ನ್ಯೂಸ್

ಕೆಲವು ವಾರ ಇಡೀ ದೇಶ ಬಂದ್​ ಮಾಡಿ ಎನ್ನುತ್ತಾರೆ ಅಮೆರಿಕದ ವೈದ್ಯಕೀಯ ಸಲಹೆಗಾರ

ನ್ಯೂಯಾರ್ಕ್​ : ಇಡೀ ದೇಶವನ್ನು ಕೆಲವು ವಾರಗಳ ಮಟ್ಟಿಗೆ ಮುಚ್ಚಿಬಿಟ್ಟರೆ ಭಾರತದಲ್ಲಿ ಆರಂಭವಾಗಿರುವ ಕರೊನಾ ಸೋಂಕು ಹರಡುವಿಕೆಯ ವಿಷಮ ಚಕ್ರಕ್ಕೆ ಕೊನೆ ಹಾಡಬಹುದು. ಯಾವ ದೇಶಕ್ಕೂ ಈ ತೆರನ ಲಾಕ್​ಡೌನ್ ಮಾಡುವುದು ಇಷ್ಟವಾಗೋಲ್ಲ. ಆದರೆ ಲಾಕ್​ಡೌನ್​ ಮಾಡುವುದರಿಂದ ಹದಗೆಟ್ಟಿರುವ ಪರಿಸ್ಥಿತಿಯನ್ನು ಸುಧಾರಿಸಲು ಕಾಲಾವಕಾಶ ಲಭ್ಯವಾಗುವುದು ಎಂದು ಅಮೆರಿಕದ ಬಿಡೆನ್ ಆಡಳಿತದ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಆ್ಯಂಥೋನಿ ಎಸ್. ಫಾಸಿ ಹೇಳಿದ್ದಾರೆ.

ಕರೊನಾ ಬಗೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹಳ ನಂಬಿಕಸ್ಥ ವಕ್ತಾರರಾದ ಫಾಸಿ ಅವರು ಇಂಡಿಯನ್​ ಎಕ್ಸ್​ಪ್ರೆಸ್​​ಗೆ ನೀಡಿರುವ ಸಂದರ್ಶನದಲ್ಲಿ ಈ ಸಲಹೆ ಕೊಟ್ಟಿದ್ದಾರೆ. ಸಮಸ್ಯೆಯನ್ನು ಹಂತಹಂತವಾಗಿ ಬಗೆಹರಿಸಲು ಯಾವುದು ತಕ್ಷಣ ಆಗಬೇಕು, ಯಾವುದಕ್ಕೆ ಸ್ವಲ್ಪ ಕಾಲಾವಕಾಶ ಇದೆ ಎಂದು ವಿಂಗಡಿಸಿಕೊಂಡು ಆದ್ಯತೆಯ ಮೇಲೆ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಸಂಕಟದ ಈ ಸಮಯದಲ್ಲಿ ರೋಗಿಗಳಿಗೆ ಆಕ್ಸಿಜನ್, ಔಷಧಿಗಳು, ಪಿಪಿಇಗಳು ಮತ್ತು ಇತರ ವೈದ್ಯಕೀಯ ಅಗತ್ಯಗಳನ್ನು ಒದಗಿಸುವ ಕೆಲಸ ಮೊದಲಾಗಬೇಕು. ಸೇನೆ ಮತ್ತಿತರ ಸಂಘಟನೆಗಳ ಸಹಾಯದಿಂದ ರೋಗಿಗಳಿಗೆ ಶುಶ್ರೂಷೆ ಒದಗಿಸಬೇಕು. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರ ರಾಷ್ಟ್ರಗಳ ಸಹಾಯ ಪಡೆದು ಈ ಸಮಸ್ಯೆಯನ್ನು ತುರ್ತಾಗಿ ನಿವಾರಿಸಬೇಕು. ಎರಡನೆಯದಾಗಿ, ಸಮರೋಪಾದಿಯಲ್ಲಿ ಹೆಚ್ಚು ಆಸ್ಪತ್ರೆಗಳ ನಿರ್ಮಾಣದ ಬಗ್ಗೆ ಗಮನ ನೀಡಬೇಕು. ತದನಂತರ ದೀರ್ಘಕಾಲೀನ ಪರಿಹಾರವಾಗಿ ಲಸಿಕೆಗಳು ಹೆಚ್ಚು ಜನರನ್ನು ತಲುಪುವಂತೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಡಾ. ಫಾಸಿ ಸಲಹೆ ನೀಡಿದ್ದಾರೆ. (ಏಜೆನ್ಸೀಸ್)