ಟಾಟಾ ಕಂಪನಿ ಭಾರತದ ಇತಿಹಾಸದಲ್ಲಿ ಉದ್ಯಮ, ದಕ್ಷತೆ ಮತ್ತು ಉದ್ಯೋಗಾವಕಾಶದ ವಿಷಯದಲ್ಲಿ ಹೊಸ ಶಕೆ ಆರಂಭಿಸಿತು. ಜೆಮ್ೆಡ್ಜಿ ಟಾಟಾ ಅವರಿಂದ ಆರಂಭಗೊಂಡ ಈ ಹೊಸತನದ ಹರಿಕಾರಿಕೆಯನ್ನು ಸಮರ್ಥವಾಗಿ ಮುನ್ನಡೆಸಿದವರು ರತನ್ ಟಾಟಾ. ಭಾರತೀಯ ಕೈಗಾರಿಕಾ ವಲಯಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಹತ್ವದ ಸ್ಥಾನ, ಗೌರವ ತಂದುಕೊಟ್ಟವರು ರತನ್ ನವಲ್ ಟಾಟಾ. ಅವರ ಅಗಲಿಕೆ ಭಾರತೀಯರೆಲ್ಲರಿಗೂ ದುಃಖದ ವಿಷಯ.
ಭಾರತದ ಸ್ವೀವ್ ಜಾಬ್ಸ್ ಎಂದು ಪ್ರಸಿದ್ಧರಾದವರು ರತನ್ ಟಾಟಾ. ರತನ್ ಟಾಟಾ ಒಂದು ಅಪಾರ್ಟ್ವೆುಂಟಿನಲ್ಲಿ ಒಂಟಿಯಾಗಿ ತಮ್ಮ ಎರಡು ಜರ್ಮನ್ ಶೆಫರ್ಡ್ ನಾಯಿಗಳ ಜತೆ ವಾಸಿಸುತ್ತಿದ್ದರು. ಅವರ ಜೀವನ ಶೈಲಿ ಸರಳವಾಗಿತ್ತು. ಅವರಿಗೆ ಜೆಟ್ ಹಾರಿಸುವುದು ಅಂದರೆ ಇಷ್ಟವಾಗಿತ್ತು. ಅವರು ಸದಾ ಕೂರುತ್ತಿದ್ದುದು ಪೈಲಟ್ ಪಕ್ಕದಲ್ಲಿ. ಪೈಲಟ್ ಇರದಿದ್ದರೆ ಕೆಲವೊಮ್ಮೆ ತಮ್ಮ ಸ್ವಂತದ ಜೆಟ್ ವಿಮಾನವನ್ನು ಅವರೇ ಚಲಾಯಿಸುತ್ತಿದ್ದರು.
ಕರುಣೆಯ ಮನುಷ್ಯ: 26/11 ರ ಭಯೋತ್ಪಾದಕರ ಮುಂಬೈ ತಾಜ್ ಹೋಟೆಲಿನ ಮೇಲಿನ ಭಯೋತ್ಪಾದಕರ ದಾಳಿಯ ಬಳಿಕ ಸಂಕಷ್ಟಕ್ಕೆ ತುತ್ತಾದ ಟಾಟಾ ನೌಕಕರ ಮನೆಗಳಿಗೆ ರತನ್ ಟಾಟಾ ಭೇಟಿ ನೀಡಿ ಮನೆಯ ಸದಸ್ಯರಿಗೆ ಸಮಾಧಾನ ಹೇಳಿದ್ದರು. ಇದಾದ ಕೇವಲ 20 ದಿನಗಳಲ್ಲಿ ತಾಜ್ ಹೋಟೆಲಿನ ನೌಕಕರ ಸಂಕಷ್ಟ ಪರಿಹಾರಕ್ಕೆ ಒಂದು ಟ್ರಸ್ಟ್ ರಚಿಸಲಾಗಿತ್ತು. ಇದೊಂದು ಮರೆಯಲಾರದ ಘಟನೆ. ಈ ಸಮಯದಲ್ಲಿ ಹೋಟೆಲ್ ಮುಚ್ಚಿದಾಗ ಒಂದೇ ಒಂದು ದಿನ ಕೂಡ ಹಂಗಾಮಿಯಾಗಿ ಕೆಲಸ ಮಾಡಿದ್ದ ನೌಕಕರ ಯೋಗಕ್ಷೇಮವನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗಿತ್ತು.
