ನ್ಯೂಸ್

ಚೀನಾದ ಲೋಹಮುಷ್ಟಿಯಲ್ಲಿ ಅಮೆರಿಕ; ಲೋಹಗಳ ರಫ್ತು ಸ್ಥಗಿತಗೊಳಿಸಿದ ಡ್ರ್ಯಾಗನ್ ರಾಷ್ಟ್ರ

ವಾಷಿಂಗ್ಟನ್: ಅಮೆರಿಕ ಮತ್ತು ಚೀನಾ ನಡುವೆ ವ್ಯಾಪಾರ ಸಮರ ಉಲ್ಬಣಗೊಂಡ ಬೆನ್ನಲ್ಲೇ ಚೀನಾ ಸರ್ಕಾರ ಅಪರೂಪದ ಪ್ರಮುಖ ಲೋಹಗಳು ಮತ್ತು ವಿಶೇಷ ಅಯಸ್ಕಾಂತಗಳ ರಫ್ತನ್ನು ಸ್ಥಗಿತಗೊಳಿಸಿದೆ. ಇದರಿಂದಾಗಿ ಶಸ್ತ್ರಾಸ್ತ್ರ, ಎಲೆಕ್ಟ್ರಾನಿಕ್ಸ್ ಉಪಕರಣ, ವಾಹನ, ವಿಮಾನ, ಸೆಮಿಕಂಡಕ್ಟರ್ ಮತ್ತು ಹಲವಾರು ಗ್ರಾಹಕ ವಸ್ತುಗಳ ತಯಾರಿಕೆಯಲ್ಲಿ ನಿರತವಾಗಿರುವ ಅಮೆರಿಕ ಮತ್ತಿತರ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ತೀವ್ರ ತೊಂದರೆಯಾಗಲಿದೆ.

ರಫ್ತಿಗೆ ಹೊಸ ನಿಯಂತ್ರಣ ವ್ಯವಸ್ಥೆ ರೂಪಿಸಲು ಚೀನಾ ಸರ್ಕಾರ ಮುಂದಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ನೀತಿ-ನಿಯಮಗಳು ಸಿದ್ಧವಾಗುತ್ತಿವೆ. ಇದರ ನಡುವೆಯೇ, ಕಾರ್​ನಿಂದ ಕ್ಷಿಪಣಿವರೆಗೆ ವಿವಿಧ ವಸ್ತುಗಳ ತಯಾರಿಕೆಗೆ ಬೇಕಾಗುವ ಲೋಹಗಳು ಮತ್ತು ಸ್ಪೆಷಲ್ ಮ್ಯಾಗ್ನೆಟ್ಸ್ ರಫ್ತಾಗದಂತೆ ಚೀನಾದ ವಿವಿಧ ಬಂದರುಗಳಲ್ಲಿ ತಡೆಹಿಡಿಯಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್​ ವರದಿ ಮಾಡಿದೆ. ಹೊಸ ನಿಯಮ ರೂಪುಗೊಂಡ ಬಳಿಕ, ಅಮೆರಿಕದ ಮಿಲಿಟರಿ ಗುತ್ತಿಗೆದಾರರು ಸೇರಿದಂತೆ ನಿರ್ದಿಷ್ಟ ಕಂಪನಿಗಳಿಗೆ ಇವು ಕೈಸೇರದಂತೆ ಶಾಶ್ವತ ವ್ಯವಸ್ಥೆ ಜಾರಿಗೆ ಬರಲಿದೆ.

ಯಾವ್ಯಾವ ಲೋಹಗಳು?: ಸಮೇರಿಯಂ, ಗಾಡೋಲಿನಿಯಂ, ಟರ್ಬಿಯಂ, ಡೈಸ್ಪ್ರೋಸಿಯಂ, ಲುಟೇನಿಯಂ, ಸ್ಕ್ಯಾಂಡಿಯಂ, ಇಟ್ರಿಯಂ ಸೇರಿದಂತೆ 17 ಲೋಹಧಾತುಗಳು ಚೀನಾದ ರಫ್ತು ನಿಯಂತ್ರಣ ಪಟ್ಟಿಯಲ್ಲಿವೆ. ಭೂಮಿಯಲ್ಲಿ ಲಭ್ಯವಾಗುವ ಅಪರೂಪದ ಧಾತುಗಳ ಪೈಕಿ ಶೇ. 90ರಷ್ಟನ್ನು ಚೀನಾವೊಂದೇ ಉತ್ಪಾದಿಸುತ್ತದೆ. ಅಮೆರಿಕದಲ್ಲಿ ಇಂತಹ ಒಂದೇ ಒಂದು ಗಣಿ ಇದೆ. ಹಾಗಾಗಿ ಈ ಲೋಹಧಾತುಗಳಿಗಾಗಿ ಚೀನಾ ಮೇಲೆ ಅಮೆರಿಕ ಅವಲಂಬಿತವಾಗಿದೆ. ಇವು ಅಮೆರಿಕಕ್ಕೆ ಬೇರೆ ದೇಶಗಳಿಂದ ಸಿಗುವುದೂ ದುಸ್ತರ; ಎಲ್ಲ ದೇಶಗಳಿಗೂ ಇವುಗಳ ರಫ್ತನ್ನು ಚೀನಾ ನಿರ್ಬಂಧಿಸಿದೆ. ಮ್ಯಾನ್ಮಾರ್ ಮತ್ತು ಲಾವೋಸ್​ನಿಂದ ಸ್ವಲ್ಪಮಟ್ಟಿಗೆ ಸಿಗಬಹುದಾದರೂ ಆ ದೇಶಗಳ ಮೇಲೆ ಚೀನಾ ಹಿಡಿತ ಹೊಂದಿದೆ ಎಂದು ತಜ್ಞರು ವಿವರಿಸಿದ್ದಾರೆ.

