ನ್ಯೂಸ್

ಜಾತಿ ವಿಷ ಹರಡಲು ಕೈ ಯತ್ನ; ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಕ್ಸಮರ

ನವದೆಹಲಿ: ಕಾಂಗ್ರೆಸ್ ಪಕ್ಷ ಕಳೆದ 3 ವರ್ಷದಿಂದ ಸಮಾಜ ದಲ್ಲಿ ಜಾತೀಯತೆಯ ವಿಷವನ್ನು ಹರಡಲು ಪ್ರಯತ್ನಿಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ವೇಳೆ ಮಾತನಾಡಿದ ಮೋದಿ ‘ಎಲ್ಲಾ ರಾಜಕೀಯ ಪಕ್ಷಗಳ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಒಬಿಸಿ ಸದಸ್ಯರು ಒಬಿಸಿ ಆಯೋಗಕ್ಕಾಗಿ ಮನವಿ ಸಲ್ಲಿಸುತ್ತಿದ್ದರು. ಆದರೆ ಅವರ ಬೇಡಿಕೆಯನ್ನು ಈಡೇರಿಸಿರಲಿಲ್ಲ. ಈಗ ನಮ್ಮ ಸರ್ಕಾರ ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿದೆ. ಮೀಸಲಾತಿ ವಿಚಾರ ಬಂದಾಗಲೆಲ್ಲಾ ದೇಶದಲ್ಲಿ ಬಿರುಕು ಸೃಷ್ಟಿಸುವ ಪ್ರಯತ್ನ ಮಾಡಲಾಗಿದೆ. ಆದರೆ ನಾವು ಮೊದಲ ಬಾರಿಗೆ ಆರ್ಥಿಕವಾಗಿ ಹಿಂದುಳಿದಿರುವವರಿಗೆ ಶೇ. 10 ರಷ್ಟು ಮೀಸಲಾತಿ ನೀಡಿದೆವು. ಈ ಪ್ರಯತ್ನವನ್ನು ಎಸ್​ಸಿ, ಎಸ್​ಟಿ ಮತ್ತು ಒಬಿಸಿ ಸಮುದಾಯಗಳು ಸ್ವಾಗತಿಸಿದವು’ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷ ಬಿ.ಆರ್. ಅಂಬೇಡ್ಕರ್ ಅವರನ್ನು ಗೌರವಿಸುವುದಿಲ್ಲ. ಕಾಂಗ್ರೆಸ್ ಪಕ್ಷ ಭಾರತ ರತ್ನ ನೀಡಲಿಲ್ಲ, ಆದರೆ ಇಂದು ಜೈ ಭೀಮ್ ಎಂದು ಘೋಷಣೆ ಕೂಗುತ್ತಿದ್ದಾರೆ. ದಲಿತರು ಮತ್ತು ಹಿಂದುಳಿದ ಸಮುದಾಯದವರು ಆರ್ಥಿಕ ವಾಗಿ ಪ್ರಗತಿ ಸಾಧಿಸಬೇಕೆಂದು ಅಂಬೇಡ್ಕರ್ ಬಯಸಿದ್ದರು. ಮುದ್ರಾ ಯೋಜನೆ ಮತ್ತು ಸ್ಟಾ್ಯಂಡ್ ಅಪ್ ಇಂಡಿಯಾ ಯೋಜನೆಗಳು ಬಡವರು ತಮ್ಮ ಸ್ವಂತ ಉದ್ಯಮ ಸ್ಥಾಪಿಸಲು ಸಾಲ ಸೌಲಭ್ಯ ಒದಗಿಸಿವೆ. ಪಿಎಂ-ಜನಮನ್ ಯೋಜನೆ ಬುಡಕಟ್ಟು ಜನಾಂಗದವರ ಸಾಮಾಜಿಕ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಕುಟುಂಬಕ್ಕೆ ಮೊದಲ ಆದ್ಯತೆ: ಕಾಂಗ್ರೆಸ್ ಪಕ್ಷ ಮತಗಳನ್ನು ಪಡೆಯಲು ಓಲೈಕೆ ರಾಜಕಾರಣ ಮಾಡುತ್ತಿದೆ. ಅವರು ಸದಾ ಕುಟುಂಬಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಅವರ ನೀತಿಗಳೂ ಸಹ ಇದಕ್ಕೆ ಪೂರಕವಾಗಿರುತ್ತವೆ. ಆದರೆ ಬಿಜೆಪಿ ದೇಶ ಮೊದಲು ಎಂಬ ತತ್ವದ ಮೇಲೆ ಕೆಲಸ ಮಾಡುತ್ತಿದೆ. 5-6 ದಶಕದವರೆಗೆ ಜನರಿಗೆ ಯಾವುದೇ ಪರ್ಯಾಯ ಮಾದರಿ ಇರಲಿಲ್ಲ. ಆದರೆ 2014ರ ನಂತರ ದೇಶ ಹೊಸ ಮಾದರಿಗೆ ಸಾಕ್ಷಿಯಾಯಿತು. ಈ ಹೊಸ ಮಾದರಿ ಓಲೈಕೆ ರಾಜಕಾರಣವನ್ನು ಆಧರಿಸಿಲ್ಲ, ಅದು ಸಂತುಷ್ಟೀಕರಣವನ್ನು ಆಧರಿಸಿದೆ ಎಂದು ತಿಳಿಸಿದರು.

