ಗರ್ಭಿಣಿಯನ್ನು 1.5 ಕಿ.ಮೀ ಹೆಗಲ ಮೇಲೆ ಹೊತ್ತ ಗ್ರಾಮಸ್ಥರು 
ನ್ಯೂಸ್

ಆಂಬ್ಯುಲೆನ್ಸ್ ಚಾಲಕನ ನಿರ್ಲಕ್ಷ್ಯ: ಹೆರಿಗೆ ನೋವಿನಲ್ಲಿದ್ದ ಗರ್ಭಿಣಿಯನ್ನು ಮಂಚದಲ್ಲಿ ಕರೆದೊಯ್ದ ಕುಟುಂಬ | Ambulance Negligence

ರಸ್ತೆ ಸರಿ ಇಲ್ಲ ಎಂಬ ನೆಪ ಹೇಳಿ ಗ್ರಾಮದ ಒಳಗೆ ಬರದ ಆಂಬ್ಯುಲೆನ್ಸ್ ಚಾಲಕ?

ಗರ್ಭಿಣಿಯನ್ನು ಮಂಚದಲ್ಲಿ ಮುಖ್ಯ ರಸ್ತೆಯವರೆಗೆ ಹೊತ್ತೊಯ್ದ ಕುಟುಂಬ

ರಸ್ತೆ ಇದ್ದರೂ ನಿರ್ಲಕ್ಷ್ಯ ತೋರಿದ ಚಾಲಕನ ವಿರುದ್ಧ ಕ್ರಮಕ್ಕೆ ಆಗ್ರಹ

Pregnant Woman Carried On Charpoy: ತಂತ್ರಜ್ಞಾನದಲ್ಲಿ ನಾವೇ ಮುಂಚೂನಿಯಲ್ಲಿದ್ದೇವೆ ಎಂದು ಬೀಗಿದರೂ, ನಮ್ಮ ದೇಶದಲ್ಲಿ ಇಂತಹ ದಾರುಣ ಕಥೆಗಳಿಗೆ ಮಾತ್ರ ಬರವಿಲ್ಲ. ಹೆರಿಗೆ ನೋವಿನಿಂದ ನರಳುತ್ತಿದ್ದ ಗರ್ಭಿಣಿಯೊಬ್ಬಳನ್ನು ಆಂಬ್ಯುಲೆನ್ಸ್ ಚಾಲಕನ ಬೇಜವಾಬ್ದಾರಿಯಿಂದಾಗಿ ಗ್ರಾಮಸ್ಥರು ಮಂಚದ ಮೇಲೆ ಮಲಗಿಸಿ, ಒಂದೂವರೆ ಕಿಲೋಮೀಟರ್ ದೂರ ಹೆಗಲ ಮೇಲೆ ಹೊತ್ತು ಸಾಗಿಸಿದ ಹೃದಯವಿದ್ರಾವಕ ಘಟನೆ ಜಾರ್ಖಂಡ್‌ನಲ್ಲಿ ಜರುಗಿದೆ.

ಚತ್ರಾ ಜಿಲ್ಲೆಯ ಕುಂದಾ ಬ್ಲಾಕ್‌ನ ಸಿಂದ್ರಿ ಗ್ರಾಮದ ರಿಂಕು ದೇವಿ ಎಂಬ ಗರ್ಭಿಣಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಾಗ ಕುಟುಂಬಸ್ಥರು ತಕ್ಷಣ 108 ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದರು. ವಾಹನ ಬಂದಿತಾದರೂ, ‘ಮುಂದೆ ಕಣಿವೆ ಹಾಗೂ ಘಾಟಿ ರಸ್ತೆ ಇದೆ’ ಎಂಬ ಕಾರಣ ನೀಡಿ ಚಾಲಕ ಸಬಾನೊ ಎಂಬಲ್ಲಿಯೇ ಆಂಬ್ಯುಲೆನ್ಸ್ ನಿಲ್ಲಿಸಿದ್ದಾನೆ.

ಅಂಗಲಾಚಿದರೂ ಬಾರದ ಆಂಬ್ಯುಲೆನ್ಸ್ ಚಾಲಕ

ಮಹಿಳೆಯ ತಂದೆ ರಾಜದೇವ್ ಗಂಝು ಅವರು ಗ್ರಾಮಕ್ಕೆ ಬರುವಂತೆ ಎಷ್ಟೇ ಮನವಿ ಮಾಡಿದರೂ ಚಾಲಕ ಬರಲು ಒಪ್ಪಲಿಲ್ಲ. ಕೊನೆಗೆ ಬೇರೆ ದಾರಿ ಕಾಣದೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹೆರಿಗೆ ನೋವಿನಿಂದ ತತ್ತರಿಸುತ್ತಿದ್ದ ಮಹಿಳೆಯನ್ನು ನಾಲ್ಕು ಕಾಲಿನ ಮಂಚದ (ಚಾರ್ಪಾಯ್) ಮೇಲೆ ಮಲಗಿಸಿ, ಸುಮಾರು 1.5 ಕಿಲೋಮೀಟರ್ ದೂರದವರೆಗೆ ನಡೆದುಕೊಂಡು ಬಂದು ಮುಖ್ಯ ರಸ್ತೆಯಲ್ಲಿದ್ದ ಆಂಬ್ಯುಲೆನ್ಸ್ ಸೇರಿಸಿದ್ದಾರೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: 'ಮುರಾಸು' ಚಂಡಮಾರುತದ ಅಬ್ಬರ: ಆಂಧ್ರಪ್ರದೇಶಕ್ಕೆ ಕರ್ನಾಟಕದ ಅಭಯ | Cyclone Murasu

ಇನ್ನು, ಗ್ರಾಮಕ್ಕೆ ಉತ್ತಮ ರಸ್ತೆ ಇದ್ದು, ನಾಲ್ಕು ಚಕ್ರದ ವಾಹನಗಳು ಸುಲಭವಾಗಿ ಓಡಾಡುತ್ತಿದ್ದರೂ ಆಂಬ್ಯುಲೆನ್ಸ್ ಚಾಲಕ ಬೇಕಂತಲೇ ನಿರ್ಲಕ್ಷ್ಯ ತೋರಿದ್ದಾನೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.