ಬೆಂಗಳೂರು: ಬಿಜೆಪಿ ಜತೆಗೆ ಮೈತ್ರಿ ಘೋಷಣೆ ಆಗುತ್ತಿದ್ದಂತೆಯೇ ಜೆಡಿಎಸ್ ಪಾಳೆಯದಲ್ಲಿ ರಾಜೀನಾಮೆ ಪರ್ವ ಶುರುವಾಗಿದೆ. ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತ ಮುಖಂಡರು ರಾಜೀನಾಮೆಗೆ ನೀಡಿ ಜೆಡಿಎಸ್‌ನಿಂದ ಒಬ್ಬೊಬ್ಬರಾಗಿ ಹೊರ ಬರುತ್ತಿದ್ದಾರೆ.
ಶಾಸಕರಾದ ಶರಣಗೌಡ ಕಂದಕೂರು, ಕರೆಮ್ಮ ಸೇರಿಂತೆ ಕೆಲವು ಶಾಸಕರು ಮೈತ್ರಿ ಬಗ್ಗೆ ತೀವ್ರ ಅಪಸ್ವರ ಎತ್ತಿದ್ದಾರೆ. ಇನ್ನು ಕೆಲವರು ದೇವೇಗೌಡರ ಕುಟುಂಬದ ಮರ್ಜಿ ನೋಡಿಕೊಂಡು ಕಾದುನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಈ ಮಧ್ಯೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮೌನಕ್ಕೆ ಶರಣಾಗಿದ್ದಾರೆ. ಅಷ್ಟೇ ಅಲ್ಲ, ಪ್ರತ್ಯೇಕ ಸಭೆ ನಡೆಸುವ ತಯಾರಿ ಮಾಡಿದ್ದಾರೆ.
ಮೈತ್ರಿ ವಿರೋಧಿಸುವ ಶಾಸಕರು, ಮಾಜಿ ಶಾಸಕರು, ಪಕ್ಷದ ಮುಖಂಡರ ಜತೆ ಚರ್ಚಿಸಲು ಅಕ್ಟೋಬರ್ 16 ರಂದು ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಇದು ಜೆಡಿಎಸ್‌ನಲ್ಲಿ ಕುತೂಹಲ ಮೂಡಿಸಿದೆ.
ಸಿ.ಎಂ. ಇಬ್ರಾಹಿಂ ರಾಜ್ಯದ ಪ್ರಮುಖ ಅಲ್ಪಸಂಖ್ಯಾತ ನಾಯಕರು. ತಮ್ಮ ಪಕ್ಷ ಮೈತ್ರಿ ಮಾಡಿಕೊಂಡರೂ ಇದುವರೆಗೂ ಸಿಎಂ ಇಬ್ರಾಹಿಂ ಯಾವುದೇ ಪ್ರತಿಕ್ರಿಯೆ ನೀಡದೇ ಮೌನಕ್ಕೆ ಜಾರಿದ್ದಾರೆ. ಮೈತ್ರಿಯ ಯಾವುದೇ ಬೆಳವಣಿಗೆಯಲ್ಲೂ ಕಾಣಿಸಿಕೊಂಡಿಲ್ಲ. ಅಲ್ಲದೆ, ಮೈತ್ರಿ ೋಷಣೆ ತರುವಾಯದ ಪಕ್ಷದ ಯಾವುದೇ ಚಟುವಟಿಕೆಯಲ್ಲೂ ಭಾಗವಹಿಸದೇ ಅಂತರ ಕಾಯ್ದುಕೊಂಡಿದ್ದಾರೆ. ಮೂಲಗಳ ಪ್ರಕಾರ ಇಬ್ರಾಹಿಂ ಜೆಡಿಎಸ್ ವರಿಷ್ಠರ ಜತೆ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಜೆಡಿಎಸ್ ತೊರೆಯುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ ಅಕ್ಟೋಬರ್ 16ರಂದು ಸಿ.ಎಂ. ಇಬ್ರಾಹಿಂ ತಾನಾರಿ ರಸ್ತೆಯ ಸಿ.ಎಂ.ಎ ಂಕ್ಷನ್ ಹಾಲ್‌ನಲ್ಲಿ ಬೆಂಬಲಿಗರ ಸಭೆ ಕರೆದಿರುವ ಆಹ್ವಾನ ಪತ್ರಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಬಗ್ಗೆ ಚಿಂತನ-ಮಂಥನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ತಮ್ಮ ಅಭಿಪ್ರಾಯ ತಿಳಿಸಬೇಕು ಎಂದು ಪೋಸ್ಟರ್‌ನಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಜೆಡಿಎಸ್ ರಾಜ್ಯಾಧ್ಯಕ್ಷರು ಕರೆದಿರುವ ಪ್ರತ್ಯೇಕ ಸಭೆ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಪ್ರತ್ಯೇಕ ಸಭೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಕೆಲವರು ಗುಂಪು ಮಾಡಿಕೊಂಡು ಸಭೆ ಮಾಡಲು ಉದ್ದೇಶಿಸಿದ್ದಾರೆ. ಅವರಿಗೆ ನಾನು ಹೇಳುವುದು ಇಷ್ಟೇ, ನಾವೆಂದೂ ನಿಮಗೆ ಅಗೌರವ ತೋರಿಸಿಲ್ಲ. ಇದನ್ನು ಅರಿತುಕೊಳ್ಳಿ ಎಂದು ಮನವಿ ಮಾಡಿದ್ದಾರೆ.