ನ್ಯೂಸ್

ಚಿನ್ನದಂಗಡಿ ಮುಂದೆ ಗುಂಡಿನ ಶಬ್ದ; ಪರಾರಿಯಾಗಲು ಯತ್ನಿಸಿದ ಆಗಂತುಕರನ್ನು ಹಿಡಿದ ಸ್ಥಳೀಯರು

ವಿಜಯಪುರ: ಭೀಮಾತೀರ ಖ್ಯಾತಿಯ ಸಿಂದಗಿ ಪಟ್ಟಣದಲ್ಲಿ ಸೋಮವಾರ ಸಂಜೆ ಗುಂಡಿನ ಮೊರೆತ ಕೇಳಿ ಬಂದಿದೆ.

ಪಟ್ಟಣದ ಶಾಂತವೀರೇಶ್ವರ ಮಠದ ಬಳಿಯ ನ್ಯೂ ಚಾಮುಂಡೇಶ್ವರಿ ಜ್ಯುವೆಲರ್ಸ್ ಲೂಟಿಗೆ ಬಂದು ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಪಲ್ಸರ್ ಬೈಕ್‌ ಮೇಲೆ ಬಂದ ಐವರ ಪೈಕಿ ಓರ್ವನಿಂದ ಈ ಕೃತ್ಯ ನಡೆದಿದ್ದು, ಒಂದು ಸುತ್ತಿನ ಗುಂಡು ಹಾರಿಸಿದ್ದಾನೆ.

ಗುಂಡಿನ ಸದ್ದು ಕೇಳಿ ಜನ ಜಮಾಯಿಸುತ್ತಿದಂತೆ ಆಗಂತುಕರು ಪರಾರಿಯಾಗಲು ಯತ್ನಿಸಿದ್ದಾರೆ. ದಾರಿ ತಿಳಿಯದೇ ಕುರಿ ಓಣಿಯಲ್ಲಿ ತಮ್ಮ ಮಾರಕಾಸ್ತ್ರಗಳ ಬ್ಯಾಗನ್ನು ರಸ್ತೆಗೆ ಎಸೆದು ಓಡುತ್ತಿದ್ದಾಗ, ಓಣಿಯಲ್ಲಿನ ಹತ್ತಾರು ಹುಡುಗರು ಧೈರ್ಯ ಮಾಡಿ ಇಬ್ಬರನ್ನು ಹಿಡಿದುಕೊಂಡಿದ್ದು, ಮೂವರು ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರು ಆರೋಪಿಗಳಿಂದ ಒಂದು ಕಂಟ್ರೀ ಪಿಸ್ತೂಲ್, ಮೂರು ಜೀವಂತ ಗುಂಡುಗಳು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದು, ತಾವು ಪುಣೆಯವರು ಎಂದು ಹೇಳಿಕೊಂಡಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತನಿಖೆ ಮುಂದುವರೆದಿದೆ.