ದೇವ್ ಆನಂದ್ ಚಿತ್ರಗಳಿಗೆ ನಿಷೇಧ: ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಂಡಿತ್ತು. ತುರ್ತು ಪರಿಸ್ಥಿತಿಯನ್ನು ಬೆಂಬಲಿಸದ ನಟರು, ಗಾಯಕರು, ಕವಿಗಳು ಮತ್ತು ಸಾಹಿತಿಗಳ ವಿರುದ್ಧ ಕ್ರಮ ಜರುಗಿಸಲಾಗಿತ್ತು. ನಟ ದೇವ್ ಆನಂದ್ ಅವರಿಗೆ ತುರ್ತು ಪರಿಸ್ಥಿತಿಯನ್ನು ಬೆಂಬಲಿಸುವಂತೆ ಕೋರಲಾಗಿತ್ತು. ಆದರೆ ಅವರು ಬೆಂಬಲ ನೀಡಲು ನಿರಾಕರಿಸಿದರು. ಹಾಗಾಗಿ ದೂರದರ್ಶನದಲ್ಲಿ ಅವರ ಚಿತ್ರಗಳಿಗೆ ನಿಷೇಧ ಹೇರಲಾಗಿತ್ತು. ದೇವ್ ಆನಂದ್ ಜತೆಯಲ್ಲೇ ಕಿಶೋರ್ ಕುಮಾರ್ ಅವರ ಮೇಲೂ ಕ್ರಮ ಜರುಗಿಸಲಾಗಿತ್ತು. ನೆಹರೂ ಅವಧಿಯಲ್ಲಿ ಮುಂಬೈನಲ್ಲಿ ಕಾರ್ವಿುಕರ ಪ್ರತಿಭಟನೆಗೆ ಬೆಂಬಲಿಸಿದ್ದ ಖ್ಯಾತ ಕವಿ ಮಜ್ರೂಹ್ ಸುಲ್ತಾನ್​ಪುರಿ ಅವರನ್ನು ಜೈಲಿಗೆ ಕಳುಹಿಸಲಾಗಿತ್ತು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಖ್ಯಾತ ನಟ ಬಾಲರಾಜ್ ಸಹಾನಿ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಲತಾ ಮಂಗೇಷ್ಕರ್ ಸಹೋದರ ಹೃದಯನಾಥ ಅವರು ವೀರ ಸಾವರ್ಕರ್ ಕುರಿತು ಕವಿತೆ ರಚಿಸಿ ಆಕಾಶವಾಣಿಯಲ್ಲಿ ಹಾಡಲು ಮುಂದಾಗಿದ್ದರು. ಅವರಿಗೆ ಜೀವನ ಪರ್ಯಂತ ಆಕಾಶವಾಣಿಯಿಂದ ನಿಷೇಧ ಹೇರಲಾಗಿತ್ತು ಎಂದು ಮೋದಿ ಕಿಡಿ ಕಾರಿದರು.

