎಂದು ಹೋದರೆ ಎಡಗಣ್ಣು ಶಾರ್ಟ್ ಸೈಟ್ ಎಂದರು. ತಿರುಗಿ ಆಶ್ರಮಕ್ಕೆ ಹೋಗೋಣವೆಂದರೆ, ಓದಿದ ಮೇಲೆ ಬಾ ಎಂದಿದ್ದರು. ಹೀಗಾಗಿ ಹೋಗುವ ಸ್ಥಿತಿ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಒಬ್ಬರು ಕರೆದು, ನಾಟಕ ಮಾಡುತ್ತಿದ್ದೇನೆ, ನೋಡಲು ಚಂದ ಇದ್ದೀಯಾ, ಪಾತ್ರ ಮಾಡುತ್ತೀಯ ಎಂದರು. ರಿಹರ್ಸಲ್ ಮಾಡಿದೆ. ಅಂದು ಮೂರು ಅಂಕಗಳ ನಾಟಕ ಇರುತ್ತಿತ್ತು, ಹೀಗೆ ನಾಟಕದಲ್ಲಿ ಪ್ರವೇಶ ಸಿಕ್ಕಿತು.
ಅದು ಸರ್ಕಾರದ ಕೆಲಸವಲ್ಲ. ಪ್ರಶಸ್ತಿಗಳು ಜನರಿಂದ ಬರಬೇಕು. ಅದನ್ನು ಸರ್ಕಾರ ಮಾಡಲು ಮುಂದಾದಾಗಲೇ ಸ್ವಜನಪಕ್ಷಪಾತದ ಮಾತುಗಳು ಬರುವುದು. ಡಿಫೆನ್ಸ್ಗೆ ಮಾತ್ರ ಕೊಡಿ. ಸಾಹಿತ್ಯ, ಸಿನಿಮಾಗೆ ಬೇಡ. ಈ ವಿಷಯಗಳಿಗೆ ಸರ್ಕಾರ ಬರಲೇಬಾರದು. ರಾಷ್ಟ್ರ ರಕ್ಷಣೆ ಮಾಡುವಂತಹ ಸೇನೆಗೆ ಸರ್ಕಾರ ಪ್ರಶಸ್ತಿ ನೀಡಬೇಕು.
ನಾನು ಶಾಲೆಯಲ್ಲಿದ್ದಾಗ ಮೊದಲ ಐದು ರ್ಯಾಂಕ್ನಲ್ಲಿ ಇರುತ್ತಿದ್ದೆ. ಆಶ್ರಮದಲ್ಲಿ ಭಜನೆ, ದೇವರನಾಮ, ರಾಮ ನಾಮ ಹೇಳುತ್ತಿದ್ದೆ. 6 ವರ್ಷದವನಿದ್ದಾಗಲೇ ತಬಲಾ, ಹಾರ್ವೆನಿಯಂ ಕಲಿತಿದ್ದೆ. ಮಠದಲ್ಲಿ ಗಣಪತಿ ಅಥರ್ವಶೀರ್ಷ, ರುದ್ರ ಮಂತ್ರಗಳನ್ನು ಕಲಿತಿದ್ದೆ. ಆ ವಾತಾವರಣದಲ್ಲಿ ಕಲಿಯಲೇಬೇಕಾಗಿತ್ತು. ಆ ನಂತರದಲ್ಲಿ ಮುಂಬೈಗೆ ಕಳಿಸಿದರು. ಇಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವನಿಗೆ ಅಲ್ಲಿ ಹೋದಾಗ ಇಂಗ್ಲಿಷ್ ಮಾಧ್ಯಮ ಕಷ್ಟವಾಯಿತು. ಕ್ರಮೇಣ ಎಷ್ಟು ಕಷ್ಟವಾಯಿತೆಂದರೆ ಹತ್ತನೇ ತರಗತಿಯಲ್ಲಿ ನಪಾಸಾದೆ. ವಿಷಯಗಳು ಗೊತ್ತಿದ್ದವು, ಅದನ್ನು ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಕಿಟಕಿಯಿಂದ ಆಚೆ ನೋಡುವುದೇ ಕೆಲಸ ಆಗಿತ್ತು, ತರಗತಿಯಲ್ಲಿ ಏನು ನಡೆಯುತ್ತಿದೆ ಎಂದು ಗೊತ್ತಾಗಲಿಲ್ಲ. ಹಾಗೂ ಹೀಗೂ 10ನೇ ತರಗತಿ ಬಳಿಕ 11ಕ್ಕೆ ಸೇರಿ ಪಾಸ್ ಮಾಡಿದೆ.
