ನ್ಯೂಸ್

ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ವಿರುದ್ಧ ಇಡೀ ಅಮೆರಿಕವೇ ತಿರುಗಿ ಬಿದ್ದಿರುವುದೇಕೆ?

ವಾಷಿಂಗ್ಟನ್​: ಅಮೆರಿಕ ಅಧ್ಯಕ್ಷ ಡೊನಾಲ್ಟ್​ ಟ್ರಂಪ್​ ವಿರುದ್ಧ ಪ್ರಮುಖ ರಾಜ್ಯವಾದ ಕ್ಯಾಲಿಫೋರ್ನಿಯಾ ನೇತೃತ್ವದಲ್ಲಿ 20ಕ್ಕೂ ಅಧಿಕ ರಾಜ್ಯಗಳು ತಿರುಗಿ ಬಿದ್ದಿವೆ.

ಹಿಂದಿನ ಅಧ್ಯಕ್ಷ ಬರಾಕ್​ ಒಬಾಮಾ ಜಾರಿಗೆ ತಂದಿದ್ದ ಕಾಯ್ದೆಯನ್ನು ಮಾರ್ಪಾಡು ಮಾಡಲು ಮುಂದಾಗಿರುವುದೇ ಈ ರಾಜ್ಯಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದು ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆ ತರುವುದು ಮಾತ್ರವಲ್ಲದೇ, ಪರಿಸರಕ್ಕೂ ಭಾರಿ ಹಾನಿಯುಂಟು ಮಾಡಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದು, ಟ್ರಂಪ್​ ಜಾರಿಗೊಳಿಸುತ್ತಿರುವ ಕಾಯ್ದೆಯನ್ನು ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿವೆ.

ಅಮೆರಿಕದಲ್ಲಿ ವಾಹನಗಳ ಇಂಧನ ಕ್ಷಮತೆ ಬಗ್ಗೆ ಪ್ರತ್ಯೇಕ ಕಾನೂನನ್ನೇ ರಚಿಸಲಾಗಿದೆ. ಹಿಂದಿನ ಅಧ್ಯಕ್ಷ ಬರಾಕ್​ ಒಬಾಮಾ 2021ರಿಂದ ಅನ್ವಯವಾಗುವಂತೆ 2025ರ ಅವಧಿಯೊಳಗೆ ಅಮೆರಿಕದಲ್ಲಿ ಸಂಚರಿಸುವ ಎಲ್ಲ ಕಾರು, ಎಸ್​ಯುವಿ ಹಾಗೂ ಟ್ರಕ್​ಗಳು ಪ್ರತಿ ಗ್ಯಾಲನ್​ ಇಂಧನಕ್ಕೆ ಸರಾಸರಿ 54 ಮೈಲು ಸಂಚರಿಸುವ ಕ್ಷಮತೆಯನ್ನು ಹೊಂದಿರಬೇಕೆಂದು ಕಾನೂನು ರೂಪಿಸಿದ್ದಾರೆ. ಅಂದರೆ, ಪ್ರತಿ ಲೀಟರ್​ ಇಂಧನಕ್ಕೆ ಕಾರು, ಎಸ್​ಯುವಿ ಹಾಗೂ ಟ್ರಕ್​ಗಳು ಸರಾಸರಿ 22.85 ಕಿ.ಮೀ ಸಂಚರಿಸಬೇಕು ಎಂಬುದು ಕಾಯ್ದೆ.

ಆದರೆ, ಇದಕ್ಕೆ ಟ್ರಂಪ್​ ಆಡಳಿತ ತಿದ್ದುಪಡಿ ಜಾರಿಗೊಳಿಸಲು ಮುಂದಾಗಿ ಈ ಇಂಧನ ಕ್ಷಮತೆ ಪ್ರಮಾಣವನ್ನು ಇನ್ನಷ್ಟು ಕುಗ್ಗಿಸಿದೆ. ಹೊಸ ಕಾಯ್ದೆ ಪ್ರಕಾರ 2025ರ ವೇಳೆಗೆ ವಾಹನಗಳು ಪ್ರತಿ ಲೀಟರ್​ಗೆ 16 ಕಿ. ಮೀ. ಇಂಧನ ಕ್ಷಮತೆ ಹೊಂದಿದ್ದರೆ ಸಾಕು ಎಂದು ಹೇಳಲಾಗಿದೆ.

ಕರೊನಾದಿಂದಾಗಿ ಸಂಕಷ್ಟದಲ್ಲಿರುವ ವಾಹನ ಉದ್ಯಮಕ್ಕೆ ಇದು ನೆರವಾಗಲಿದೆ ಹಾಗೂ ವಾಹನಗಳ ಬೆಲೆಯನ್ನು ಇಳಿಸಲು ನೆರವಾಗಲಿದೆ ಎಂಬುದು ಟ್ರಂಪ್​ ವಾದ. ಆದರೆ, ಇದಕ್ಕೆ ಅಮೆರಿಕದ 20ಕ್ಕೂ ಅಧಿಕ ರಾಜ್ಯಗಳು ವಿರೋಧ ವ್ಯಕ್ಪಡಿಸಿವೆ. ಟ್ರಂಪ್​ ನಿರ್ಧಾರವನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿವೆ.

ಇಂಧನ ದಕ್ಷತೆ ಪ್ರಮಾಣವನ್ನು ಕಡಿಮೆಗೊಳಿಸಿದರೆ ಪರಿಸರದ ಮೇಲೆ ಭಾರಿ ಪರಿಣಾಮ ಉಂಟಾಗಲಿದೆ. ವಾಯು ಮಾಲಿನ್ಯ ಹೆಚ್ಚಾಗಲಿದೆ. ಅಲ್ಲದೇ, ಜಾಗತಿಕ ತಾಪಮಾನ ಕಡಿಮೆಗೊಳಿಸುವ ನಿಟ್ಟಿನಲ್ಲಿ ಇಂಗಾಲ ಹೊರಸೂಸುವಿಕೆಯನ್ನು ತಡೆಗಟ್ಟಲು ಸಾಧ್ಯವಾಗದು ಎಂಬುದು ರಾಜ್ಯಗಳ ವಾದ. ಹೀಗಾಗಿ ಹಿಂದಿನ ಮಾನದಂಡವನ್ನೇ ಪರಿಗಣಿಸಬೇಕು ಎಂದು ಕೋರ್ಟ್​ಗೆ ಮೊರೆ ಹೋಗಿವೆ.