ಬಾಲ್ಯ: ರತನ್ ಟಾಟಾ ಮೂಲತಃ ಪಾರ್ಸಿ ಧರ್ಮದ ಕುಟುಂಬದವರು. ಜನಿಸಿದ್ದು 1937ರ ಡಿ. 29ರಂದು. ಅವರ ತಂದೆ ನವಲ್ ಟಾಟಾ ಮತ್ತು ತಾಯಿ ಸೋನೂ ಟಾಟಾ. 1940ರ ದಶಕದ ಮಧ್ಯದಲ್ಲಿ ಈ ದಂಪತಿ ಬೇರೆಯಾದರು. ಈ ಸಮಯದಲ್ಲಿ ರತನ್ಗೆ 10 ವರ್ಷ, ಅವರ ಮುಂದೆ ನವಲ್ ಟಾಟಾ ಸ್ವಿಸ್ ಮೂಲದ ಸಿಮೊನ್ ಎಂಬ ಮಹಿಳೆಯನ್ನು ಮದುವೆಯಾದರು. ರತನ್ ತಮ್ಮ ಅಜ್ಜಿ ನವಾಜ್ಬಾಯಿ ಅವರ ಆರೈಕೆಯಲ್ಲಿ ಬೆಳೆದರು. ರತನ್ಗೆ ಬಾಲ್ಯದಿಂದಲೂ ಕಾರುಗಳು ಎಂದರೆ ಕ್ರೇಜ್. ಮುಂದೆ ಅವರು ಕಾರು ಉತ್ಪಾದನೆಗೆ ಇಳಿದು ಯಶಸ್ಸು ಗಳಿಸಿದ್ದಕ್ಕೂ ಇದಕ್ಕೂ ಕಾಕತಾಳೀಯ ಎನ್ನಬಹುದು. ರತನ್ ವಿದ್ಯಾಭ್ಯಾಸ ಶುರುವಾದದ್ದು ಮುಂಬೈನಲ್ಲಿರುವ ದಿ ಕೆಥೆಡ್ರಲ್ ಅಂಡ್ ಜಾನ್ ಕೊನೊನ್ ಸ್ಕೂಲಿನಲ್ಲಿ.
ವಿದ್ಯಾಭ್ಯಾಸ: ರತನ್ 1962ರಲ್ಲಿ ಕೊರ್ನೆಲ್ ವಿಶ್ವವಿದ್ಯಾಲಯದಿಂದ ಆರ್ಕಿಟೆಕ್ಚರ್ನಲ್ಲಿ ಪದವಿ ಪಡೆದರು. 1975ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಅಡ್ವಾನ್ಸ್ ್ಡ ಮ್ಯಾನೇಜ್ವೆುಂಟ್ ಪ್ರೋಗ್ರಾಂ ಪೂರೈಸಿದರು. ಕೊರ್ನೆಲ್ ವಿಶ್ವವಿದ್ಯಾಲಯದ ವ್ಯಾಸಂಗ ಮುಗಿಸಿದ ಬಳಿಕ ಸ್ವಲ್ಪ ಕಾಲ ಅಮೆರಿಕದ ಲಾಸ್ ಏಂಜಲೀಸ್ನಲ್ಲಿರುವ ಜೋನ್ಸ್ ಆಂಡ್ ಎಮೊನ್ಸ್ನಲ್ಲಿ ಕೆಲಸ ಮಾಡಿ ಅನುಭವ ಪಡೆದಿದ್ದರು.