ಬೆಳ್ಳುಳ್ಳಿ, ಈರುಳ್ಳಿ ಘಮಲು: ಮಠದಲ್ಲಿ ಬೆಳೆದ ನಾನು ಬೆಳ್ಳುಳ್ಳಿ, ಈರುಳ್ಳಿ ಕೂಡ ತಿನ್ನುತ್ತಿರಲಿಲ್ಲ. ಮುಂಬೈನಲ್ಲಿ ಎಲ್ಲಿ ಹೋದರೂ ಅದೇ ವಾಸನೆ. ಅವರು ಪರಿಮಳ ಎನ್ನುತ್ತಿದ್ದರು. ಅದು ನನಗೆ ವಾಸನೆಯಾಗುತ್ತಿತ್ತು.
ನಮ್ಮ ತಂದೆಯ ಸ್ನೇಹಿತರು ಶಿಫಾರಸು ಮಾಡಿದ್ದರಿಂದ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತು. ಒಮ್ಮೆ ನಪಾಸ್ ಆಗಿದ್ದೀಯ, ಮತ್ತೆ ನಪಾಸಾಗಬೇಡ ಎಂದು ಮನೆಯಲ್ಲಿ ಹೇಳಿ ಕಳಿಸಿದ್ದರು. ಕಾಲೇಜಿನಲ್ಲಿ ಪ್ರವೇಶ ಪಡೆಯುವಾಗ ನಿನಗೆ ವಿಜ್ಞಾನ ವಿಷಯಗಳಲ್ಲಿ 37, 38, 39 ಅಂಕ ಬಂದಿದೆ, ಭಾಷಾ ವಿಷಯದಲ್ಲಿ ಚೆನ್ನಾಗಿ ಅಂಕ ಬಂದಿದೆ. ನಿನಗೆ ಆರ್ಟ್ಸ್ ಸೂಕ್ತ ಎಂದು ಕೆಲವರು ಸಲಹೆ ನೀಡಿದ್ದರು. ಆದರೆ, ನನಗೆ ವಿಜ್ಞಾನ ವಿಷಯ ಗೊತ್ತು, ಇಂಗ್ಲಿಷ್ನಲ್ಲಿ ಬರೆಯಲು ಬರಲ್ಲ. ಪರೀಕ್ಷೆಯಲ್ಲಿ ಅದನ್ನು ಬರೆಯುವ ಮುಂಚೆಯೇ ಪೇಪರ್ ಕಸಿದು ಕೊಳ್ಳುತ್ತಿದ್ದರು ಎಂದು ಸಮಜಾಯಿಷಿಯನ್ನೂ ನೀಡಿ ಸೈನ್ಸ್ಗೆ ಹೋದೆ. ಪ್ರಾಂಶುಪಾಲರೂ ಇವನಿಗೆ ಆರ್ಟ್್ಸಲ್ಲಿ ಆಸಕ್ತಿ ಇದ್ದಂತಿಲ್ಲ ಎಂದು ಸೈನ್ಸ್ಗೆ ಶಿಫ್ಟ್ ಮಾಡಿದರು. ಸೈನ್ಸ್ಗೆ ಹೋದರೆ ಸರ್ಕ್ಯೇಟರಿ ಸಿಸ್ಟಂ ತೋರಿಸಲು ಜಿರಲೆ ಮಲಗಿಸಿ ಕಟ್ ಮಾಡ ಬೇಕಿತ್ತು. ನನಗೆ ಅದನ್ನು ಹಿಡಿದು ಕಟ್ ಮಾಡಲು ಸಾಧ್ಯವಾಗದಾಗ ಅಕ್ಕಪಕ್ಕದವರು ಕಟ್ ಮಾಡಿಕೊಟ್ಟಿದ್ದರು. ಮುಂದಿನ ಹಂತದಲ್ಲಿ ಕಪ್ಪೆಯನ್ನು ಕಟ್ ಮಾಡಬೇಕಿತ್ತು. ಆಗಲೂ ಗೆಳೆಯರು ನೆರವಾದರು. ಮುಂದೆ ಓಪನ್ ಹಾರ್ಟ್ ಸರ್ಜರಿಗೆ ಉದಾಹರಣೆಯಾಗಿ ಚೇಳು ಕೊಟ್ಟರು. ಅದರ ಪಕ್ಕೆಲುಬು ಮುರಿಯಬೇಕಿತ್ತು. ಅಲ್ಲಿಗೆ ಇನ್ನು ಈ ಸುಳ್ಳು ಬೇಡ ಎಂದು ಸೈನ್ಸ್ಗೆ ಗುಡ್ ಬೈ ಹೇಳಿದೆ. ನಂತರ ಕಾಮರ್ಸ್ ಸೇರಿದೆ. ಕಾಮರ್ಸ್ ಕೂಡ ರುಚಿಕರ ಎನಿಸಲಿಲ್ಲ. ಎಲ್ಲಿ ಹೋದರೂ 40 ಅಂಕ ದಾಟಲೇ ಇಲ್ಲ, ತುಂಬ ಹಿಂದೆ ಬಿದ್ದೆ. ಪ್ರಾಥಮಿಕ ಹಂತದಲ್ಲಿ ಟಾಪ್ ಫೈವ್ನಲ್ಲಿ ಬರುತ್ತಿದ್ದೆ, ನಂತರ ಲಾಸ್ಟ್ ಫೈವ್ನಲ್ಲಿ ಬರತೊಡಗಿದೆ.
