ನ್ಯೂಸ್

ಸಾಂಸ್ಕೃತಿಕ ನಗರಿಗೆ ಆಗಮಿಸಿದ ಗೃಹ ಸಚಿವ ಅಮಿತ್ ಶಾ; 'ಲೋಕಾ' ಸಮರಕ್ಕೆ ಕಮಲ ಪಡೆ ರಣತಂತ್ರ​

ಮೋಹನ್​ ಶೆಟ್ಟಿ

ಮೈಸೂರು: ಸಾಂಸ್ಕೃತಿಕ ನಗರ ಮೈಸೂರು ಪ್ರವಾಸ ಕೈಗೊಂಡಿರುವ ಕೇಂದ್ರ ಸಚಿವ ಅಮಿತ್ ಶಾ, ಇಂದು ಮುಂಜಾನೆ 2:40ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಜಿಲ್ಲಾಡಳಿತ ವತಿಯಿಂದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗೃಹ ಸಚಿವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು.

ಮೈಸೂರು ಪ್ರವಾಸ ಕೈಗೊಂಡಿರುವ ಅಮಿತ್ ಶಾ ಇಂದು ಬೆಳಗ್ಗೆ 11 ಗಂಟೆಗೆ ಮೈಸೂರಿನ ಅಧಿದೇವತೆ ನೆಲೆಸಿರುವ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ನಾಡದೇವತೆಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಇದಾದ ಬಳಿಕ ಶ್ರೀಕ್ಷೇತ್ರ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದು, ಮಠದ ಆವರಣದಲ್ಲಿ ನೂತನವಾಗಿ ನಿರ್ಮಾಣವಾದ ಅತಿಥಿಗೃಹದ ಉದ್ಘಾಟನೆ ಮಾಡಲಿದ್ದಾರೆ. ತದನಂತರ ಪಕ್ಷದ ಸಂಘಟನಾತ್ಮಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.

ಕಾಂಗ್ರೆಸ್​ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನೇತ್ರತ್ವದಲ್ಲಿ ನಿರ್ಮಾಣವಾದ ಈ ಅತಿಥಿ ಗೃಹಕ್ಕೆ ಶ್ರೀಮತಿ ಪಾರ್ವತಮ್ಮ ಹಾಗೂ ಡಾ. ಶಾಮನೂರು ಶಿವಶಂಕರಪ್ಪ ಎಂದು ಹೆಸರಿಡಲಾಗಿದೆ. ಸುತ್ತೂರು ಶ್ರೀಕ್ಷೇತ್ರ ಸುತ್ತೂರು ಜಾತ್ರಾ ಮಹೋತ್ಸವದ ವೇಳೆ ಈ ಒಂದು ಅತಿಥಿ ಗೃಹವನ್ನು ಅಮಿತ್ ಶಾ ಉದ್ಘಾಟನೆ ಮಾಡಲಿದ್ದಾರೆ.