ನ್ಯೂಸ್

ಬಾಲ್ಯವಿವಾಹದ ನೋಂದಣಿಗೂ ಅವಕಾಶ ನೀಡುವ ಕಾನೂನು ತಿದ್ದುಪಡಿ! ರಾಜಸ್ಥಾನ ಸರ್ಕಾರದ ವಿರುದ್ಧ ಬಿಜೆಪಿ ಗರಂ

ಜೈಪುರ: ಬಾಲ್ಯವಿವಾಹವೂ ಸೇರಿದಂತೆ ಎಲ್ಲಾ ವಿವಾಹಗಳ ನೋಂದಣಿಯನ್ನು ಕಡ್ಡಾಯಗೊಳಿಸುವ ತಿದ್ದುಪಡಿ ವಿಧೇಯಕವೊಂದನ್ನು ರಾಜಸ್ಥಾನದ ವಿಧಾನಸಭೆ ಇಂದು ಅಂಗೀಕರಿಸಿದೆ. ಬಾಲ್ಯವಿವಾಹಗಳಿಗೆ ಮಾನ್ಯತೆ ನೀಡುವ ಈ ವಿಧೇಯಕ ವಿಧಾನಸಭೆಯ ಇತಿಹಾಸದಲ್ಲಿ ಕರಾಳ ದಿನವಾಗಿದೆ ಎಂದು ವಿರೋಧ ಪಕ್ಷ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಇಂದು ರಾಜಸ್ಥಾನದ ಕಾಂಗ್ರೆಸ್​ ನೇತೃತ್ವದ ಸರ್ಕಾರ ವಿಧಾನಸಭೆಯಲ್ಲಿ ರಾಜಸ್ಥಾನ ಕಂಪಲ್ಸರಿ ರಿಜಿಸ್ಟ್ರೇಷನ್ ಆಫ್ ಮ್ಯಾರೇಜಸ್​(ಅಮೆಂಡ್​ಮೆಂಟ್​) ಬಿಲ್​, 2021 ಅನ್ನು ಮಂಡಿಸಿತು. ತಕ್ಷಣ ಬಿಜೆಪಿ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೆ, ವಿಧೇಯಕವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಸದನದಿಂದ ಹೊರನಡೆದರು.  "ವಿಧಾನಸಭೆಯು ಸರ್ವಾನುಮತದಿಂದ ಬಾಲವಿವಾಹಗಳಿಗೆ ಅವಕಾಶ ಕೊಡಲು ಸಾಧ್ಯವೇ? ಈ ವಿಧೇಯಕವನ್ನು ಅಂಗೀಕರಿಸಿದರೆ ಇದು ವಿಧಾನಸಭಾ ಇತಿಹಾಸದಲ್ಲಿ ಒಂದು ಕಪ್ಪು ಅಧ್ಯಾಯವಾಗಲಿದೆ" ಎಂದು ಬಿಜೆಪಿ ಶಾಸಕ ಅಶೋಕ್ ಲಹೋಟಿ ಸುದ್ದಿಗಾರರಿಗೆ ಹೇಳಿದರು.

ಆದಾಗ್ಯೂ ನಂತರದಲ್ಲಿ ವಿಧಾನಸಭೆಯಲ್ಲಿ ವಾಯ್ಸ್​ ಓಟ್​ನ ಮೂಲಕ ಮಸೂದೆಯು ಅಂಗೀಕರಿಸಲ್ಪಟ್ಟಿತು. ಈ ಮಸೂದೆಯು ಹೆಚ್ಚುವರಿ ಜಿಲ್ಲಾ ವಿವಾಹ ನೋಂದಣಿ ಅಧಿಕಾರಿ(ಡಿಎಂಆರ್​ಒ)ಗಳನ್ನು ನೇಮಿಸಲು ಅವಕಾಶ ನೀಡುತ್ತದೆ. ಜೊತೆಗೆ, ವಿವಾಹಗಳ ಕಡ್ಡಾಯ ನೋಂದಣಿ ಕಾಯ್ದೆ ಸೆಕ್ಷನ್ 8 ರಲ್ಲಿ ಮದುವೆಯ ಸಮಯದಲ್ಲಿ ಹುಡುಗಿಯ ವಯಸ್ಸು 18 ವರ್ಷಕ್ಕಿಂತ ಕಡಿಮೆಯಿದ್ದರೆ ಮತ್ತು ಹುಡುಗನ ವಯಸ್ಸು 21 ಕ್ಕಿಂತ ಕಡಿಮೆಯಿದ್ದರೆ, ಅವರ ಪಾಲಕರು ಅಥವಾ ಪೋಷಕರು 30 ದಿನಗಳಲ್ಲಿ ನೋಂದಣಿ ಅಧಿಕಾರಿಗೆ ವಿವಾಹದ ಮಾಹಿತಿ ನೀಡಬೇಕೆಂದು ಹೇಳುತ್ತದೆ ಎನ್ನಲಾಗಿದೆ. (ಏಜೆನ್ಸೀಸ್)