ಅಲಂಕರಿಸಿದ ಹುದ್ದೆಗಳು: ರತನ್ ಅವರು ಟಾಟಾ ಸಮೂಹಕ್ಕೆ ಸೇರಿದ ಟಾಟಾ ಸನ್ಸ್ನ ಚೇರ್ಮನ್ ಆಗಿದ್ದವರು. 1991ರಿಂದ ಮೊದಲ್ಗೊಂಡು ಡಿ. 28, 2012ರವರೆಗೆ ಈ ಹುದ್ದೆಯಲ್ಲಿದ್ದರು. ಇದರೊಂದಿಗೆ ರತನ್ ಅವರು ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಟಾಟಾ ಪವರ್, ಟಾಟಾ ಗ್ಲೋಬಲ್ ಬಿವರೇಜಸ್, ಟಾಟಾ ಕೆಮಿಕಲ್ಸ್, ಇಂಡಿಯನ್ ಹೋಟಲ್ಸ್ ಮತ್ತು ಟಾಟಾ ಟೆಲಿ ಸರ್ವಿಸಸ್ನ ಚೇರ್ಮನ್ ಸಹ ಆಗಿದ್ದರು. ಈ ಸಮೂಹ ಸಂಸ್ಥೆಗಳ ಆದಾಯ ರತನ್ ಟಾಟಾ ಅವರ ಅಧಿಕಾರಾವಧಿಯಲ್ಲಿ ಹಲವು ಪಟ್ಟು ಬೆಳೆಯಿತು. ಅದರಲ್ಲೂ 2011-12ರಲ್ಲಿ ಒಟ್ಟು ಆದಾಯ ನೂರು ಬಿಲಿಯನ್ ಡಾಲರ್ ಮೀರಿತ್ತು. ಹಲವಾರು ದೇಶವಿದೇಶದ ಪತ್ರಿಕೆಗಳು ಅವರ ಸಾಧನೆಯನ್ನು ಕೊಂಡಾಡಿದ್ದವು.
ಭಿನ್ನ ಜವಾಬ್ದಾರಿಗಳು: ರತನ್ ಟಾಟಾ ಉದ್ಯಮದ ಜತೆಜತೆಗೆ ದೇಶದ ಒಳಹೊರಗೆ, ಭಿನ್ನ ಭಿನ್ನ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಪ್ರಧಾನಮಂತ್ರಿಯವರ ವಾಣಿಜ್ಯ ಮತ್ತು ಕೈಗಾರಿಕೆಗಳ ಕೌನ್ಸಿಲ್ನ ಸದಸ್ಯರಾಗಿ, ಹಲವಾರು ಖಾಸಗಿ ಸೇವಾ ಸಂಸ್ಥೆಗಳ ಚೇರ್ಮನ್ನರಾಗಿ ಸೇವೆ ಸಲ್ಲಿಸಿದ್ದರು. ಕೋರ್ಟ್ ಆಫ್ ಇಂಡಿಯನ್ ಇನ್ಸ್ಟಿಟ್ಯೂಟಿನ, ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ನ ಕೌನ್ಸಿಲ್ ಆಫ್ ಮ್ಯಾನೇಜ್ವೆುಂಟಿನ ಚೇರ್ಮನ್ನರಾಗಿದ್ದರು. ಅವರು ಓದಿದ ಸಂಸ್ಥೆಯಾದ ಕೊರ್ನೆಲ್ ವಿಶ್ವವಿದ್ಯಾನಿಲಯ ಮತ್ತು ಯೂನಿವರ್ಸಿಟಿ ಆಫ್ ಸದರರ್ನ್ ಕ್ಯಾಲಿಫೋರ್ನಿಯಾದ ವಿಶ್ವಸ್ಥ ಮಂಡಳಿಗಳಲ್ಲಿ ಕೂಡ ರತನ್ ಟಾಟಾ ಇದ್ದರು.
