ನ್ಯೂಸ್

ಸಂಪಾದಕೀಯ | ಆತಂಕಕಾರಿ ಬೆಳವಣಿಗೆ

ಮೋಹನ್​ ಶೆಟ್ಟಿ

ದೆಹಲಿ, ಮಧ್ಯಪ್ರದೇಶ, ಜಾರ್ಖಂಡ್, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಇತ್ತೀಚೆಗೆ ನಡೆಸಿದ ದಾಳಿಗಳು ದೇಶದ ಆಂತರಿಕ ಭದ್ರತೆಗೆ ಸಂಬಂಧಿಸಿದ ಗಂಭೀರ ಸವಾಲುಗಳನ್ನು ಬಯಲಿಗೆಳೆದಿವೆ. ಐಸಿಸ್ ಭಯೋತ್ಪಾದಕ ಸಂಘಟನೆ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುವ ಯತ್ನದಲ್ಲಿರುವುದು ಈ ದಾಳಿಗಳಿಂದ ಸ್ಪಷ್ಟವಾಗಿದೆ. ಇದಕ್ಕಿಂತಲೂ ಆತಂಕಕಾರಿಯಾದ ಸಂಗತಿಯೆಂದರೆ, ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದ ಬಂಧಿತ ಉಗ್ರರು ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ತಯಾರಿಸಲು ಕಾರ್ಖಾನೆಯೊಂದನ್ನು ಸ್ಥಾಪಿಸಿದ್ದಾರೆ ಎಂಬುದು. ಈ ಬೆಳವಣಿಗೆಯು ದೇಶದ ಭದ್ರತಾ ವ್ಯವಸ್ಥೆಗೆ ಇರುವ ಗಂಭೀರ ಬೆದರಿಕೆಗೆ ಸಾಕ್ಷಿಯಾಗಿದೆ.

ಐಸಿಸ್​ನಂತಹ ಜಾಗತಿಕ ಭಯೋತ್ಪಾದಕ ಸಂಘಟನೆಯು ಭಾರತದಲ್ಲಿ ತನ್ನ ಚಟುವಟಿಕೆಯನ್ನು ವಿಸ್ತರಿಸುವ ಯತ್ನ ನಡೆಸುತ್ತಿರುವುದನ್ನು ಎಂಥದೇ ಸಂದರ್ಭದಲ್ಲಿಯೂ ಒಪ್ಪಿಕೊಳ್ಳಲಾಗದು. ವೈವಿಧ್ಯಮಯ ಸಂಸ್ಕೃತಿ, ಬಹುದೊಡ್ಡ ಜನಸಂಖ್ಯೆ ಮತ್ತು ಭೌಗೋಳಿಕ ವೈಶಾಲ್ಯದಿಂದಾಗಿ ಭಾರತವನ್ನೇ ಉಗ್ರರು ತಮ್ಮ ಮೊದಲ ಗುರಿಯಾಗಿಸಿಕೊಳ್ಳುತ್ತಾರೆ. ಇತಿಹಾಸದಲ್ಲಿ ಹಲವು ಬಾರಿ ಇದು ಸಾಬೀತಾಗಿದೆ. ಈಗ ಇಂತಹುದೇ ಪ್ರಯತ್ನವನ್ನು ಐಸಿಸ್ ಮಾಡುತ್ತಿದೆ. ಉಗ್ರರಿಂದ ರಾಸಾಯನಿಕ ಶಸ್ತ್ರಾಸ್ತ್ರಗಳ ತಯಾರಿಕೆ ಈ ಸಮಸ್ಯೆಯ ಗಂಭೀರತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಭೌತಿಕವಾಗಿ ಹಾನಿ ಮಾಡುವುದು ಮಾತ್ರವಲ್ಲ, ದೀರ್ಘಕಾಲ ಜನರ ಮನಸ್ಸಿನಲ್ಲಿ ಭಯದ ವಾತಾವರಣ ಸೃಷ್ಟಿಸುವ ಸಾಮರ್ಥ್ಯವನ್ನು ರಾಸಾಯನಿಕ ಅಸ್ತ್ರಗಳು ಹೊಂದಿವೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಕೆಲವರನ್ನು ಎನ್​ಐಎ ಈಗಾಗಲೇ ಬಂಧಿಸಿದ್ದು, ಅವರಿಗೆ ಪಾಕಿಸ್ತಾನದ ಜತೆ ಸಂಪರ್ಕ ಇರುವುದು ಬಯಲಾಗಿದೆ.

