ನ್ಯೂಸ್

ಬೈರತಿ ಗದ್ದಲ ಕೋಲಾಹಲ: ಅಸೆಂಬ್ಲಿ ಕಲಾಪ ಬಲಿಪಡೆದ ಭೂಕಬಳಿಕೆ ಆರೋಪ

Webdesk - Ravikanth

ಬೆಳಗಾವಿ: ಟ್ರ್ಯಾಕ್ಟರ್​ ರ್ಯಾಲಿಯ ಗದ್ದಲ, ಗೋಜಲಿಗೆ ಬಲಿಯಾಗಿದ್ದ ವಿಧಾನಸಭೆ ಕಲಾಪಕ್ಕೆ ಶುಕ್ರವಾರ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ವಿರುದ್ಧದ ‘ಭೂಕಬಳಿಕೆ’ ಆರೋಪ ಗ್ರಹಣ ಕವಿಸಿತು. ಈ ವಿಚಾರವಾಗಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವಿನ ವಾದ-ಪ್ರತಿವಾದ ಗದ್ದಲದ ಸ್ವರೂಪ ಪಡೆಯಿತು. ಪ್ರತಿಪಕ್ಷ ಕಾಂಗ್ರೆಸ್ ಧರಣಿ, ಆರೋಪ, ಪ್ರತ್ಯಾರೋಪದ ಕೋಲಾಹಲದಿಂದಾಗಿ ಉಳಿದ ವಿಷಯಗಳ ಚರ್ಚೆ ಮೊಟುಕುಗೊಂಡಿತು. ಅತಿವೃಷ್ಟಿ ಮೇಲೆ ನಡೆದ ಚರ್ಚೆಗೆ ಉತ್ತರಿಸಲು ಸ್ಪೀಕರ್ ಸೂಚಿಸಿದರೂ ಗದ್ದಲ ನಿಲ್ಲದ ಹಿನ್ನೆಲೆಯಲ್ಲಿ ಸದನವನ್ನು ಸೋಮವಾರಕ್ಕೆ ಮುಂದೂ ಡಲಾಯಿತು.

ಪ್ರಶ್ನೋತ್ತರ, ಶೂನ್ಯವೇಳೆ ಬಳಿಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿಲುವಳಿ ಸೂಚನೆ ಮಂಡನೆ ಕೋರಿಕೆಯನ್ನು ತಿರಸ್ಕರಿಸಿರುವುದಾಗಿ ಸ್ಪೀಕರ್ ನಿರ್ಧಾರ ಪ್ರಕಟಿಸಿದರು. ವಿಷಯ ಏನೆಂದು ವಿವರಿಸದೆ, ಏಕಾಏಕಿ ಈ ತೀರ್ವನಕ್ಕೆ ಬರುವುದು ಸರಿಯಲ್ಲವೆಂದು ಸಿದ್ದರಾಮಯ್ಯ ಏರುಧ್ವನಿಯಲ್ಲಿ ಆಕ್ಷೇಪಿಸಿದರು. ಪ್ರಕರಣ ನ್ಯಾಯಾಲಯದಲ್ಲಿ ಇರುವ ಕಾರಣ ನಿಯಮಾನುಸಾರ ಚರ್ಚೆಗೆ ಅವಕಾಶವಿಲ್ಲವೆಂದು ಸ್ಪೀಕರ್ ರೂಲಿಂಗ್ ಅನ್ನು ಬಲವಾಗಿ ಸಮರ್ಥಿಸಿಕೊಂಡರು. ಇದನ್ನೊಪ್ಪದ ಸಿದ್ದರಾಮಯ್ಯ, ಡಿವೈಎಸ್ಪಿ ಗಣಪತಿ ಪ್ರಕರಣವೂ ನ್ಯಾಯಾಲಯದಲ್ಲಿತ್ತು. ಆದರೂ ಆಗ ಪ್ರತಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿ ನಿಲುವಳಿ ಸೂಚನೆ ಮಂಡನೆಗೆ ಪಟ್ಟು ಹಿಡಿದು, ಧರಣಿ ನಡೆಸಿತ್ತು. ಆಗಿನ ಸ್ಪೀಕರ್ ಚರ್ಚೆಗೆ ಅವಕಾಶ ಕೊಟ್ಟಿದ್ದರು ಎಂದಾಗ ಆಡಳಿತ ಪಕ್ಷದ ಸದಸ್ಯರು ಒಟ್ಟಾಗಿ ಎದ್ದು ನಿಂತು ವಿರೋಧಿಸಿದರು.