ತಪ್ಪಿದ ವಿವಾಹ ಯೋಗ: ಅಮೆರಿಕದಲ್ಲಿ ಅವರು ಒಬ್ಬ ಹುಡುಗಿಯನ್ನು ಪ್ರೇಮಿಸಿದ್ದರು. ಆಗ ಭಾರತ ಚೀನಾ ನಡುವೆ ಯುದ್ಧ ನಡೆಯುತ್ತಿತ್ತು, ಇದು ಘನಘೊರ ಸಮರ ಎಂಬ ಚಿತ್ರಣ ಅಮೆರಿಕದಲ್ಲಿ ಮೂಡಿದ್ದ ಕಾರಣದಿಂದ ‘ಆಕೆ’ ಭಾರತಕ್ಕೆ ಬರಲಿಲ್ಲ, ಬೇರೊಬ್ಬರನ್ನು ಅಮೆರಿಕೆಯಲ್ಲಿ ಆಕೆ ಮದುವೆಯಾದಳು. ಈ ನಡುವೆ, ರತನ್ ಟಾಟಾ ತನ್ನ ಅಜ್ಜಿಯ ಅನಾರೋಗ್ಯದ ಕಾರಣದಿಂದ ಭಾರತಕ್ಕೆ ಮರಳಿ ಬರಬೇಕಾಯಿತು.
ವಿಚಿತ್ರ ಬ್ರಹ್ಮಚಾರಿ: ರತನ್ ಟಾಟಾ ಹಲವ ರೊಂದಿಗೆ ಡೇಟ್ ಮಾಡಿದರು, ಆದರೆ ಅವರಿಗೆ ಕಂಕಣ ಭಾಗ್ಯ ಕೂಡಿ ಬರಲಿಲ್ಲ. ಅವರಿಗೆ ಇನ್ನೇನು ಮದುವೆ ಆಗಿಬಿಡುತ್ತದೆ ಎಂಬ ಸ್ಥಿತಿ ನಾಲ್ಕು ಸಲ ಒದಗಿತ್ತು. ಅವರು ನಾಲ್ಕು ಸಲ ಪ್ರೇಮಪಾಶಕ್ಕೆ ಸಿಲುಕಿದ್ದರು.ಅವರಿಗೆ ಮದುವೆ ಕುರಿತು ಇದ್ದಂಥ ವಿಚಿತ್ರ ಆತಂಕದ ಕಾರಣದಿಂದ ಮದುವೆ ಸಾಧ್ಯವಾಗದೇ ಹೋಯಿತು. ಇದನ್ನು ಒಂದು ಸಂದರ್ಶನದಲ್ಲಿ ಸ್ವತಃ ಟಾಟಾ ಅವರೇ ಹೇಳಿಕೊಂಡಿದ್ದರು. ಮದುವೆ ಆಗಿಬಿಟ್ಟಿದ್ದರೆ ತಮ್ಮಿಬ್ಬರ (ವಧು-ವರ) ಪರಿಸ್ಥಿತಿ ಹದಗೆಡುತ್ತಿತ್ತು ಎಂದವರು ಹೇಳಿಕೊಂಡಿದ್ದುಂಟು!
ಟಾಟಾ ನ್ಯಾನೋ ತಯಾರಿಕೆ: ಟಾಟಾ ಅವರ ಅವಧಿಯಲ್ಲಿ ಜನಸಾಮಾನ್ಯರಿಗೆ ಕಾರಿನಂಥ ದುಬಾರಿ ವಸ್ತು ತಲುಪಿಸಲೆಂದು ಟಾಟಾ ನ್ಯಾನೋ ಕಾರು ಬಂತು. ಟಾಟಾ ಮೋಟಾರ್ಸ್ ಉತ್ಪನ್ನವಾದ ಇದು ನಗರ ಪ್ರದೇಶಗಳಿಗೆ ಹೇಳಿ ಮಾಡಿಸಿದ ಕಾರು. 2008ರಲ್ಲಿ ಬಂದ ಈ ಕಾರಿನ ಮೊದಲ ಬೆಲೆ ರೂ. ಒಂದು ಲಕ್ಷ ಇತ್ತು. ನಂತರ ಇದರ ದರ ಏರಿಕೆ ಆಯಿತು. ಬೈಕು, ಸ್ಕೂಟರ್ ಓಡಿಸುವ ಭಾರತೀಯ ಮಧ್ಯಮವರ್ಗದ ಕಾರು ಕೊಳ್ಳುವ ಆಶಯ ಈಡೇರಿಸಿದ ಕೀರ್ತಿ ರತನ್ ಟಾಟಾ ಅವರಿಗೆ ಸಲ್ಲುತ್ತದೆ. ಆದರೆ ಕ್ರಮೇಣ ಆ ಚಿಕ್ಕ ಕಾರಿನ ಕ್ರೇಜ್ ಭಾರತೀಯರಲ್ಲಿ ಕಡಿಮೆಯಾಯಿತು.
