ಜಂತರ್ ಮಂತರ್‌ನಲ್ಲಿ ಪೊಲೀಸರ ವಿರುದ್ಧ ಮಹಿಳೆಯರ ಜತೆ ಅನುಚಿತ ವರ್ತನೆ ಆರೋಪ 
ನ್ಯೂಸ್

ಮಹಿಳಾ ಪ್ರತಿಭಟನಾಕಾರರ ಮೇಲೆ ಪೊಲೀಸರ ದೌರ್ಜನ್ಯ ಆರೋಪ: ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ! | Rahul Gandhi

ಜಂತರ್ ಮಂತರ್‌ನಲ್ಲಿ ಮಹಿಳಾ ಪ್ರತಿಭಟನಾಕಾರರು ಹಾಗೂ ಪತ್ರಕರ್ತರ ಜತೆ ದೆಹಲಿ ಪೊಲೀಸರು ಅನುಚಿತವಾಗಿ ನಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರ ನೀಡಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ಜಂತರ್ ಮಂತರ್‌ನಲ್ಲಿ ಮಹಿಳೆಯರ ಜತೆ ಪೊಲೀಸರ ಅನುಚಿತ ವರ್ತನೆ?

ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಕ್ಕೆ ರಾಹುಲ್ ಗಾಂಧಿ ಆಕ್ಷೇಪ

ಮಹಿಳಾ ಪತ್ರಕರ್ತೆಯೊಬ್ಬರಿಂದ ಪೊಲೀಸ್ ಅಧಿಕಾರಿಯ ವಿರುದ್ಧ ದೂರು

Jantar Mantar Protest: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಮಹಿಳೆಯರು ಹಾಗೂ ಪತ್ರಕರ್ತರ ಜತೆ ಪೊಲೀಸರು ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟನೆ ನೀಡಬೇಕು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ದೆಹಲಿ ಪೊಲೀಸರು ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವುದರಿಂದ ಅಮಿತ್ ಶಾ ಈ ವಿಚಾರಕ್ಕೆ ಉತ್ತರಿಸಬೇಕು ಎಂದಿದ್ದಾರೆ. ಮಹಿಳಾ ಪತ್ರಕರ್ತೆಯೊಬ್ಬರು ಪೊಲೀಸ್ ಅಧಿಕಾರಿಯ ವಿರುದ್ಧ ಅನುಚಿತ ವರ್ತನೆಯ ಆರೋಪ ಮಾಡಿದ್ದು, ಎಫ್‌ಐಆರ್ ದಾಖಲಿಸುವಂತೆ ನೂರಾರು ಪತ್ರಕರ್ತರು ಹಲವು ಗಂಟೆಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಮಹಿಳಾ ಹೋರಾಟಗಾರರ ಜತೆ ಅನುಚಿತ ವರ್ತನೆ

ದೂರು ದಾಖಲಿಸುವುದು ಪೊಲೀಸರ ಮೂಲಭೂತ ಕರ್ತವ್ಯವಲ್ಲವೇ ಎಂದು ಪ್ರಶ್ನಿಸಿರುವ ರಾಹುಲ್ ಗಾಂಧಿ, ನಿನ್ನೆ ಜಂತರ್ ಮಂತರ್‌ನಲ್ಲಿ ನೂರಾರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಮಹಿಳಾ ಹೋರಾಟಗಾರರ ಜತೆ ಅನುಚಿತವಾಗಿ ವರ್ತಿಸಲಾಗಿದ್ದು, ಕ್ಯಾಮೆರಾಗಳನ್ನು ಕಸಿದುಕೊಂಡು ಪತ್ರಕರ್ತರನ್ನು ಎಳೆದೊಯ್ಯಲಾಗಿದೆ ಎಂದಿದ್ದಾರೆ.

