Rahul Gandhi: ಚುನಾವಣಾ ಆಯೋಗ ವಿರುದ್ಧ ಮತಗಳ್ಳತನ ಆರೋಪವನ್ನು ಮುಂದುವರೆಸಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಇಂದು (ಆಗಸ್ಟ್ 2) ಒಂದು ಹೆಜ್ಜೆ ಮುಂದೆ ಹೋಗಿ, 2024ರ ಲೋಕಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ. ಭಾರತದಲ್ಲಿ ಚುನಾವಣಾ ವ್ಯವಸ್ಥೆ ಸತ್ತು ಹೋಗಿದೆ ಎಂದು ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನವದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ವಾರ್ಷಿಕ ಕಾನೂನು ಸಮಾವೇಶ-2025 ರಲ್ಲಿ ಮಾತನಾಡಿದ ರಾಹುಲ್ ಗಾಂಧಿ, "ಭಾರತದಲ್ಲಿ ಚುನಾವಣಾ ವ್ಯವಸ್ಥೆ ಈಗಾಗಲೇ ಸತ್ತಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ ಭಾರಿ ಪ್ರಮಾಣದ ಅಕ್ರಮಗಳು ನಡೆದಿದ್ದು, ಇದು ಭಾರತೀಯ ಜನತಾ ಪಕ್ಷಕ್ಕೆ ಬಹಳ ಕಡಿಮೆ ಬಹುಮತವನ್ನು ನೀಡಿತು. 15 ಕ್ಷೇತ್ರಗಳಲ್ಲಿ ರಿಗ್ಗಿಂಗ್ ನಡೆಯಲಿಲ್ಲ ಎಂದಿದ್ದರೆ ಇಂದು ಮೋದಿ ಪ್ರಧಾನಿಯಾಗಿ ಇರುತ್ತಿರಲಿಲ್ಲ" ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಹೇಗೆ, ಯಾವ ರೀತಿಯಲ್ಲಿ ಅಕ್ರಮ ನಡೆಯಿತು ಎಂದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅದನ್ನು ಸಾಬೀತುಪಡಿಸುವ ಪುರಾವೆಗಳ ಮೂಲಕ ದೇಶದ ಜನರ ಮುಂದೆ ಪ್ರಸ್ತುತ ಪಡಿಸಲಿದೆ. ಭಾರತೀಯ ಸಂವಿಧಾನವನ್ನು ಎತ್ತಿ ಹಿಡಿಯಬೇಕಾಗಿದ್ದ ಸಂಸ್ಥೆಯನ್ನು ಕೈವಶಪಡಿಸಿಕೊಂಡು ನಾಶ ಮಾಡಿದ್ದಾರೆ. ಪ್ರಸ್ತುತವಾಗಿ ದೇಶದಲ್ಲಿ ಇಂದು ಚುನಾವಣಾ ಆಯೋಗ ಅಸ್ತಿತ್ವದಲ್ಲಿ ಇಲ್ಲ, ಅದನ್ನು ತೋರಿಸುವಂತಹ ಪುರಾವೆಗಳು ನಮ್ಮಲ್ಲಿವೆ ಎಂದು ಆಯೋಗದ ವಿರುದ್ಧ ಕಿಡಿಕಾರಿದರು.
ಈ ಪುರಾವೆಯನ್ನು ಕಂಡು ಹಿಡಿಯಲು ನಾವು ನಿರಂತರವಾಗಿ 6 ತಿಂಗಳ ಕಾಲ ಕೆಲಸ ಮಾಡಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಹೇಗೆ ಮತಗಳ್ಳತನ ನಡೆಯಿತು ಎಂಬುದನ್ನು ನೀವು ನೋಡ್ತೀರಿ. 6.5 ಲಕ್ಷ ಮತದಾರರು ಮತ ಚಲಾಯಿಸುತ್ತಾರೆ. ಅದರಲ್ಲಿ 1.5 ಲಕ್ಷ ಮತದಾರರು ನಕಲಿಯಾಗಿದ್ದಾರೆ. ನಾವು ಈ ದಾಖಲೆ ಬಿಡುಗಡೆ ಮಾಡಿದಾಗ ಚುನಾವಣಾ ವ್ಯವಸ್ಥೆ ನಡೆಯುವ ಆಘಾತಕಾರಿ ಘಟನೆಗಳನ್ನು ನೋಡಲಿದ್ದೀರಿ. ಇದು ಅಕ್ಷರಶಃ ಅಣು ಬಾಂಬ್ ರೀತಿ ಇದೆ ಎಂದು ತಿಳಿಸಿದರು.
