Trump Warning: ಮಧ್ಯಪ್ರಾಚ್ಯ ದೇಶಗಳಲ್ಲಿ ಸದ್ಯ ಸಂಘರ್ಷದ ಕಾವು ಜೋರಾಗಿದೆ. ಇಸ್ರೇಲ್ ದಾಳಿಗೆ ಇರಾನ್ ಪ್ರತಿದಾಳಿ ನಡೆಸುತ್ತಿದೆ. ಪ್ರಸ್ತುತ ಎರಡೂ ದೇಶಗಳು ಪ್ರತೀಕಾರದ ಅಲೆಯಲ್ಲಿ ಮುನ್ನುಗ್ಗುತ್ತಿದ್ದು, ಕ್ಷಿಪಣಿ-ಡ್ರೋನ್ ದಾಳಿಗಳನ್ನು ನಿರಂತರವಾಗಿ ನಡೆಸುತ್ತಿವೆ. ಸದ್ಯ ಇರಾನ್ಗೆ ಕಿವಿಮಾತು ನೀಡಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಸಂಘರ್ಷ ಕಾಡ್ಗಿಚ್ಚಾಗಿ ಹಬ್ಬುವ ಮೊದಲೇ ಉತ್ತಮ ನಿರ್ಣಯ ತೆಗೆದುಕೊಳ್ಳುವುದು ಉತ್ತಮ ಎಂದಿದ್ದಾರೆ.
ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ತನ್ನ ದೇಶದ ಉನ್ನತ ಅಧಿಕಾರಿಗಳು ಮತ್ತು ನಾಗರಿಕರು ಸೇರಿದಂತೆ ಒಟ್ಟು 224ಕ್ಕೂ ಹೆಚ್ಚು ಜನರನ್ನು ಕಳೆದುಕೊಂಡಿರುವ ಇರಾನ್, ಇದಕ್ಕೆ ಪ್ರತೀಕಾರವಾಗಿ ಕ್ಷಿಪಣಿ ದಾಳಿ ನಡೆಸಿ, ಇಸ್ರೇನ್ನ 24ಕ್ಕೂ ಅಧಿಕ ಮಂದಿಯ ಪ್ರಾಣ ಕಸಿದುಕೊಂಡಿದೆ. ಇವರಿಬ್ಬರ ಸಂಘರ್ಷದಲ್ಲಿ ಮುಂದೆ ಸಂಭವಿಸುವ ಭಾರೀ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಮಧ್ಯೆ ಪ್ರವೇಶಿಸಿರುವ ಟ್ರಂಪ್, ಎಲ್ಲಾ ಮುಗಿದು ಹೋಗುವ ಮುನ್ನ ಒಪ್ಪಂದದ ಮಾತುಕತೆಗಳನ್ನು ಮಾಡಿಕೊಳ್ಳುವುದು ಒಳಿತು ಎಂದು ಇರಾನ್ಗೆ ಹೇಳಿದ್ದಾರೆ.
ಕೆನಡಾದ ಕನನಾಸ್ಕಿಸ್‌ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, "ಇಲ್ಲಿ ಇರಾನ್ ಯುದ್ಧವನ್ನು ಗೆಲ್ಲುವ ಮಾತಿಲ್ಲ. ಶೀಘ್ರವೇ ಇಸ್ರೇಲ್ನೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಒಳಿತು. ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ. ಶೀಘ್ರವೇ ಮಾತುಕತೆಗೆ ಮುಂದಾಗಲಿ" ಎಂದು ಹೇಳಿದ್ದಾರೆ,(ಏಜೆನ್ಸೀಸ್).