ನ್ಯೂಸ್

ರಾತ್ರಿ 8-10ರವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ

Webdesk - Manjunatha B

ಬೆಂಗಳೂರು: ಪಟಾಕಿ ಪ್ರಿಯರೇ ಹುಷಾರ್! ದೀಪಾವಳಿ ಬಂತೆಂದು ಖುಷಿಯಾಗಬೇಡಿ. ಪಟಾಕಿ ಹೊಡೆಯಲೂ ಸಮಯದ ನಿರ್ಭಂದವಿದೆ. ರಾತ್ರಿ 8 ಗಂಟೆಗೂ ಮುನ್ನ, 10 ಗಂಟೆ ನಂತರ ಪಟಾಕಿ ಸಿಡಿಸುವಂತಿಲ್ಲ!!

ಸುಪ್ರೀಂಕೋರ್ಟ್ ತನ್ನ ಹಲವು ತೀರ್ಪಗಳಲ್ಲಿ 125 ಡೆಸಿಬಲ್​ಗಿಂತ ಹೆಚ್ಚು ಶಬ್ದ ಮಾಡುವ ಮತ್ತು ಹೆಚ್ಚು ಹೊಗೆ ಹೊರಹೊಮ್ಮುವ ರಾಸಾಯನಿಕಯುಕ್ತ ಪಟಾಕಿಗಳನ್ನು ನಿಷೇಧಿಸಿದೆ. ಈ ನಿರ್ದೇಶನದ ಅನ್ವಯ ಮಾತ್ರ ಹಸಿರು ಪಟಾಕಿ ಹಚ್ಚಲು ಸರ್ಕಾರ ಅವಕಾಶ ಕಲ್ಪಿಸಿದೆ. ವಾಯುಮಾಲಿನ್ಯ, ಶಬ್ದ ಮಾಲಿನ್ಯ ತಡೆಯಲು, ಹಿರಿಯ ನಾಗರಿಕರು ಮತ್ತು ಪುಟ್ಟ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪಟಾಕಿ ತ್ಯಜಿಸಲು ಇಲ್ಲವೇ ಹಸಿರು ಪಟಾಕಿಗಳನ್ನು ಮಾತ್ರ ಬಳಸುವಂತೆ ಪರಿಸರ ಸಚಿವ ಈಶ್ವರ ಖಂಡ್ರೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಪಟಾಕಿಗಳು ಪರಿಸರಕ್ಕೆ ತೀವ್ರ ಹಾನಿ ಉಂಟು ಮಾಡುತ್ತವೆ. ಈ ನಿಟ್ಟಿನಲ್ಲಿ ಪ್ರಜ್ಞಾವಂತ ನಾಗರಿಕರು ಪರಿಸರಕ್ಕೆ ದಟ್ಟ ಹೊಗೆ ಸೇರಿಸುವ, ರಾಸಾಯನಿಕ, ಭಾರ ಲೋಹಯುಕ್ತ ಪಟಾಕಿ ಬಳಸದಂತೆ ಸಲಹೆ ನೀಡಿದ್ದಾರೆ.

ಮುಚ್ಚಳಿಕೆ ಬರೆಸಿಕೊಳ್ಳಲು ಸೂಚನೆ: ಗಣಪತಿ ಹಬ್ಬದ ಸಂದರ್ಭದಲ್ಲಿ ಮುಖ್ಯ ಕಾರ್ಯದರ್ಶಿಗಳೊಂದಿಗೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಪಟಾಕಿ ಮಳಿಗೆಗೆ ಅನುಮತಿ ನೀಡುವಾಗ ಹಸಿರು ಪಟಾಕಿ ಮಾತ್ರ ದಾಸ್ತಾನು ಮಾಡುವುದಾಗಿ ಮಳಿಗೆ ಮಾಲೀಕರಿಂದ ಮುಚ್ಚಳಿಕೆ ಬರೆಸಿಕೊಳ್ಳಲು ಸೂಚಿಸಲಾಗಿದೆ. ನಿಯಮ ಉಲ್ಲಂಘಿಸುವವರಿಗೆ ಮುಂದಿನ ಸಾಲಿನಿಂದ ಅನುಮತಿ ನೀಡದಂತೆ ತಿಳಿಸಲಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಸಚಿವರು ತಿಳಿಸಿದ್ದಾರೆ.

ಜಾಗೃತಿ ಮೂಡಿಸಲು ಮನವಿ: ಸಂಘ-ಸಂಸ್ಥೆಗಳು, ಶಿಕ್ಷಕರು, ಬೋಧಕರು, ಉಪನ್ಯಾಸಕರು, ಪರಿಸರ ಪ್ರೇಮಿಗಳು, ಜನಪ್ರತಿನಿಧಿಗಳು ಪಟಾಕಿಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ಪಟಾಕಿ ತ್ಯಜಿಸುವಂತೆ ಮನವಿ ಮಾಡಬೇಕೆಂದು ಸಚಿವರು ಕೋರಿದ್ದಾರೆ. ಭಾರೀ ಶಬ್ದ ಮಾಡುವ ಪಟಾಕಿಗಳಿಂದ ಪಶು, ಪಕ್ಷಿಗಳಿಗೂ ಕಿರಿಕಿರಿ ಉಂಟಾಗುತ್ತದೆ. ಹೀಗಾಗಿ ದೀಪದಿಂದ ದೀಪ ಹಚ್ಚಿ ಪರಿಸರಸ್ನೇಹಿ ದೀಪಾವಳಿ ಆಚರಿಸೋಣ ಎಂದು ಖಂಡ್ರೆ ಕರೆ ನೀಡಿದ್ದಾರೆ.