ನ್ಯೂಸ್

ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾಂಸ ಮಾರಾಟಕ್ಕೆ ಅವಕಾಶ ಕೊಡಿ

ಬೆಂಗಳೂರು: ಗಾಂಧಿ ಜಯಂತಿ(ಅ.2) ದಿನದಂದೇ ಸಮಸ್ತ ಹಿಂದುಗಳ ಪವಿತ್ರ ಹಬ್ಬವಾದ "ಮಹಾಲಯ ಅಮಾವಾಸ್ಯೆ'- ಪಿತೃ ಪಕ್ಷ ಬಂದಿರುವ ಹಿನ್ನೆಲೆಯಲ್ಲಿ ಈ ಬಾರಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಈಗಾಗಲೇ ಹೊರಡಿಸಿರುವ ಮಾಂಸ ಮಾರಾಟ ನಿಷೇಧ ಆದೇಶವನ್ನು ವಾಪಸ್​ ಪಡೆಯುವಂತೆ ಕರ್ನಾಟಕ ಪೌಲ್ಟಿ ಟ್ರೇಡರ್ಸ್​ ಅಸೋಸಿಯೇಷನ್​, ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಕೆ.ಎನ್​.ನಾಗರಾಜು ಮಾತನಾಡಿ, ಕಾಕತಾಳಿ ಎಂಬಂತೆ ಅದೇ ದಿನದಂದು ದೈವಾಧಿನರಾದವರಿಗೆ ತರಹೇವಾರಿ ಮಾಂಸಾಹಾರ ಖಾದ್ಯತಯಾರಿಸಿ ಎಡೆ ಹಾಕಿ ಪೂಜೆ ಮಾಡಲಾಗುತ್ತದೆ. ಇದು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಹಾಗಾಗಿ, "ಮಹಾಲಯ ಅಮಾವಾಸ್ಯೆ' ದಿನದಂದು ಮಾಂಸ ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕೆಂದು ಸಿಎಂ ಸಿದ್ದರಾಮಯ್ಯ, ನಗರಾಭಿವೃದ್ಧಿ ಮತ್ತು ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರೂ ಸ್ಪಂದನೆ ಸಿಕ್ಕಿಲ್ಲ. ಮತ್ತೊಮ್ಮೆ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಮಾಧ್ಯಮದ ಮೂಲಕ ಮಾಂಸ ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಎನ್​.ಸೆಲ್ವರಾಜು ಮಾತನಾಡಿ, ಕೋಟ್ಯಂತರ ಹಿಂದುಗಳ ಭಾವನೆ ಪರಿಗಣಿಸಿ ಯಾವುದೇ ಅಡತಡೆ ಇಲ್ಲದಂತೆ ಪಿತೃಪಕ್ಷ ಆಚರಿಸಲು ಸರ್ಕಾರ ಅವಕಾಶ ನೀಡಿ ಮಾಂಸ ಮಾರಾಟ ನಿಷೇಧ ಆದೇಶ ತೆರವುಗೊಳಿಸಬೇಕು.ಮಾಂಸ ಮಾರಾಟಕ್ಕೆ ಸರ್ಕಾರ ಅವಕಾಶ ನೀಡದಿದ್ದರೆ ಭಾನುವಾರ(ಸೆ.29) ಅಥವಾ ಮಂಗಳವಾರ (ಅ.1) ಪಿತೃ ಪಕ್ಷ ಆಚರಿಸಿ ಹಿರಿಯರಿಗೆ ಪೂಜೆ ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು.ಖಚಾಂಜಿ ಕೆ.ನಾಗರಾಜ ಸೇರಿ ಸಂದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸರ್ಕಾರಕ್ಕೆ ರಾಜ್ಯ ಒಕ್ಕಲಿಗರ ಒಕ್ಕೂಟ ಮನವಿ: ಮಹಾಲಯ ಅಮಾವಾಸ್ಯೆ' ದಿನದಂದು ಮಾಂಸ ಮಾರಾಟಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿ ರಾಜ್ಯ ಒಕ್ಕಲಿಗರ ಒಕ್ಕೂಟ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದೆ. ಸಮಸ್ತ ಹಿಂದುಗಳ ಮಾಂಸ ತಯಾರಿಸಿ ಹಿರಿಯರಿಗೆ ಪೂಜೆ ಮಾಡುತ್ತಾರೆ. ಅ ದಿನದಂದು ಮಾಂಸ ಮಾರಾಟ ನಿಷೇಧಿಸಿದರೆ ಹಿಂದುಗಳಿಗೆ ತೊಂದರೆಯಾಗುತ್ತದೆ. ಹಾಗಾಗಿ,ಈ ಎಲ್ಲವನ್ನೂ ಗಮನಿಸಿ ಮಾಂಸ ಮಾರಾಟಕ್ಕೆ ಸರ್ಕಾರ ಅನುಕೂಲ ಮಾಡಿಕೊಡಬೇಕೆಂದು ಒಕ್ಕೂಟ ಅಧ್ಯಕ್ಷ ಸಿ.ವಿ. ದೇವರಾಜು ಮನವಿ ಮಾಡಿದರು.