ಹಾಸನ: ಆನ್ಲೈನ್ನಲ್ಲಿ ಬುಕ್ ಮಾಡಿದ್ದ ಮೊಬೈಲ್ ಖರೀದಿಗೆ ಹಣ ಇಲ್ಲವೆಂದು ಡೆಲಿವರಿ ಬಾಯ್ನನ್ನೇ ಯುವಕನೊಬ್ಬ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹೇಮಂತ್ ನಾಯ್ಕ(23) ಎಂಬಾತ ಕೊಲೆಯಾದ ವ್ಯಕ್ತಿ. ಹೇಮಂತ್ ದತ್ತಾ(20) ಎಂಬಾತ ಕೊಲೆ ಮಾಡಿದ್ದು, ಕಳೆದ ಫೆ.7ರಂದು ಅರಸೀಕೆರೆ ನಗರದಲ್ಲಿ ಈ ಘಟನೆ ನಡೆದಿದೆ.
ಅರಸೀಕೆರೆ ತಾಲೂಕಿನ ಹಳೆಕಲ್ಲನಾಯಕನಹಳ್ಳಿಯ ಇ-ಕಾರ್ಟ್ ಎಕ್ಸಪ್ರೆಸ್ನಲ್ಲಿ ಹೇಮಂತ್ ನಾಯ್ಕ ಎಂಬಾತ ಕೆಲಸ ಮಾಡುತ್ತಿದ್ದ. ಆರೋಪಿ ಹೇಮಂತ್ ದತ್ತಾ, ಸೆಕೆಂಡ್ ಹ್ಯಾಂಡ್ ಐಫೋನ್ ಮೊಬೈಲ್ ಬುಕ್ ಮಾಡಿದ್ದ. ಅದರಂತೆ ಡೆಲಿವರಿ ಬಾಯ್ ಹೇಮಂತ್ ನಾಯ್ಕ್ ಪಾರ್ಸೆಲ್ ನೀಡಲು ಬಂದಿದ್ದಾನೆ. ಈ ವೇಳೆ ಹಣ ತರುತ್ತೇನೆ, ಇಲ್ಲೆ ಕುಳಿತಿರಿ ಎಂದು ಆರೋಪಿ ಮನೆ ಒಳ ಹೋಗಿದ್ದಾನೆ.
ಮನೆಯ ಹೊರಭಾಗದಲ್ಲಿ ಕುಳಿತಿದ್ದ ಹೇಮಂತ್ ನಾಯ್ಕ್ ಮೇಲೆ ಆರೋಪಿ ಹಿಂದಿನಿಂದ ಬಂದು ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಘಟನೆಯಿಂದ ತೀವ್ರ ರಕ್ತಸ್ತಾವಕ್ಕೊಳಗಾಗಿ ಡೆಲಿವರಿ ಬಾಯ್ ಸ್ಥಳದಲ್ಲೇ ಸಾವನ್ನಪ್ಪಿದ್ದ. ಬಳಿಕ ಆರೋಪಿ ಹೇಮಂತ್ ಮೂರು ದಿನ ಮೃತದೇಹವನ್ನು ಮನೆಯಲ್ಲೇ ಇಟ್ಟಕೊಂಡಿದ್ದಾನೆ.
ಫೆ.11 ರಂದು ಮೃತದೇಹವನ್ನು ಗೋಣಿ ಚೀಲದಲ್ಲಿ ತುಂಬಿಕೊಂಡು ತನ್ನ ಸ್ಕೂಟರ್‌ನಲ್ಲಿ ಇರಿಸಿ, ಹೊರಹಾಕಲು ತೆರಳಿದ್ದಾನೆ. ಅರಸೀಕೆರೆ ನಗರದ ಹೊರ ವಲಯದ ಅಂಚೆ ಕೊಪ್ಪಲು ರೈಲ್ವೆ ಬ್ರಿಡ್ಜ್ ಬಳಿ ಪೆಟ್ರೋಲ್ ಸುರಿದು ಮೃತ ದೇಹ ಸುಟ್ಟಿದ್ದಾನೆ. ಮೃತ ದೇಹವನ್ನು ಸ್ಕೂಟಿಯಲ್ಲಿ ಹೊತ್ತು ಸಾಗುವ ಮತ್ತು ಸುಡಲು ಪೆಟ್ರೋಲ್ ಖರೀದಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಎಳೆ ವಯಸ್ಸಿನ ಕಿರಾತಕನ ಕೃತ್ಯಕ್ಕೆ ಇದೀಗ ಅರಸೀಕೆರೆಯ ಜನ ಬೆಚ್ಚಿ ಬಿದ್ದಿದ್ದಾರೆ. ಈತನ ಕೃತ್ಯಕ್ಕೆ ಏನೂ ಅರಿಯದ ಡೆಲಿವರಿ ಬಾಯ್ ಜೀವವನ್ನೇ ಕಳೆದುಕೊಂಡಿದ್ದಾನೆ. ಅರಸೀಕೆರೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿ ಹೇಮಂತ್ ದತ್ತನನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.