ಕೃಷಿ ಕಾನೂನುಗಳ ಸಂದರ್ಭದಲ್ಲಿ ಅರುಣ್ ಜೇಟ್ಲಿ ಬೆದರಿಕೆ ಹಾಕಿದ್ದರು.
ಇದೇ ವೇಳೆ ರಾಹುಲ್ ಗಾಂಧಿ, ದಿವಂಗತ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. 3 ಕೃಷಿ ಕಾನೂನುಗಳ ವಿರುದ್ಧ ಹೋರಾಡುತ್ತಿದ್ದಾಗ ನನಗೆ ಬೆದರಿಕೆ ಹಾಕಲು ಬಂದಿದ್ದರು. ನೀವು ಸರ್ಕಾರವನ್ನು ವಿರೋಧಿಸುವುದನ್ನು ಮತ್ತು ಕೃಷಿ ಕಾನೂನುಗಳ ವಿರುದ್ಧ ಹೋರಾಟ ಮುಂದುವರಿಸಿದರೆ, ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನನಗೆ ಹೇಳಿದರು. ಇದಕ್ಕೆ ನಾನು'ನೀವು ಯಾರೊಂದಿಗೆ ಮಾತನಾಡುತ್ತಿದ್ದೀರಿ ಎಂದು ನಿಮಗೆ ತಿಳಿದಿಲ್ಲದಿರಬಹುದು' ಎಂದು ಹೇಳಿದ್ದೆ ಎಂದಿದ್ದಾರೆ.
ಚುನಾವಣೆ ಆಯೋಗದ ವಿರುದ್ಧ ಆರೋಪ ಇದೇ ಮೊದಲಲ್ಲ
ಈ ವಾರದ ಆರಂಭದಲ್ಲಿ ಸಂಸತ್ ಆವರಣದಲ್ಲಿ ಮಾತನಾಡಿದ್ದ ರಾಹುಲ್ ‘ಕಾಂಗ್ರೆಸ್ ಪಕ್ಷವು "ಅಣು ಬಾಂಬ್" ನಂತಹ ಪುರಾವೆಗಳನ್ನು ಕಂಡು ಹಿಡಿದಿದೆ. ಇದು ಮತದಾರರ ಪಟ್ಟಿಯನ್ನು ದೊಡ್ಡ ಪ್ರಮಾಣದಲ್ಲಿ ತಿರುಚಲಾಗಿದೆ ಎಂದು ಸಾಬೀತುಪಡಿಸುತ್ತದೆ. ಚುನಾವಣಾ ಆಯೋಗವು ನಮಗೆ ಸಹಾಯ ಮಾಡದ ಕಾರಣ ನಾವು ಆಳವಾಗಿ ತನಿಖೆ ನಡೆಸಿದ್ದೇವೆ. ನಮಗೆ ಸಿಕ್ಕಿದ್ದು ಪರಮಾಣು ಬಾಂಬ್. ಅದು ಸ್ಫೋಟಗೊಂಡಾಗ, ನೀವು ಭಾರತದಲ್ಲಿ ಚುನಾವಣಾ ಆಯೋಗವನ್ನು ನೋಡುವುದಿಲ್ಲ" ಎಂದು ಹೇಳಿದ್ದರು.
ಆಗಸ್ಟ್ 5ರಂದು ಬೆಂಗಳೂರಿನಲ್ಲಿ ಚುನಾವಣೆ ಆಯೋಗದ ವಿರುದ್ಧ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಹೋರಾಟ ಮಾಡ್ತಿದೆ. ಅಂದು ತಮ್ಮ ಆರೋಪಗಳ ಕುರಿತಾದ ದಾಖಲೆಗಳನ್ನು ಪುರಾವೆ ಸಮೇತ ರಾಹುಲ್ ಗಾಂಧಿ ಬಿಡುಗಡೆ ಮಾಡಲಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)