ಗಣಪತಿ ಪ್ರಕರಣಕ್ಕೂ ಖಾಸಗಿ ಸಿವಿಲ್ ವ್ಯಾಜ್ಯಕ್ಕೂ ಹೋಲಿಕೆ ಸರಿಯಲ್ಲವೆಂದು ತಗಾದೆ ತೆಗೆದರೆ, ಕಾಂಗ್ರೆಸ್ ಸದಸ್ಯರು ಪ್ರತಿಯಾಗಿ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಗದ್ದಲ ಉಂಟಾಗಿ ಯಾರಿಗೆ ಯಾರು ಏನು ಹೇಳುತ್ತಿದ್ದಾರೆ ಎಂದು ತಿಳಿಯದಾಯಿತು. ಸಿದ್ದರಾಮಯ್ಯ ಮಾತು ಮುಂದುವರಿಸಿ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ವಿರುದ್ಧ ಭೂಕಬಳಿಕೆ, ವಂಚನೆ ದಾವೆ ದಾಖಲಾಗಿದ್ದು, ಸಮನ್ಸ್ ಕೂಡ ಜಾರಿಯಾಗಿದೆ. ಹೀಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ತನಿಖೆ ನಂತರ ನಿದೋಷಿ ಎಂದಾದರೆ ಮತ್ತೆ ಸಚಿವ ಸ್ಥಾನ ನೀಡಲು ಅಡ್ಡಿಯೇನಿಲ್ಲ. ಗಣಪತಿ ಪ್ರಕರಣದಲ್ಲಿ ಸಚಿವ ಜಾರ್ಜ್ ಆರೋಪ ಕೇಳಿಬಂದ ತಕ್ಷಣ ರಾಜೀನಾಮೆ ನೀಡಿದ್ದರು. ಸಿಬಿಐ ತನಿಖೆಯಲ್ಲಿ ಕ್ಲೀನ್​ಚಿಟ್ ದೊರೆಯಿತು. ನೈತಿಕತೆ ಪ್ರಶ್ನೆಯಿದಾಗಿದ್ದು, ಬೈರತಿ ವಿರುದ್ಧದ ಪ್ರಕರಣ ಕೋರ್ಟ್​ನಲ್ಲಿದ್ದರೂ ಚರ್ಚೆಗೆ ಅವಕಾಶವಿದೆ ಎಂದು ವಾದಿಸಿದರೆ, ಕೃಷ್ಣ ಬೈರೇಗೌಡ ಧ್ವನಿಗೂಡಿಸಿದರು.

ಪೀಠದ ಎದುರು ಧರಣಿ: ನಿಯಮಾನುಸಾರ ನಿಲುವಳಿ ಸೂಚನೆಗೆ ಅವಕಾಶವಿಲ್ಲವೆಂದು ಸ್ಪೀಕರ್ ಮತ್ತೊಮ್ಮೆ ಹೇಳಿದ್ದನ್ನು ತೀವ್ರವಾಗಿ ವಿರೋಧಿಸಿ, ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಸ್ಪೀಕರ್ ಪೀಠದ ಮುಂದೆ ಧರಣಿ ಹೂಡಿದರು. ರೈತರು, ಅತಿವೃಷ್ಟಿ ಬಾಧಿತರಿಗೆ ಪರಿಹಾರ ಕಲ್ಪಿಸುವ ಬಗ್ಗೆ ಕಾಂಗ್ರೆಸ್​ಗೆ ಕಾಳಜಿಯಿಲ್ಲ ಎಂದು ಆರ್.ಅಶೋಕ್ ಚುಚ್ಚಿದರೆ, ಸ್ವಪಕ್ಷದ ಸದಸ್ಯರೆಲ್ಲ ಒಟ್ಟಾಗಿ ಘೋಷಣೆ ಕೂಗಿದರೆ, ಕಾಂಗ್ರೆಸ್ ಪಾಳೆಯದಿಂದ ಧಿಕ್ಕಾರ ಮೊಳಗಿತು. ಇದೇ ವೇಳೆ ಪರಸ್ಪರ ಕಳ್ಳ, ಲೂಟಿಕೋರ ಆರೋಪಗಳ ವಾಗ್ಬಾಣಗಳನ್ನು ಹರಿಬಿಟ್ಟರು. ಅತಿವೃಷ್ಟಿ ಮೇಲಿನ ಚರ್ಚೆಗೆ ಸೋಮವಾರ ಉತ್ತರಿಸುವುದಾಗಿ ಅಶೋಕ್ ಹೇಳಿದ್ದನ್ನು ಸ್ಪೀಕರ್ ಪುರಸ್ಕರಿಸಿ, ಸದನವನ್ನು ಸೋಮವಾರಕ್ಕೆ ಮುಂದೂಡಿದರು.

