ಕಲಬುರಗಿ: ಸಂಸತ್ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ (Amit Shah) ಅವರು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರಿಗೆ ಅವಮಾನಿಸಿದ್ದಾರೆ ಎಂದು ಆರೋಪಿಸಿ ವಿಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದು, ಅಮಿತ್ ಷಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿವೆ. ಇನ್ನೂ ಅಂಬೇಡ್ಕರ್ ಅವರ ಬಗ್ಗೆ ಹೇಳಿಕೆ ನೀಡಿರುವ ಅಮಿತ್ ಷಾಗೆ ಹುಚ್ಚು ನಾಯಿ ಕಚ್ಚಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿಯಲ್ಲಿ ಈ ಬಗ್ಗೆ ಮಾತನಾಡಿದ ಪ್ರಿಯಾಂಕ್ *(Priyank Kharge), ಏಳು ಜನ್ಮದಲ್ಲಿ ದೇವರ ನಾಮಸ್ಮರಣೆ ಮಾಡಿದರೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ಜನ್ಮದಲ್ಲಿ ಅಂಬೇಡ್ಕರ್ ನಾಮ ಜಪಿಸಿದರೆ ನಮಗೆ ಸ್ವರ್ಗದಲ್ಲಿ ಜಾಗ ಸಿಗುತ್ತದೆ. ರಾಜಕೀಯ, ಸಾಮಾಜಿಕ, ಆರ್ಥಿಕ ಸಮಾನತೆ ಮತ್ತು ಸ್ವಾಭಿಮಾನದ ಜೀವನವನ್ನು ನಮಗೆ ಅಂಬೇಡ್ಕರ್ ಅವರು ಕಲ್ಪಿಸಿಕೊಟ್ಟಿದ್ದಾರೆ. ಅಂಬೇಡ್ಕರ್ ಮತ್ತು ಬಸವ ತತ್ವಗಳು ಹೆಚ್ಚಾದಷ್ಟು ಆರ್‌ಎಸ್‌ಎಸ್ ಸಿದ್ಧಾಂತಗಳು ಕಡಿಮೆಯಾಗುತ್ತವೆ. ಅಂಬೇಡ್ಕರ್ ಅಮಿತ್ ಷಾ ನೀಡಿರುವ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಅವರಿಗೆ ಹುಚ್ಚು ನಾಯಿ ಕಚ್ಚಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ವಿಪಕ್ಷದವರಿಗೆ ಈಗ ಅಂಬೇಡ್ಕರ್.. ಅಂಬೇಡ್ಕರ್.. ಅಂಬೇಡ್ಕರ್ ಎಂದು ಹೇಳುವುದು ಒಂದು ಫ್ಯಾಷನ್ ಆಗಿಬಿಟ್ಟಿದೆ. ಇಷ್ಟು ದೇವರ ಹೆಸರನ್ನು ಹೇಳಿದ್ದರೆ ಸ್ವರ್ಗಕ್ಕೆ ಹೋಗಬಹುದಾಗಿತ್ತು. ಅಂಬೇಡ್ಕರ್ ಅವರ ಹೆಸರನ್ನು ಹೇಳಿದರೆ, ನಮಗೂ ಆನಂದವೇ. ಅಂಬೇಡ್ಕರ್ ವಿಚಾರದಲ್ಲಿ ಕಾಂಗ್ರೆಸ್ಸಿಗರ ನಿಲುವು ಏನು ಎನ್ನುವುದನ್ನು ನಾನು ಹೇಳುತ್ತೇನೆ. ಅಂಬೇಡ್ಕರ್ ಅವರು ದೇಶದ ಮೊದಲ ಕ್ಯಾಬಿನೆಟ್ ನಿಂದ ರಾಜೀನಾಮೆ ನೀಡಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿಚಾರ ಮತ್ತು ದೇಶದ ವಿದೇಶಾಂಗ ನೀತಿಯ ಬಗ್ಗೆ ನನಗೆ ಅಸಮಾಧಾನವಿದೆ ಎಂದು ಅಂಬೇಡ್ಕರ್ ಹೇಳಿದ್ದರು. ಬಿ.ಸಿ.ರಾಯ್ ಎನ್ನುವವರು ಪತ್ರವನ್ನು ಬರೆದು, ರಾಜಾಜಿ ಮತ್ತು ಅಂಬೇಡ್ಕರ್ ಅವರು ಕ್ಯಾಬಿನೆಟ್ನಿಂದ ಹೊರಬಂದರೆ ತೊಂದರೆ ಆಗುವುದಿಲ್ಲವೇ ಎಂದು ಕೇಳಿದ್ದರು. ರಾಜಾಜಿ ಅವರಿಂದ ಸ್ವಲ್ಪ ತೊಂದರೆ ಆಗಬಹುದು, ಅಂಬೇಡ್ಕರ್ ಅವರಿಂದ ಏನೂ ತೊಂದರೆಯಾಗುವುದಿಲ್ಲ ಎಂದು ನೆಹರೂ, ಬಿ. ಸಿ. ರಾಯ್ಗೆ ಹೇಳಿದ್ದರು ಎಂದು ಅಮಿತ್ ಷಾ, ರಾಜ್ಯಸಭೆಯಲ್ಲಿ ಸ್ಮರಿಸಿದ್ದರು. ಈ ಹೇಳಿಕೆ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು.