ನ್ಯೂಸ್

ಸಮಸ್ಯೆಗೆ ತಕ್ಷಣ ಪರಿಹಾರವೇ ತುರ್ತು ಅಗತ್ಯ: ಬಜೆಟ್​ ಬಗ್ಗೆ ತಜ್ಞ ಅಭಿಪ್ರಾಯ

| ಪ್ರೊ. ಕಲಾ ಸೀತಾರಾಮನ್ ಶ್ರೀಧರ್ ಪ್ರಾಧ್ಯಾಪಕರು, ಐಸೆಕ್

ಕೇಂದ್ರ ಹಣಕಾಸು ಸಚಿವರು ನಗರಾಭಿವೃದ್ಧಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಮಿತಿಯೊಂದನ್ನು ರಚನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಈ ರೀತಿಯ ಸಮಿತಿಯನ್ನು ರಚನೆ ಮಾಡದೆ ನಗರಾಭಿವೃದ್ಧಿಗೆ ಪೂರಕವಾದ ನೀಲಿ ನಕ್ಷೆಯನ್ನು ರೂಪಿಸುವ ಕಡೆ ಗಮನ ಹರಿಸಬೇಕಾಗಿತ್ತು. ಸಮಿತಿ ರಚನೆ ಆಗುವುದು ಯಾವಾಗ, ಅದು ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುವುದು ಯಾವಾಗ?

ಪ್ರತಿ ನಗರಗಳಲ್ಲಿ ತನ್ನದೇ ಆದ ಮೂಲ ಸಮಸ್ಯೆಗಳಿವೆ. ಅವುಗಳಿಗೆ ತಕ್ಷಣದ ಪರಿಹಾರ ಕಂಡು ಹಿಡಿಯುವ ಕಡೆ ಗಮನ ಹರಿಸಿಲ್ಲ. ತಕ್ಷಣದ ಪರಿಹಾರಗಳ ಕಡೆ ಆದ್ಯತೆ ನೀಡುವುದು ತುರ್ತು ಅಗತ್ಯಗಳಾಗಿದ್ದವು. ಕೋವಿಡ್ ನಂತರ ಸಮೂಹ ಸಾರಿಗೆ ಬಳಕೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಸಮೂಹ ಸಾರಿಗೆ ಬಳಕೆ ಹೆಚ್ಚು ಮಾಡುವ ಕಾರ್ಯಕ್ರಮಗಳ ಕಡೆ ಗಮನ ನೀಡಬೇಕಾಗಿತ್ತು. ಸುಸ್ಥಿರ ನಗರ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ಅಗತ್ಯವಿತ್ತು. ಐದು ಎಕ್ಸಲೆನ್ಸ್ ಕೇಂದ್ರಗಳನ್ನು 250 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪನೆ ಮಾಡಲಾಗುತ್ತಿದೆ. ಅವುಗಳ ಮೂಲಕ ಸಂಶೋಧನೆ ಹಾಗೂ ಇತರ ಉದ್ದೇಶಕ್ಕೆ ನೆರವಾಗಬಹುದು. ನಗರೋತ್ಥಾನ, ಸ್ಮಾರ್ಟ್ ಸಿಟಿ... ಹೀಗೆ ವಿವಿಧ ಯೋಜನೆಗಳಲ್ಲಿ ಹಣದ ಕೊರತೆ ಏನೂ ಇಲ್ಲ. ಆದರೆ ಅದರ ಬಳಕೆ ಸರಿಯಾಗಿ ಆಗುತ್ತಿಲ್ಲ.

ನಗರಾಭಿವೃದ್ಧಿ ರಾಜ್ಯದ ವಿಷಯವಾಗಿದೆ. ಕೇಂದ್ರದಿಂದ ಮೂಲಸೌಕರ್ಯಗಳಾದ ರಸ್ತೆ, ಗುಣಮಟ್ಟದ ಗಾಳಿ, ಉತ್ತಮ ಕುಡಿಯುವ ನೀರು ದೊರಕುವಂತಹ ಯೋಜನೆಗಳು ಬೇಕಾಗಿತ್ತು. ಪ್ರತಿಯೊಬ್ಬರಿಗೆ ದಿನಕ್ಕೆ 135 ಲೀಟರ್ ನೀರು ಎಂಬ ಯೋಜನೆ ರೂಪುಗೊಂಡು 20 ವರ್ಷಗಳಾದವು, ಅದನ್ನು ಬದಲಾವಣೆ ಮಾಡಬೇಕಾಗಿತ್ತು. ಆ ನಿಟ್ಟಿನಲ್ಲಿ ಪ್ರಯತ್ನ ಮಾಡಿಲ್ಲ. ಗುಣಮಟ್ಟದ ಮೂಲಸೌಕರ್ಯಗಳನ್ನು ನಗರಗಳಿಗೆ ಒದಗಿಸುವ ಕಡೆ ಗಮನ ನೀಡಿಲ್ಲ. ಈಗ ಯೋಜನಾ ಆಯೋಗ, ಪಂಚ ವಾರ್ಷಿಕ ಯೋಜನೆಗಳು ಇಲ್ಲದೇ ಇರುವುದರಿಂದ ಹೆಚ್ಚಿನ ನಿರೀಕ್ಷೆಯನ್ನು ಮಾಡುವಂತಿಲ್ಲ. ನಗರ ಪ್ರದೇಶದಲ್ಲಿ ಇರುವ ಬಡವರ ಜೀವನಮಟ್ಟ ಸುಧಾರಣೆ ಮಾಡುವಂತಹ ಯಾವುದೇ ಕಾರ್ಯಕ್ರಮಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಆಯವ್ಯಯದಲ್ಲಿ ಘೋಷಣೆ ಮಾಡಿಲ್ಲ. ಕರೊನಾ ನಂತರ ನಗರದ ಬಡವರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಆಯವ್ಯಯದಲ್ಲಿ ದೂರದೃಷ್ಟಿ ಕಾಣಿಸುತ್ತಿಲ್ಲ. ಯಾವುದೇ ಸಮಸ್ಯೆಗಳಿಗೆ ತಕ್ಷಣದ ಪರಿಹಾರಗಳಿಲ್ಲ. ಒಟ್ಟಾರೆ ಹೇಳುವುದಾದರೆ ಹೈ ಅಂಡ್ ಡ್ರೖೆ (ಏನೂ ಮಾಡಲಾಗದ) ಬಜೆಟ್​ನಂತೆ ಕಂಡು ಬರುತ್ತಿದೆ.