ಸೇಲಂ: ಐಟಿ ಉದ್ಯೋಗಿಯೊಬ್ಬರು ತನ್ನ ಪತ್ನಿ, ಮಗು ಮತ್ತು ತಂದೆಯನ್ನು ಹತ್ಯೆ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಮಂಗಳವಾರ (ಆ.22) ರಾತ್ರಿ ನಡೆದಿದೆ.
ಮೃತರನ್ನು ತಿಲಕ್ (38), ಪತ್ನಿ ಮಹೇಶ್ವರಿ (33), ಪುತ್ರ ಸಾಯಿಕೃಶ್ಚಂತ್ (6) ಮತ್ತು ತಂದೆ ಶಿವರಾಮನ್ (65) ಎಂದು ಗುರುತಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ತಿಲಕ್ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಊಟದಲ್ಲಿ ವಿಷ ಬೆರೆಸಿ, ತಂದೆ, ತಾಯಿ, ಪತ್ನಿ ಹಾಗೂ ಪುತ್ರನಿಗೆ ನೀಡಿದ ತಿಲಕ್, ನಂತರ ತಾನೂ ಸೇವಿಸಿದ್ದಾನೆ.
ತಿಲಕ್ ತಂದೆ ಶಿವರಾಮನ್ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದರು. ತಿಲಕ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿ, ವಿದೇಶದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಮಹಾಮಾರಿ ಕರೊನಾ ಪರಿಣಾಮ ತವರಿಗೆ ಮರಳಿದ ತಿಲಕ್, ಸಾಫ್ಟ್ವೇರ್ ಕಂಪನಿ ಒಂದಕ್ಕೆ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ತಿಲಕ್ ಪುತ್ರ ಸಾಯಿಕೃಶ್ಚಂತ್ಗೆ ಮಾತು ಬರುತ್ತಿರಲಿಲ್ಲ.
ಸಾಯುವ ಮುನ್ನೆ ಬೆಂಗಳೂರಿನಲ್ಲಿ ವಾಸವಿರುವ ಸಹೋದರನಿಗೆ ತಿಲಕ್, ವಾಟ್ಸ್ಆ್ಯಪ್ ಮೆಸೇಜ್ ಮಾಡಿ, ತಾನು ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದ. ಮಗುವಿನ ಆರೋಗ್ಯ ಸಮಸ್ಯೆ ಗುಣಪಡಿಸಲು ಆಗುತ್ತಿಲ್ಲ ಮತ್ತು ಸಾಲದ ಕಾಟ ತಾಳಲಾಗುತ್ತಿಲ್ಲ ಎಂದು ಮಸೇಜ್ನಲ್ಲಿ ತಿಳಿಸಿದ್ದರು.
ಇದರಿಂದ ಆಘಾತಗೊಂಡ ತಿಲಕ್ ಸಹೋದರ, ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ನಂತರ ಪೊಲೀಸರು ತಿಲಕ್ ಅವರ ನಿವಾಸಕ್ಕೆ ಹೋದಾಗ ಒಳಗಡೆಯಿಂದ ಬಾಗಿಲು ಹಾಕಲಾಗಿತ್ತು. ಬಳಿಕ ಬಾಗಿಲನ್ನು ಮುರಿದು ಒಳಗಡೆ ನುಗ್ಗಿದಾಗ ಶಿವರಾಮನ್, ಮಹೇಶ್ವರಿ, ಸಾಯಿಕೃಶ್ಚಂತ್ ಹಾಗೂ ತಿಲಕ್ ಮೃತಪಟ್ಟಿದ್ದರು.
ತಿಲಕ್ ಅವರ ತಾಯಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು. ಅವರನ್ನು ಕೂಡಲೇ ಪೊಲೀಸರು ಸಮೀಪದ ಆಸ್ಪತ್ರಗೆ ದಾಖಲಿಸಲಾಗಿದೆ. ಉಳಿದ ನಾಲ್ವರ ಮೃತದೇಹಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಸೇಲಂ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಮನೆಯಲ್ಲಿ ಡೆತ್ನೋಟ್ ಸಹ ಪತ್ತೆಯಾಗಿದೆ. ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ. ಮಗುವಿಗೆ ಮಾತನಾಡಲು ಬರದ ಕಾರಣ ತಿಲಕ್ ವೈದ್ಯಕೀಯ ವೆಚ್ಚಕ್ಕಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಅಲ್ಲದೆ, ಸಾಲ ಹಣದಿಂದ ಆನ್ ಲೈನ್ ವ್ಯವಹಾರದಲ್ಲಿ ತೊಡಗಿ ಹಣ ಕಳೆದುಕೊಂಡಿದ್ದರು. ಈ ನೋವಿನಿಂದ ಹೊರಬರಲಾರದೆ ತಿಲಕ್ ಕುಟುಂಬ ಸಾವಿನ ಹಾದಿ ಹಿಡಿದಿದ್ದಾರೆ. (ಏಜೆನ್ಸೀಸ್)