ಭಾರತದಲ್ಲಿ ಉಗ್ರಕೃತ್ಯಗಳನ್ನು ನಡೆಸಲು ಪಾಕಿಸ್ತಾನ ಹಿಂದಿನಿಂದಲೂ ಬೆಂಬಲ ನೀಡುತ್ತಲೇ ಬಂದಿದೆ. ತೆರೆಮರೆಯಲ್ಲಿ ನಡೆಯುವ ಈ ಚಟುವಟಿಕೆಗಳನ್ನು ಪತ್ತೆ ಮಾಡುವುದು ಭಾರತದ ಗುಪ್ತಚರ ವ್ಯವಸ್ಥೆಗೂ ಒಂದು ಸವಾಲೇ. ಈ ಸವಾಲನ್ನು ಅದು ಸಮರ್ಥವಾಗಿ ನಿಭಾಯಿಸುತ್ತಿರುವುದೂ ಹಲವು ಬಾರಿ ದೃಢಪಟ್ಟಿದೆ. ಎನ್​ಐಎ ಕಾರ್ಯಾಚರಣೆ ಸಕಾಲಿಕವಾಗಿದೆ. ಆದರೂ ಭಯೋತ್ಪಾದನೆಗೆ ಗಡಿಯಾಚೆಯಿಂದ ಸಿಗುತ್ತಿರುವ ಬೆಂಬಲವನ್ನು ತಡೆಗಟ್ಟಲು ಭಾರತದ ಗುಪ್ತಚರ ವ್ಯವಸ್ಥೆಯ ಕಾರ್ಯತಂತ್ರವನ್ನು ಇನ್ನಷ್ಟು ಬಲಪಡಿಸಬೇಕಾದ ಅಗತ್ಯವನ್ನು ಇದು ಸೂಚಿಸುತ್ತದೆ. ಈಗ ಪತ್ತೆಯಾಗಿರುವುದು ಒಂದು ಬೃಹತ್ ಜಾಲದ ಸಣ್ಣ ಭಾಗ ಮಾತ್ರ ಎಂಬುದನ್ನು ಎಲ್ಲರೂ ನೆನಪಿಡಬೇಕಿದೆ.

ಇಂತಹ ಕೃತ್ಯಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಘಟಿತ ಪ್ರಯತ್ನ ಅಗತ್ಯವಾಗಿದೆ. ಎರಡೂ ಕಡೆಯ ಅಧಿಕಾರಿಗಳ ಸಮನ್ವಯ ಅತ್ಯಂತ ಮಹತ್ವದ್ದಾಗಿದೆ. ಎನ್​ಐಎಯಂತಹ ಕೇಂದ್ರೀಯ ಸಂಸ್ಥೆಗಳು ಭಯೋತ್ಪಾದಕ ಚಟುವಟಿಕೆಗಳನ್ನು ಪತ್ತೆ ಹಚ್ಚುವಲ್ಲಿ ಪರಿಣತಿಯನ್ನು ಹೊಂದಿವೆಯಾದರೂ, ಸ್ಥಳೀಯ ಮಟ್ಟದಲ್ಲಿ ರಾಜ್ಯ ಪೊಲೀಸ್ ಇಲಾಖೆ ಮತ್ತು ಗುಪ್ತಚರ ಘಟಕಗಳು ಈ ಕಾರ್ಯಾಚರಣೆಯನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ರಾಜ್ಯ ಸರ್ಕಾರಗಳು ತಮ್ಮ ಆಡಳಿತ ವ್ಯಾಪ್ತಿಯಲ್ಲಿ ಶಂಕಾಸ್ಪದ ಚಟುವಟಿಕೆಗಳನ್ನು ಗುರುತಿಸಿ, ಕೇಂದ್ರೀಯ ಸಂಸ್ಥೆಗಳೊಂದಿಗೆ ಮಾಹಿತಿ ಹಂಚಿಕೊಳ್ಳುವಲ್ಲಿ ಚುರುಕಾಗಿರಬೇಕು. ಇದಕ್ಕೆ ಸಮರ್ಪಕ ತರಬೇತಿ, ಆಧುನಿಕ ತಂತ್ರಜ್ಞಾನದ ಬಳಕೆ ಮತ್ತು ಗುಪ್ತಚರ ಜಾಲದ ವಿಸ್ತರಣೆ ಅಗತ್ಯ.