ಅಮಿತ್ ಶಾ ಅವರೇ, ಉತ್ತರಿಸಬೇಕು

ಮಹಿಳೆಯರು ಮತ್ತು ವಿದ್ಯಾರ್ಥಿಗಳು ತಮ್ಮ ಸುರಕ್ಷತೆಗಾಗಿ ಸತ್ಯಾಗ್ರಹ ನಡೆಸುತ್ತಿದ್ದರೆ, ಅವರನ್ನು ರಕ್ಷಿಸಬೇಕಾದ ಪೊಲೀಸರೇ ಅವರ ಮೇಲೆ ಕೈ ಎತ್ತುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಮಹಿಳೆಯೊಬ್ಬರ ದೂರು ದಾಖಲಿಸಲು ಕೂಡ ಸರ್ಕಾರ ಏಕೆ ಹಿಂದೇಟು ಹಾಕುತ್ತಿದೆ ಎಂದು ಪ್ರಶ್ನಿಸಿರುವ ಅವರು, ‘ಅಮಿತ್ ಶಾ ಅವರೇ, ಇದಕ್ಕೆ ನೀವು ಉತ್ತರಿಸಬೇಕು’ ಎಂದಿದ್ದಾರೆ.

ಎಐಎಸ್ಎಯಿಂದಲೂ ಪೊಲೀಸರ ವಿರುದ್ಧ ಆರೋಪ

ಇದೇ ವೇಳೆ, ಎಡಪಂಥೀಯ ವಿದ್ಯಾರ್ಥಿ ಸಂಘಟನೆ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA) ಕೂಡ ದೆಹಲಿ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದೆ. ಮಹಿಳಾ ಪ್ರತಿಭಟನಾಕಾರರು, ಪತ್ರಕರ್ತರು ಹಾಗೂ ವಕೀಲರನ್ನು ಪುರುಷ ಪೊಲೀಸ್ ಸಿಬ್ಬಂದಿ ಎಳೆದಾಡಿ ಅನುಚಿತವಾಗಿ ನಡೆಸಿಕೊಂಡಿದ್ದಾರೆ ಎಂದು ಸಂಘಟನೆ ಹೇಳಿದೆ.

ಇದನ್ನೂ ಓದಿ: ಖ್ಯಾತ ಮೇಕಪ್ ಆರ್ಟಿಸ್ಟ್, LGBTQ ಹೋರಾಟಗಾರ ಮ್ಯಾಡ್ ಸಂಧು ಮೇಲೆ ಗುಂಡಿನ ದಾಳಿ: ಆಸ್ಪತ್ರೆ ತಲುಪುವ ಮುನ್ನವೇ ಸಾವನ್ನಪ್ಪಿದ ಇನ್ಫ್ಲುಯೆನ್ಸರ್! Mad Sandhu Killed

ಹಲವು ಮಹಿಳೆಯರು ಪುರುಷ ಪೊಲೀಸ್ ಸಿಬ್ಬಂದಿ ತಮ್ಮ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರು ನೀಡಿದ್ದಾರೆ ಎಂದು ಎಐಎಸ್ಎ ಆರೋಪಿಸಿದೆ. ಮಹಿಳೆಯರ ಸುರಕ್ಷತೆ ಕಾಪಾಡಬೇಕಾದ ಪೊಲೀಸರು ಜನಸಂದಣಿ ನಿಯಂತ್ರಣದ ಮೂಲ ನಿಯಮಗಳನ್ನೇ ಪಾಲಿಸಿಲ್ಲ ಎಂದು ಸಂಘಟನೆ ಟೀಕಿಸಿದೆ. ಪ್ರತಿಭಟನೆಯಲ್ಲಿ ಮಹಿಳೆಯರ ಜತೆ ಪೊಲೀಸ್ ಅಧಿಕಾರಿಗಳು ಅಸಭ್ಯ ಹಾಗೂ ವೃತ್ತಿಪರವಲ್ಲದ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದೂ ಎಐಎಸ್ಎ ಹೇಳಿದೆ. (ಏಜೆನ್ಸೀಸ್)