ನನ್ನ ತಂದೆ ನೀನು ನಿನ್ನ ಕಾಲ ಮೇಲೆ ನಿಂತು ಏನು ಮಾಡುವೆಯೋ ಮಾಡು ಎಂದಿದ್ದರು. ಆ ವೇಳೆ ಮುಂಬೈನಲ್ಲಿ ನಾಟಕ ಪ್ರದರ್ಶನ ಪ್ರವರ್ಧಮಾನದಲ್ಲಿತ್ತು. ಬ್ಯಾಂಕ್ ನೌಕರರರು ನಾಟಕ ಪ್ರದರ್ಶನ ಮಾಡುತ್ತಿದ್ದರು. ಯೂನಿಯನ್ ಬ್ಯಾಂಕ್ನವರು ನನ್ನನ್ನು ಕರೆದು ವೆಕೇಷನ್ ಜಾಬ್ ಕೊಡುತ್ತೇವೆ ಎಂದು ತಿಂಗಳಿಗೆ 600 ರೂ. ಕೊಡುತ್ತಿದ್ದರು. ನಾನು ಸರಿಯಾಗಿ ಬ್ಯಾಂಕ್ ಕೆಲಸ ಮಾಡುತ್ತಿರಲಿಲ್ಲ. ನಾಟಕದ ರಿಹರ್ಸಲ್ನಲ್ಲೇ ಸಮಯ ವ್ಯರ್ಥವಾಗುತ್ತಿತ್ತು. ಸಹೋದ್ಯೋಗಿಗಳು ನನ್ನ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಇದನ್ನು ಅರಿತು ನಾನು ಬ್ಯಾಂಕ್ಗೆ ಹೋಗುವುದನ್ನೇ ನಿಲ್ಲಿಸಿಬಿಟ್ಟೆ. ತರುವಾಯ ಸಿನಿಮಾದಲ್ಲಿ ಚಾನ್ಸ್ ಸಿಕ್ಕವು. ಆರಂಭದಲ್ಲಿ 1000 ರೂ. ಕೊಡುತ್ತಿದ್ದರು. ಹಿಂದಿ ಸಿನಿಮಾದಲ್ಲಿ 6000 ರೂ. ಸಿಗುತ್ತಿತ್ತು. ಆಗ ಅದೇ ದೊಡ್ಡ ಮೊತ್ತವಾಗಿತ್ತು.