ಸಾಧನೆಯ ಪರ್ವ: ರತನ್ ಟಾಟಾ ಅವರು ತಮ್ಮ ಅಧಿಕಾರಾವಧಿಯಲ್ಲಿ ಟಾಟಾ ಕಂಪನಿಗಳ ಮುಖ್ಯಸ್ಥರಾಗಿ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಕೆಲವು ಇಂತಿವೆ.
2000ರಲ್ಲಿ ಟಾಟಾ ಕಂಪನಿಯಾದ ಟಾಟಾ ಟೀ (ಮುಂದೆ ಅದೇ ಟಾಟಾ ಗ್ಲೋಬಲ್ ಬಿವರೇಜಸ್) ಕಂಪನಿಯು ಚಹಾ ಉತ್ಪನ್ನದ ತಯಾರಿಕೆ ಮತ್ತು ಮಾರಾಟದಲ್ಲಿ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿರುವ ಟೆಟ್ಲೆ ಗ್ರೂಪನ್ನು ತನ್ನಲ್ಲಿ ಸೇರಿಸಿಕೊಂಡಿತು. ಚಹಾ ಉತ್ಪನ್ನಗಳಲ್ಲಿ ಅದು ಈ ರೀತಿ ದಾಪುಗಾಲಿಟ್ಟಿತು. 2001ರಲ್ಲಿ ಟಾಟಾ ಎಐಜಿ ಅಂದರೆ ಟಾಟಾ ಸಮೂಹ ಮತ್ತು ಅಮೆರಿಕನ್ ಇಂಟರ್ನ್ಯಾಷನಲ್ ಗ್ರೂಪ್ ಇಂಕ್ (ಎಐಜಿ) ಇವೆರಡರ ನಡುವೆ ಜಾಯಿಂಟ್ ವೆಂಚರ್ ಏರ್ಪಟ್ಟಿತು. ಈ ಮೂಲಕ ರತನ್ ಟಾಟಾ ಅವರ ಕಾಲದಲ್ಲಿ ಜೀವವಿಮೆ ಕ್ಷೇತ್ರಕ್ಕೆ ಟಾಟಾ ಸಮೂಹ ಎರಡನೇ ಸಲ ಕಾಲಿಟ್ಟಿತು. ಈ ಮೊದಲು 1919ರಲ್ಲಿ ದೋಅಬ್ ಟಾಟಾ ನ್ಯೂ ಇಂಡಿಯಾ ಅಷುರೆನ್ಸ್ ಕಂಪನಿ ಆರಂಭಿಸಿದ್ದರು, ಅದು 1956ರಲ್ಲಿ ರಾಷ್ಟ್ರೀಕರಣಗೊಂಡಿತ್ತು.