ಬಿ ರಿಪೋರ್ಟ್ ಹಾಕಿದ ಪ್ರಕರಣ: ನೀವು (ಸಿದ್ದರಾಮಯ್ಯ) ಸಿಎಂ ಆಗಿದ್ದ ವೇಳೆ ಬಿ ರಿಪೋರ್ಟ್ ಹಾಕಿದ ಪ್ರಕರಣವಿದು ಎಂದು ಸಚಿವ ಆರ್.ಅಶೋಕ್ ತಿವಿದರು. ಖಾಸಗಿ ಭೂ ವ್ಯಾಜ್ಯದ ಕೇಸ್​ಗೆ ತಳುಕು ಹಾಕುವುದು ಸರಿಯಲ್ಲವೆಂದು ಬೊಮ್ಮಾಯಿ, ಮಾಧುಸ್ವಾಮಿ ಪುನರುಚ್ಚರಿಸಿದಾಗ ‘ಯಾರದೋ ಪಾಪದ ಕೂಸಿಗೆ ನೀವೇಕೆ ತಂದೆಯಾಗ್ತೀರಿ, ತಪು್ಪ ಮಾಡಿದವರಿಗೆ ಶಿಕ್ಷೆಯಾಗಲಿ’ ಎಂದು ಸಿದ್ದರಾಮಯ್ಯ ಅಬ್ಬರಿಸಿದರು. ಸಿದ್ದರಾಮಯ್ಯ ದನಿಯ ಮುಂದೆ ಅಶೋಕ್ ಮಾತು ಗೌಣವಾಯಿತು.

ಬೈರತಿ ಬಸವರಾಜ್ ಆಗ ಸಿದ್ದರಾಮಯ್ಯ ಶಿಷ್ಯ ಆಗಿದ್ದರು. ಈಗ ಶಿಷ್ಯ ಎಂದು ಒಪ್ಪಿಕೊಳ್ಳಲು ಆಗುವುದಿಲ್ಲ. ಪ್ರಕರಣವನ್ನು ರ್ತಾಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ.

| ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕ

ನೈತಿಕತೆ ಪ್ರಶ್ನೆಗೆ ತಿರುಗೇಟು ಈ ಹಿಂದೆ ಎಫ್​ಐಆರ್ ದಾಖಲಾಗಿ, ಕೋರ್ಟ್​ಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ ನಂತರವೂ ಉನ್ನತ ಹುದ್ದೆಗಳಲ್ಲಿ ಮುಂದುವರಿದ ನಿದರ್ಶನಗಳಿವೆ. ನೈತಿಕತೆ ಪ್ರಶ್ನೆ ಎತ್ತಿದರೆ ಬಹಳ ದೂರ ಹೋಗಬೇಕಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು. ಬಹಳ ಹಳೆಯ ಪ್ರಕರಣ ಇದಾಗಿದ್ದು, ಈ ಹಿಂದೆ ಹೈಕೋರ್ಟ್ ಸೇರಿ ಹಲವು ನ್ಯಾಯಾಲಯಗಳು ವಜಾಗೊಳಿಸಿವೆ. ಮತ್ತೆ ಖಾಸಗಿ ದೂರೊಂದನ್ನು ಜನಪ್ರತಿನಿಧಿಗಳ ನ್ಯಾಯಾಲಯ ದಾಖಲಿಸಿಕೊಂಡು, ನೀಡಿರುವ ಸೂಚನೆ ಪ್ರಕಾರ ಎಫ್​ಐಆರ್ ದಾಖಲಾಗಿದೆ. ಈ ಪ್ರಕರಣ ಮುಂದಿಟ್ಟು ರ್ಚಚಿಸುವುದು ಸಾಧುವಲ್ಲವೆಂದು ಹೇಳಿದರು. ಆದರೂ ಕಾಂಗ್ರೆಸ್ ನಾಯಕರು ಬಿಗಿಪಟ್ಟು ಹಿಡಿದ ಮಧ್ಯೆ ಕೃಷ್ಣಬೈರೇಗೌಡ ಮತ್ತು ಸಚಿವ ಜೆ.ಸಿ.ಮಾಧುಸ್ವಾಮಿ ನಡುವೆ ಮಾತಿನ ಚಕಮಕಿ ನಡೆಯಿತು. ಯಾವುದೋ ಕಾಲಕ್ಕೆ ಸ್ಪೀಕರ್ ಮಾಡಿದ್ದನ್ನು ಎಲ್ಲ ಕಾಲಕ್ಕೂ ಅನ್ವಯಿಸಲಾಗದು. ನಿಯಮಗಳಿಗೆ ವಿರುದ್ಧವಾಗಿ ಚರ್ಚೆಗೆ ಅವಕಾಶವಿಲ್ಲ, ಸ್ಪೀಕರ್ ತೀರ್ಮಾನ ಸರಿಯಿದೆ ಎಂದು ಮಾಧುಸ್ವಾಮಿ ಸಮರ್ಥಿಸಿಕೊಂಡರು. ಇದ್ಯಾವುದನ್ನೂ ಒಪ್ಪದ ಸಿದ್ದರಾಮಯ್ಯ ಅವರು ಗಣಪತಿ ಪ್ರಕರಣದ ವೇಳೆ ಪ್ರತಿಪಕ್ಷ ಸ್ಥಾನದಲ್ಲಿದ್ದಾಗ ಬೊಮ್ಮಾಯಿ, ಜಗದೀಶ ಶೆಟ್ಟರ್ ತಳೆದ ನಿಲುವನ್ನು ಮತ್ತೆ ಪ್ರಸ್ತಾಪಿಸಿ, ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.