ನ್ಯೂಸ್

ರಾಜಸ್ಥಾನ ಬಿಜೆಪಿ ಬಣದಲ್ಲಿ ತುರುಸಿನ ಚಟುವಟಿಕೆ; ವಸುಂಧರಾ ರಾಜೆ ನೇತೃತ್ವದಲ್ಲಿ ನಾಳೆ ಸಭೆ

ಜೈಪುರ: ರಾಜಸ್ಥಾನ ಕಾಂಗ್ರೆಸ್ ಸರ್ಕಾರ ಕಳೆದ ಕೆಲವು ದಿನಗಳಿಂದ ಸ್ಥಿರವಾಗಿಲ್ಲ. ಸದ್ಯ ತಾವು ಸೇಫ್​ ಎಂದು ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಬಣ ಹೇಳುತ್ತಿದ್ದರೂ ಕೂಡ, ಸಚಿನ್​ ಪೈಲಟ್​ ಮತ್ತು ಅವರ ಬಣ ಒಪ್ಪುತ್ತಿಲ್ಲ. ವಿಶ್ವಾಸ ಮತ ಯಾಚನೆ ಮಾಡಿ, ಬಹುಮತ ಸಾಬೀತು ಪಡಿಸಿ ಎಂದು ಹೇಳಿದೆ.

ಈ ಮಧ್ಯೆ ಬಿಜೆಪಿ ಕೂಡ ಸಚಿನ್​ ಪೈಲಟ್​ ಅವರು ಪಕ್ಷಕ್ಕೆ ಬಂದರೆ ಸ್ವಾಗತ ಎಂದು ಹೇಳಿದ್ದಾರೆ. ಆದರೆ ರಾಜಸ್ಥಾನ ಕಾಂಗ್ರೆಸ್​ನಲ್ಲಿ ನಡೆಯುತ್ತಿರುವ ಸಂಘರ್ಷಕ್ಕೂ, ನಮಗೂ ಸಂಬಂಧವಿಲ್ಲ. ಶಾಸಕರು, ಸಚಿನ್​ ಪೈಲಟ್​ ರೆಬಲ್​ ಆಗಿದ್ದರ ಹಿಂದೆ ನಮ್ಮದೇನೂ ಪಾತ್ರವಿಲ್ಲ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್​ನಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ನಾಳೆ (ಜು.15ರಂದು) ಜೈಪುರಲ್ಲಿ ಬಿಜೆಪಿ ನಾಯಕರು ಸಭೆ ನಡೆಸಲಿದ್ದು, ರಾಜ್ಯದ ರಾಜಕೀಯ ಸ್ಥಿತಿಗತಿ ಬಗ್ಗೆ ಚರ್ಚೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕಾಶ್ಮೀರದಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು ಸಚಿನ್​ ಪೈಲಟ್​-ಸಾರಾ ಮದುವೆ; ಅನೇಕರಿಗೆ ಗೊತ್ತಿಲ್ಲದ ಸಂಗತಿ ಇದು..

ಮುಖ್ಯವಾಗಿ ಈ ಸಭೆಯಲ್ಲಿ ರಾಜಸ್ಥಾನ ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕಿ ವಸುಂಧರಾ ರಾಜೆ ಪಾಲ್ಗೊಳ್ಳಲಿದ್ದಾರೆ. ಧೋಲ್​ಪುರದಿಂದ ನಾಳೆ ಅವರು ಜೈಪುರಕ್ಕೆ ಆಗಮಿಸಿದ ಬಳಿಕ ಸಭೆ ಪ್ರಾರಂಭವಾಗಲಿದೆ ಎನ್ನಲಾಗಿದೆ. ವಸುಂಧರಾ ರಾಜೆ ನೇತೃತ್ವದಲ್ಲಿ ಸಭೆ ನಡೆಯುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ರಾಜಸ್ಥಾನದ ಪ್ರಮುಖ ಬಿಜೆಪಿ ಲೀಡರ್​ ಆಗಿರುವ ವಸುಂಧರಾ ರಾಜೆ ಕಳೆದ ಮೂರು ದಿನಗಳಿಂದಲೂ ಜೈಪುರದಲ್ಲಿ ಇಲ್ಲ. ಸಭೆಯಲ್ಲಿ ಪಾಲ್ಗೊಳ್ಳುವುದಕ್ಕೋಸ್ಕರ ನಾಳೆ ಇಲ್ಲಿಗೆ ಬರುತ್ತಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)