ಇತಿಹಾಸ ತಿರುಚಿದ ಮೋದಿ: ಮೋದಿ ರಾಜ್ಯಸಭೆಯಲ್ಲಿ ಮಾಡಿದ ಭಾಷಣದ ಕುರಿತು ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ‘ಪ್ರಧಾನಿ ಮೋದಿ ತಮ್ಮ 90 ನಿಮಿಷದ ಭಾಷಣದಲ್ಲಿ ಸುಳ್ಳಿನ ನದಿಯನ್ನು ಹರಿಸಿದ್ದಾರೆ. ಅವರ ಬಳಿ ಪ್ರಧಾನ ಮಂತ್ರಿ ಕಾಂಗ್ರೆಸ್ ಬದ್ನಾಮ್ ಯೋಜನೆ ಮತ್ತು ಪಿಎಂ ಇತಿಹಾಸ್ ತೋಡ್ ಮರೋಡ್ ಯೋಜನೆ ಎಂಬ ಎರಡು ಅಸ್ತ್ರಗಳು ಮಾತ್ರ ಇವೆ. ಅವರು ನೆಹರು ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಸದನದ ಮುಂದೆ ಹೊಸ ಇತಿಹಾಸವನ್ನು ಮಂಡಿಸಿದ್ದಾರೆ. ಅವರು ನಿರುದ್ಯೋಗ, ಆರ್ಥಿಕ ಅಸಮಾನತೆ, ಧ್ರುವೀಕರಣ, ಹಣದುಬ್ಬರ ಮತ್ತು ಅಮೆರಿಕದೊಂದಿಗಿನ ಸಂಬಂಧದ ಕುರಿತು ಮಾತನಾಡಿಲ್ಲ. ನಿಜವಾದ ಸಮಸ್ಯೆಗಳ ಬಗ್ಗೆ ಮಾತನಾಡದೆ, ಕಾಂಗ್ರೆಸ್ ಅನ್ನು ಮಾತ್ರ ಗುರಿಯಾಗಿಸಿಕೊಂಡು ಮಾತನಾಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಸಂವಿಧಾನದ ಪ್ರತಿ ಪ್ರದರ್ಶಿಸಿದರೆ ಸಾಲದು: ಬಹುತೇಕ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಂವಿಧಾನದ ಪ್ರತಿಯನ್ನು ಪ್ರದರ್ಶಿಸುವ ವಿಪಕ್ಷ ನಾಯಕ ರಾಹುಲ್ ವಿರುದ್ಧವೂ ಮೋದಿ ಹರಿಹಾಯ್ದರು. ‘ಸಂವಿಧಾನದ ಪ್ರತಿಗಳನ್ನು ಪ್ರದರ್ಶಿಸು ವವರಿಗೆ ಅದರ ಬಗ್ಗೆ ಗೌರವವಿಲ್ಲ. ನೆಹರೂ ತಮ್ಮ ಮೊದಲ ಸರ್ಕಾರದ ಅವಧಿಯಲ್ಲಿ ಸಾಮಾನ್ಯ ಜನರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿ ಸಂವಿಧಾನವನ್ನು ಹೇಗೆ ತಿದ್ದುಪಡಿ ಮಾಡಿದರು ಎಂಬುದನ್ನು ಅವರು ನೆನಪಿಸಿದರು. ದೇಶದ ಜನರು ಬಿಜೆಪಿಯ ಅಭಿವೃದ್ಧಿ ಮಾದರಿಯನ್ನು ಅರ್ಥಮಾಡಿಕೊಂಡಿದ್ದಾರೆ. ಪರೀಕ್ಷಿಸಿದ್ದಾರೆ ಮತ್ತು ಬೆಂಬಲಿಸಿದ್ದಾರೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ. ಕಾಂಗ್ರೆಸ್​ನಿಂದ ಇದನ್ನು ನಿರೀಕ್ಷಿಸುವುದೇ ದೊಡ್ಡ ತಪ್ಪು. ಇದು ಅವರ ಆಲೋಚನೆಗೆ ಮೀರಿದ್ದು. ಅವರ ತುಷ್ಟೀಕರಣ ರಾಜಕಾರಣಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ತಮ್ಮ 90 ನಿ. ಭಾಷಣದಲ್ಲಿ ಕಾಂಗ್ರೆಸ್ ವಿರುದ್ಧ ಪ್ರಬಲ ವಾಗ್ದಾಳಿ ನಡೆಸಿದರು.

ಯುಸಿಸಿ ಜಾರಿ: ಏಕರೂಪ ನಾಗರಿಕ ಸಂಹಿತೆ ವಿರೋಧಿಸುತ್ತಿರುವ ಪಕ್ಷಗಳಿಗೂ ಪ್ರಧಾನಿ ಬಿಸಿ ಮುಟ್ಟಿಸಿದರು. ನಮ್ಮ ಸಂವಿಧಾನದ ನಿರ್ವತೃಗಳಿಂದ ಸ್ಪೂರ್ತಿ ಪಡೆದು ನಾವು ಮುಂದುವರಿಯುತ್ತಿದ್ದೇವೆ. ಸಂವಿಧಾನ ಸರಿಯಾಗಿ ಓದಿದರೆ ಸಮಾನ ನಾಗರಿಕತೆ ಸಂವಿಧಾನಕ್ಕೆ ಪೂರಕ ಎಂಬುದು ಅರ್ಥವಾಗುತ್ತದೆ. ಈ ಹಿಂದಿನ ಅನೇಕ ಸರ್ಕಾರಗಳು ಈ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಧೈರ್ಯ ತೋರಲಿಲ್ಲ. ಯುಸಿಸಿ ಜಾರಿಗೆ ತರುವ ಮೂಲಕ ಸಂವಿಧಾನ ರಚನಾಕಾರರಿಗೆ ನಾವು ನಿಜವಾದ ಗೌರವ ಸಲ್ಲಿಸುತ್ತೇವೆ ಎಂದು ಮೋದಿ ಹೇಳಿದರು. ತಮ್ಮ ಸರ್ಕಾರ ಬಡವರ ಉನ್ನತಿಗಾಗಿ ಕೆಲಸ ಮಾಡಿದೆ. ದೇಶದ ಮಧ್ಯಮ ವರ್ಗ ಮತ್ತು ನವಮಧ್ಯಮ ವರ್ಗದ ಪರ ನಿಂತಿದೆ ಎಂದರು.