ಹೈದರಾಬಾದ್: ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್(Allu Arjun) ಹೈದರಾಬಾದ್‌ನ ಚಂಚಲಗುಡ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಶನಿವಾರ(ಡಿಸೆಂಬರ್ 14) ಮುಂಜಾನೆ ಜೈಲಿನಿಂದ ರಿಲೀಸ್ ಆದ ಬಳಿಕ ಮೊದಲು ಗೀತಾ ಆರ್ಟ್ಸ್ ಕಚೇರಿಗೆ ತಲುಪಿ ನಂತರ ಮನೆಗೆ ತಲುಪಿದರು. ಕುಟುಂಬಸ್ಥರು ಸಂತಸದಿಂದ ಅಲ್ಲು ಅರ್ಜುನ್ ಅವರನ್ನು ಬರಮಾಡಿಕೊಂಡಿದ್ದು ಗೊತ್ತೆ ಇದೆ.
ಇದನ್ನು ಓದಿ: ‘ಫತೇಹ್'’ ಬಾಕ್ಸ್ ಆಫೀಸ್ ಕಲೆಕ್ಷನ್ ನನ್ನದಲ್ಲ.. ಅವರದ್ದು; ನಟ ಸೋನು ಸೂದ್ ಹೀಗೆಳಿದ್ದೇಕೆ? | Sonu Sood
ಅಲ್ಲು ಅರ್ಜುನ್ ಬಂಧನದ ವಿಷಯ ತಿಳಿಯುತ್ತಿದ್ದಂತೆ ವಿಶ್ವಂಭರ ಸಿನಿಮಾದ ಶೂಟಿಂಗ್ನಲ್ಲಿದ್ದ ಮೆಗಾ ಸ್ಟಾರ್ ಚಿರಂಜೀವಿ ಚಿತ್ರೀಕರಣವನ್ನು ಅರ್ಧದಲ್ಲೇ ಬಿಟ್ಟು ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ಹೋಗಿದ್ದರು. ಆದರೆ ನೆಚ್ಚಿನ ನಟನನ್ನು ನೋಡಲು ಜನರು ಜಮಾಯಿಸುತ್ತಾರೆ ಇದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಪೊಲೀಸ್ ಠಾಣೆ ಬಳಿಗೆ ಬರದಂತೆ ಪೊಲೀಸರು ಚಿರಂಜೀವಿ ಅವರಿಗೆ ಮನವಿ ಮಾಡಿದ್ದರು. ವಾಸ್ತವತೆಯನ್ನು ಅರಿತ ಮೆಗಾಸ್ಟಾರ್ ಪೊಲೀಸ್ ಠಾಣೆ ಬಳಿ ಹೋಗದೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಮನೆಗೆ ಹೋಗಿದ್ದರು. ಚಿರಂಜೀವಿ ಜತೆಗೆ ಅವರ ಪತ್ನಿ ಸುರೇಖಾ ಕೂಡ ಬಂದಿದ್ದರು.
ಬಿಡುಗಡೆ ಬಳಿಕ ಮನೆಯಲ್ಲಿ ಶನಿವಾರ ಟಾಲಿವುಡ್ ಸೆಲೆಬ್ರಿಟಿಗಳು ಮತ್ತು ರಾಜಕೀಯ ನಾಯಕರ ಭೇಟಿಯಲ್ಲಿ ಅಲ್ಲು ಅರ್ಜುನ್ ನಿರತರಾಗಿದ್ದರು. ಆ ವೇಳೆ ಚಿರಂಜೀವಿ ಪತ್ನಿ ಸುರೇಖಾ ಅವರು ಅಲ್ಲು ಅರ್ಜುನ್ ಜತೆ ಮಾತನಾಡಿ ಧೈರ್ಯ ಹೇಳಿದ್ದರು. ಶನಿವಾರ ಬಿಸಿಯಿದ್ದ ಕಾರಣ ಅಲ್ಲು ಅರ್ಜುನ್ ಭಾನುವಾರ( ಡಿಸೆಂಬರ್ 15) ಮೆಗಾಸ್ಟಾರ್ ಚಿರಂಜೀವಿ ಅವರನ್ನು ಭೇಟಿಯಾದರು.
ಅಲ್ಲು ಅರ್ಜುನ್ ಸ್ವತಃ ತಾವೇ ಕಾರು ಚಲಾಯಿಸಿಕೊಂಡು ಕುಟುಂಬ ಸಮೇತರಾಗಿ ಚಿರಂಜೀವಿ ಮನೆಗೆ ತೆರಳಿದ್ದಾರೆ. ಚಿರು ನಿವಾಸದಲ್ಲಿ ಅಲ್ಲು ಅರ್ಜುನ್ ಸುಮಾರು ಒಂದು ಗಂಟೆ ಕಾಲ ಕಳೆದು ವಿವಿಧ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಸದ್ಯ ಈ ಇಬ್ಬರ ಭೇಟಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇಷ್ಟು ದಿನ ಮೆಗಾ ಮತ್ತು ಅಲ್ಲು ನಡುವಿನ ಫೈಟ್ ಕೊನೆಗೊಂಡಿದೆ ಎಂದು ಅಭಿಮಾನಿಗಳು ಖುಷ್ ಆಗಿದ್ದಾರೆ.
ಡಿಸೆಂಬರ್ 4 ರಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ‘ಪುಷ್ಪ 2’ ವಿಶೇಷ ಪ್ರದರ್ಶನದ ವೇಳೆ ಕಾಲ್ತುಳಿತದಿಂದ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡರು. ಈ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿತ್ತು. ಬಳಿಕ ಹೈದರಾಬಾದ್ ನ್ಯಾಯಾಲಯವು ನಟ ಅಲ್ಲು ಅರ್ಜುನ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನದ ಆದೇಶವನ್ನು ನೀಡಿತ್ತು. ಆದರೆ ಅದೇ ದಿನ ಸಂಜೆ ಹೈಕೋರ್ಟ್ 50,000 ರೂಪಾಯಿಗಳ ವೈಯಕ್ತಿಕ ಬಾಂಡ್ ಮೇಲೆ ಅಲ್ಲು ಅರ್ಜುನ್ ಅವರಿಗೆ ಮಧ್ಯಂತರ ಜಾಮೀನು ನೀಡಿತು. (ಏಜೆನ್ಸೀಸ್)