ನ್ಯೂಸ್

141ನೇ IOC ಅಧಿವೇಶನ; ಅಧ್ಯಕ್ಷ ಥಾಮಸ್ ಬಾಚ್ ಆತಿಥ್ಯ ವಹಿಸಿದ ಅಂಬಾನಿ ದಂಪತಿ

ಮುಂಬೈ: ಅಕ್ಟೋಬರ್ 15 ರಿಂದ 17, 2023 ರವರೆಗೆ ಭಾರತವು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (IOC) ಪ್ರತಿಷ್ಠಿತ 141ನೇ ಅಧಿವೇಶನವನ್ನು ಆಯೋಜಿಸಲಿದೆ. ಅಧಿವೇಶನಕ್ಕೂ ಮುನ್ನ ಐಒಸಿ ಅಧ್ಯಕ್ಷ ಥಾಮಸ್ ಬಾಚ್ ಅವರನ್ನು ತಮ್ಮ ನಿವಾಸದಲ್ಲಿ ಮಂಗಳವಾರ ಸಂಜೆ ಅಂಬಾನಿ ದಂಪತಿ ಸ್ವಾಗತಿಸಿದ್ದಾರೆ.

ಭಾರತವು ಕೊನೆಯದಾಗಿ 1983 ರಲ್ಲಿ ಐಒಸಿ ಸಭೆಯನ್ನು ಆಯೋಜಿಸಿತ್ತು. ಇದು 40 ವರ್ಷಗಳ ನಂತರ ದೇಶಕ್ಕೆ ಮತ್ತೆ ಹಿಂದಿರುಗಿದೆ. ಐಒಸಿ ಅಧಿವೇಶನವು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (IOC) ಕಾರ್ಯಕಾರಿ ಮಂಡಳಿಯ ಎಲ್ಲಾ ಸದಸ್ಯರ ಸಭೆಯಾಗಿದ್ದು, IOC ಸದಸ್ಯರಿಂದ ಆಯ್ಕೆಯಾದ ಸದಸ್ಯರನ್ನು ಸಹ ಒಳಗೊಂಡಿರುತ್ತದೆ.

ಸಾಮಾನ್ಯವಾಗಿ, ಮುಂಬರುವ ಈವೆಂಟ್‌ಗಳಿಗಾಗಿ ಆತಿಥೇಯ ನಗರಗಳಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳು, ಕ್ರೀಡೆಗಳು ಮತ್ತು ಒಕ್ಕೂಟಗಳ ಸೇರ್ಪಡೆ ಅಥವಾ ಹೊರಗಿಡುವಿಕೆ ಮತ್ತು ಒಲಿಂಪಿಕ್ ಚಾರ್ಟರ್‌ನಲ್ಲಿನ ಬದಲಾವಣೆಗಳನ್ನು ಐಒಸಿ ಸೆಷನ್‌ಗಳಲ್ಲಿ ಮಾಡಲಾಗುತ್ತದೆ.

ಭಾರತಕ್ಕೆ ಐಒಸಿ ಅಧಿವೇಶನವು ರಾಷ್ಟ್ರದ ಸ್ವಾತಂತ್ರ್ಯದ 76ನೇ ವರ್ಷಕ್ಕೆ ಹೊಂದಿಕೆಯಾಗುತ್ತದೆ. ಇದು ದೇಶದಲ್ಲಿ ಕ್ರೀಡೆಯ ಪಾತ್ರವನ್ನು ಪ್ರಸ್ತುತಪಡಿಸಲು ಮತ್ತು ಒಲಿಂಪಿಕ್ ಆಂದೋಲನಕ್ಕೆ ಅದರ ಕೊಡುಗೆಯನ್ನು ಆಚರಿಸಲು ಒಂದು ಅವಕಾಶವಾಗಿದೆ.

ದೇಶದಿಂದ IOC ಸದಸ್ಯೆಯಾಗಿ ಆಯ್ಕೆಯಾದ ಮೊದಲ ಮಹಿಳೆ ನೀತಾ ಅಂಬಾನಿ ನೇತೃತ್ವದಲ್ಲಿ 2022 ರಲ್ಲಿ ಐಒಸಿ ಸಭೆಯ ಹೋಸ್ಟಿಂಗ್ ಹಕ್ಕುಗಳನ್ನು ಭಾರತ ಗೆದ್ದುಕೊಂಡಿತು.

ಇದೀಗ ಅಕ್ಟೋಬರ್ 15 ರಿಂದ 17, 2023ರ ನಡುವೆ ಮುಂಬೈನಲ್ಲಿ ನಡೆಯಲಿರುವ 141ನೇ ಐಒಸಿ ಅಧಿವೇಶನಕ್ಕೂ ಮುನ್ನ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಐಒಸಿ ಅಧ್ಯಕ್ಷರಾದ ಥಾಮಸ್ ಬಾಚ್ ಅವರನ್ನು ತಮ್ಮ ಮುಂಬೈ ನಿವಾಸದಲ್ಲಿ ವಿಶೇಷವಾಗಿ ಸ್ವಾಗತಿಸಿದರು.