2002: ವಿಎಸ್ಎನ್ಎಲ್ 1986ರಲ್ಲಿ ಆರಂಭಗೊಂಡಿದ್ದು, ಅದು ಭಾರತದ ಮೊದಲ ಪಿಎಸ್ಯುು (ಪಬ್ಲಿಕ್ ಸೆಕ್ಟರ್ ಅಂಡರ್ಟೇಕಿಂಗ್) ಎನಿಸಿಕೊಂಡಿತ್ತು. ಟಾಟಾ ಗ್ರೂಪ್ ಅದನ್ನು 2002ರಲ್ಲಿ ತೆಗೆದುಕೊಂಡಿತು. ಮುಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಎಸ್ಎನ್ಎಲ್ 2004ರಲ್ಲಿ ಲಾಂಚ್ ಆಯಿತು.ವಿಎಸ್ಎನ್ಎಲ್ ಸಂಪೂರ್ಣವಾಗಿ ಟಾಟಾ ಗ್ರೂಪ್ನ ವಶಕ್ಕೆ ಬಂದದ್ದು 2008ರ ಫೆಬ್ರವರಿ 13ರಂದು. ಅದಕ್ಕೆ ಟಾಟಾ ಕಮ್ಯುನಿಕೇಷನ್ಸ್ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಯಿತು.
2003: 1968ರಲ್ಲಿ ಟಾಟಾ ಕನ್ಸಲ್ಟೆನ್ಸಿ ಲಿಮಿಟೆಡ್, ಟಾಟಾ ಸನ್ಸ್ ಲಿಮಿಟೆಡ್ನ ಒಂದು ವಿಭಾಗವಾಗಿ ಆರಂಭಗೊಂಡಿತ್ತು. ಮುಂದೆ ಐಟಿ ವಲಯದಲ್ಲಿ ಅದು ದೊಡ್ಡ ಹೆಸರು ಮಾಡಿತು. ಭಾರತದಲ್ಲಿ ಐಟಿ ಕ್ರಾಂತಿ ನಡೆದಾಗ ಟಿಸಿಎಸ್ ಕೂಡ ತನ್ನ ಪಾಲು ನೀಡಿತು. 2003ರಲ್ಲಿ ಒಂದು ಬಿಲಿಯನ್ ಡಾಲರ್ ಆದಾಯ ಗಳಿಸುವ ಮೊತ್ತಮೊದಲ ಭಾರತೀಯ ಸಾಫ್ಟ್ವೇರ್ ಕಂಪನಿ ಎನಿಸಿಕೊಂಡಿತು.
2007: ಯುರೋಪಿನ ಎರಡನೇ ಅತಿ ದೊಡ್ಡ ಉಕ್ಕು ತಯಾರಿಕೆ ಮಾಡುವ ಕೋರಸ್ಆಂಗ್ಲೋ ಡಚ್ ಕಂಪನಿಯನ್ನು ಟಾಟಾ ಸ್ಟೀಲ್ ತನ್ನದಾಗಿಸಿಕೊಂಡಿತು.
2008: ರತನ್ ಟಾಟಾ ಕನಸಾದ ನ್ಯಾನೋ ಕಾರ್ ಬೀದಿಗಿಳಿಯಿತು. ಮೊದಲು ಒಂದು ಲಕ್ಷ ರೂಪಾಯಿಗಳ ಅತ್ಯಂತ ಕಡಿಮೆ ದರಕ್ಕೆ ಈ ಕಾರು ಲಭ್ಯ ಎಂದು ಹೇಳಲಾಯಿತು. ಮುಂದೆ 1.5-2 ಲಕ್ಷ ರೂಗಳಿಗೆ ನ್ಯಾನೋ ಸಾಮಾನ್ಯರ ಮನೆಗೆ ಬಂದಿತು. ಇದು ಕಾರು ಉದ್ಯಮದಲ್ಲಿ ಬಹು ದೊಡ್ಡ ಕ್ರಾಂತಿ.
2008: 2008ರಲ್ಲಿ ಫೋರ್ಡ್ ಕಂಪನಿಗೆ ಸೇರಿದ ಜಾಗ್ವರ್ ಅಂಡ್ ಲ್ಯಾಂಡ್ ರೋವರನ್ನು ಟಾಟಾ ಮೋಟಾರ್ಸ್ ತೆಗೆದುಕೊಂಡು ಜಾಗ್ವರ್ ಲ್ಯಾಂಡ್ ರೋವರ್ ಎಂಬ ನೂತನ ಕಂಪನಿ ಆರಂಭಿಸಿತು.
2012: ಪಾನೀಯಗಳ ಕ್ಷೇತ್ರದಲ್ಲಿ ರತನ್ ಟಾಟಾ ನೇತೃತ್ವದಲ್ಲಿ ವಿಸ್ತರಿಸಿಕೊಂಡ ಟಾಟಾ ಗ್ಲೋಬಲ್ ಬಿವರೇಜಸ್ ಸ್ಟಾರ್ಬಕ್ಸ್ ಜತೆ ಸೇರಿಕೊಂಡು ಟಾಟಾ ಸ್ಟಾರ್ಬಕ್ಸ್ ಎಂಬ ಹೊಸ ಹೆಸರಿನಲ್ಲಿ ಮುಂಬೈನಲ್ಲಿ ತನ್ನ ಮೊದಲ ಅಂಗಡಿ ತೆರೆಯಿತು.
ಹೀಗೆ ಪಾನೀಯ, ಕಾರು, ದೂರಸಂಪರ್ಕ, ಉಕ್ಕು, ಸಾಫ್ಟ್ವೇರ್ ಮುಂತಾದ ಹಲವು ಕ್ಷೇತ್ರಗಳಲ್ಲಿ ವಸ್ತುಗಳಿಗೆ ಉನ್ನತ ದರ್ಜೆ ಕಲ್ಪಿಸಿದರು, ಉದ್ಯೋಗಗಳನ್ನು ನೀಡಿದರು. ಗುಣಮಟ್ಟಕ್ಕೆ ಗಮನ ಇತ್ತರು. ರತನ್ ಟಾಟಾ ಭಾರತೀಯ ಉದ್ಯಮಗಳಿಗೆ ಗೌರವ, ವಿಶ್ವಾಸಾರ್ಹತೆ ತಂದುಕೊಟ್ಟರು.
ನಿವೃತ್ತಿ ಮತ್ತು ಜೀವನೋತ್ಸಾಹ: ಟಾಟಾ ಸಮೂಹಗಳ ಒಂದು ನಿಯಮವೆಂದರೆ ಚೇರ್ಮನ್ನರಾದವರು 75 ವರ್ಷಗಳ ನಂತರ ಕಡ್ಡಾಯವಾಗಿ ನಿವೃತ್ತರಾಗಬೇಕು. ಅದರ ಪ್ರಕಾರ, ರತನ್ ಅವರು 2012ರಲ್ಲಿ ನಿವೃತ್ತರಾದರು. ತಾನು ಈ ಸಮಯದಲ್ಲಿ ಇಪ್ಪತ್ತು ವರ್ಷ ಚಿಕ್ಕವನಿರಬೇಕಿತ್ತ್ತು ಎಂದಿದ್ದರು ಅವರು. ಏಕೆಂದರೆ ಜೀವನದ ಪ್ರತಿಯೊಂದು ರಂಗದಲ್ಲಿ ಭಾರತ ಹೊಸ ಉತ್ಸಾಹ ತೋರಿಸುತ್ತಿರವ ದಿನಗಳಲ್ಲಿ ತಾನು ಸಕ್ರಿಯ ರಂಗದಲ್ಲಿ ಇರಬೇಕಿತ್ತು ಎಂಬುದು ಅವರ ಆಸೆಯಾಗಿತ್ತು.
ಗೌರವ ಸನ್ಮಾನಗಳು: ಪದ್ಮವಿಭೂಷಣ (2008), ಪದ್ಮ ಭೂಷಣದ (2000) ಗರಿ ಮಾತ್ರವಲ್ಲದೆ ದೇಶದ ಹತ್ತು ಹಲವು ಪ್ರತಿಷ್ಠಿತ ಪ್ರಶಸ್ತಿಗಳು ರತನ್ ಟಾಟಾ ಅವರಿಗೆ ಸಂದಿದ್ದವು.