ಕಾಲೇಜು ದಿನಗಳಲ್ಲಿ ಚೀನಾ ಜತೆಗಿನ ಯುದ್ಧದಲ್ಲಿ ಭಾರತದ ಸೋಲು, ನಂತರ ಪಾಕಿಸ್ತಾನ ಜತೆಗಿನ ಸಮರದಲ್ಲಿ ಗೆಲುವಿನ ಕುರಿತು ಕೇಳಿದ್ದೆ. ಮುಂಬೈ ರಂಗಭೂಮಿ ಜತೆಗೆ ಕನ್ನಡಚಿತ್ರರಂಗದ ನಂಟು ಕ್ರಮೇಣ ಬೆಳೆದಿತ್ತು. ವೈ.ಎನ್.ಕೆ., ಪಿ.ಲಂಕೇಶ್ ಅಂತಹವರ ಒಡನಾಟ ಇತ್ತು. 1975ರ ತುರ್ತು ಪರಿಸ್ಥಿತಿ ವೇಳೆ ಹಲವು ಸ್ವಾತಂತ್ರ್ಯ ಸೇನಾನಿಗಳು ಸೆರೆವಾಸ ಅನುಭವಿಸಿದ್ದರು. ಜೆಪಿ ಚಳವಳಿ, ಸೋಷಿಯಲಿಸ್ಟ್ ವಾದ, ತುರ್ತು ಪರಿಸ್ಥಿತಿ ಬಳಿಕ ಕಾಂಗ್ರೆಸ್ ವಿಭಜನೆ, ಸಮಾಜವಾದಿಗಳು ಒಂದೆಡೆ ಸೇರಿ ಜನತಾಪಕ್ಷ ಉದಯವಾಯಿತು. ಆ ಪಕ್ಷದ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂತು. ಅಲ್ಪಾವಧಿಯಲ್ಲಿ ಕೇಂದ್ರದ ಅಧಿಕಾರ ಕಳೆದುಕೊಂಡು ಹೋಳಾಯಿತು. ಜನಸಂಘ ಭಾರತೀಯ ಜನತಾಪಕ್ಷವಾಯಿತು. ಈ ನಡುವೆ ಪಿ.ಲಂಕೇಶ್ ಒತ್ತಾಸೆಯಂತೆ ಎಂ.ಪಿ.ಪ್ರಕಾಶ್ ನನ್ನನ್ನು ಜನತಾಪಕ್ಷಕ್ಕೆ ಸೇರಿಸಿದರು. ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಅಧಿಕಾರಕ್ಕೆ ಬಂತು, ನಂತರ ಕಳೆದುಕೊಂಡಿತು. ಜನತಾಪಕ್ಷಕ್ಕೆ ಸಲ್ಲಿಸಿದ ಸೇವೆಗಾಗಿ ನನ್ನನ್ನು ಎಂಎಲ್ಸಿ ಮಾಡಿದರು. ಪಕ್ಷ ಹೋಳಾಯಿತು, ಮತ್ತೆ ಅಧಿಕಾರಕ್ಕೆ ಬಂತು. ಒಮ್ಮೆ ಶಾಸಕನೂ ಆದೆ. ಜೆ.ಎಚ್.ಪಟೇಲ್ ಸಂಪುಟದಲ್ಲಿ ಮಂತ್ರಿಯೂ ಆದೆ. ಜನತಾದಳ ಪುನಃ ಒಡೆಯಿತು. ಜೆಡಿಎಸ್ನಿಂದ ಚಾಮರಾಜಪೇಟೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತೆ. ಈ ನಡುವೆ ನಾನೆಂದೂ ಕಂಡು ಕೇಳರಿಯದ ಜಾತಿ ಲೆಕ್ಕಾಚಾರಗಳು ರಾಚಿದವು. ರಂಗಭೂಮಿ, ಸಿನಿಮಾ ಯಾವುದೇ ಕಲಾಪ್ರಕಾರಗಳಿಗೆ ಜಾತಿ ಸೋಂಕಿಲ್ಲ. ನಗರ ಜನಜೀವನಕ್ಕೂ ಅರಿವಿದ್ದಿಲ್ಲ. ಆದರೆ ಜಾತೀಯತೆ ಸಲ್ಲದು, ದೂರವಿರಬೇಕು ಎಂದು ಪದೇ ಪದೆ ಹೇಳುತ್ತಿದ್ದ ರಾಜಕೀಯ ರಂಗದಲ್ಲೇ ಜಾತಿವಾದ ದಟ್ಟವಾಗಿತ್ತು. ಹೇಳಿ ಕೇಳಿ ನಾನು ಬ್ರಾಹ್ಮಣ, ಒಟ್ಟು ಜನಸಂಖ್ಯೆಯಲ್ಲಿ ಶೇ.3ರಷ್ಟಿರುವ ಈ ಸಮುದಾಯ ಏನು ಮಾಡಲು ಸಾಧ್ಯ? ಹೀಗಾಗಿ ರಾಜಕೀಯ ಒಗ್ಗದು ಎಂದು ಅರ್ಥವಾದ ನಂತರ ಆ ಕ್ಷೇತ್ರದಿಂದಲೇ ದೂರ ಸರಿದಬಿಟ್ಟೆ. ಅಷ್ಟಕ್ಕೂ ಅಧಿಕಾರ, ಜಾತಿಗ್ರಸ್ತ ರಾಜಕಾರಣ ಆಗಿಬರಲಿಲ್ಲ, ನಾನಾಗಿಯೇ ಹಿಂದಕ್ಕೆ ಸರಿದು ಬಿಟ್ಟೆ.