ಅಮೆರಿಕ ಉದ್ಯಮಿಗಳಿಗೆ ಸಂಕಷ್ಟ: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಭಾರಿ ಪ್ರಮಾಣದ ಪರಸ್ಪರ ತೆರಿಗೆಗೆ ಪ್ರತೀಕಾರವಾಗಿ ಚೀನಾ ಈ ಕ್ರಮ ಕೈಗೊಂಡಿದೆ. ಇದರಿಂದ ಎರಡೂ ದೇಶಗಳ ನಡುವಿನ ತೆರಿಗೆ ಸಮರ ಮತ್ತಷ್ಟು ಉಲ್ಬಣಗೊಳ್ಳಲಿದೆ. ಹಲವಾರು ದಶಕಗಳಿಂದ ಈ ಲೋಹಧಾತುಗಳ ಮೇಲೆ ಅವಲಂಬಿತವಾಗಿರುವ ಅಮೆರಿಕದ ಕೈಗಾರಿಕೆಗಳಲ್ಲಿ ಉತ್ಪಾದನೆ ಕುಂಠಿತವಾಗಿ ಅವು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಚೀನಾದ ಅಪರೂಪದ ಲೋಹಧಾತುಗಳನ್ನು ಬಳಸುವ ಅಮೆರಿಕದ ಕಂಪನಿಗಳ ಪೈಕಿ ಲಾಕ್​ಹೀಡ್ ಮಾರ್ಟಿನ್, ಟೆಸ್ಲಾ ಮತ್ತು ಆಪಲ್ ಪ್ರಮುಖವಾಗಿವೆ.

ಯಾವ್ಯಾವುದರಲ್ಲಿ ಬಳಕೆ: ಈ ಲೋಹಧಾತುಗಳನ್ನು ಅಮೆರಿಕವು ಎಲೆಕ್ಟ್ರಿಕ್ ಕಾರು, ಡ್ರೋನ್, ರೋಬಾಟ್, ಕ್ಷಿಪಣಿ, ಅಂತರಿಕ್ಷ ನೌಕೆ, ಗ್ಯಾಸೋಲಿನ್ ಆಧರಿತ ಕಾರು ಮುಂತಾದವುಗಳಲ್ಲಿನ ಎಲೆಕ್ಟ್ರಿಕ್ ಮೋಟಾರ್ ತಯಾರಿಕೆಗೆ ಬಳಸುತ್ತದೆ. ಇದಲ್ಲದೆ, ಜೆಟ್ ಇಂಜಿನ್, ಲೇಸರ್, ಕಾರಿನ ಹೆಡ್​ಲೈಟ್, ಸ್ಪಾರ್ಕ್ ಪ್ಲಗ್​ಗಳು, ಕೆಪ್ಯಾಸಿಟರ್​ಗಳು, ಕೃತಕ ಬುದ್ಧಿಮತ್ತೆಯ ಸರ್ವರ್​ಗಳು, ಸ್ಮಾರ್ಟ್​ಫೋನ್​ಗಳ ತಯಾರಿಕೆಯಲ್ಲೂ ಈ ಲೋಹಧಾತುಗಳ ಅವಶ್ಯಕತೆ ಇರುತ್ತದೆ.

ಟ್ರಂಪ್ ತೆರಿಗೆ ನಂತರ ಸೆನ್ಸೆಕ್ಸ್ ಶೇ.2ರಷ್ಟು ಕುಸಿತ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ತಿಂಗಳ ಆರಂಭದಲ್ಲಿ ವಿವಿಧ ರಾಷ್ಟ್ರಗಳ ಮೇಲೆ ಪರಸ್ಪರ ತೆರಿಗೆ ಘೋಷಿಸಿದಾಗಿನಿಂದ ಇಲ್ಲಿಯವರೆಗೆ ಮುಂಬೈ ಷೇರುಪೇಟೆ ಸೂಚ್ಯಂಕ ಶೇ. 2ರಷ್ಟು ಕುಸಿತವಾಗಿದ್ದು, ಹೂಡಿಕೆದಾರರಿಗೆ ಒಟ್ಟು 11.30 ಲಕ್ಷ ಕೋಟಿ ರೂ. ನಷ್ಟವಾಗಿದೆ. ಏಪ್ರಿಲ್ 2ರಿಂದ ಸೆನ್ಸೆಕ್ಸ್ 1,460 ಅಂಕ ಅಥವಾ ಶೇ. 1.90ರಷ್ಟು ಇಳಿಕೆಯಾಗಿದೆ. ಚೀನಾ ಮತ್ತು ಅಮೆರಿಕದಂತಹ ಆರ್ಥಿಕವಾಗಿ ಬಲಿಷ್ಠವಾದ ಎರಡು ರಾಷ್ಟ್ರಗಳು ವ್ಯಾಪಾರ ಸಮರದಲ್ಲಿ ತೊಡಗಿರುವುದು ಜಾಗತಿಕ ಮಟ್ಟದಲ್ಲಿ ಬಹುತೇಕ ಎಲ್ಲ ದೇಶಗಳಿಗೆ ನಷ್ಟ ಉಂಟು ಮಾಡುತ್ತದೆ ಎಂಬ ಭಾವನೆ ಹೂಡಿಕೆದಾರರಲ್ಲಿ ಬೇರೂರಿದೆ.