ಮುಂಬೈ: ಭಾರತ ಹಿಂದೂ ರಾಷ್ಟ್ರವಾಗಿದ್ದು, ಎಲ್ಲಾ ಭಾರತೀಯರು ಹಿಂದೂಗಳನ್ನು ಪ್ರತಿನಿಧಿಸುತ್ತಾರೆ. ಹಿಂದೂಗಳೆಲ್ಲಾ ಭಾರತೀಯರನ್ನು ಪ್ರತಿನಿಧಿಸುತ್ತಾರೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಮುಂಬೈನಲ್ಲಿ ದೈನಿಕ್ ತರುಣ್ ಭಾರತ್ ಪತ್ರಿಕೆಯ ಮಧುಕರ್ ಭವನವನ್ನು ಉದ್ಘಾಟಿಸಿ ಮಾತನಾಡಿದ ಮೋಹನ್ ಭಾಗವತ್ ನಮ್ಮ ಸಿದ್ದಾಂತಕ್ಕೆ ವಿಶ್ವದಾದ್ಯಂತ ಹೆಚ್ಚ್ಚಿನ ಬೇಡಿಕೆ ಇದೆ ಎಂದಿದ್ದಾರೆ.
ಭಾರತ ಹಿಂದೂ ರಾಷ್ಟ್ರ ಮತ್ತು ಈ ವಿಚಾರ ಸತ್ಯ. ಸೈದ್ಧಾಂತಿಕವಾಗಿ ಎಲ್ಲಾ ಭಾರತೀಯರು ಹಿಂದೂಗಳು ಮತ್ತು ಹಿಂದೂಗಳೆಂದರೆ ಎಲ್ಲಾ ಭಾರತೀಯರು. ಇಂದು ಭಾರತದಲ್ಲಿರುವವರು ಹಿಂದೂ ಭೂಮಿ ಮತ್ತು ಸಂಸ್ಕೃತಿಗೆ ಸಂಬಂಧಿಸಿದವರು. ಇವುಗಳನ್ನೂ ಹೊರತುಪಡಿಸಿ ಬೇರೇನು ಇಲ್ಲ.
ಕೆಲವರು ಈ ವಿಚಾರಗಳನ್ನು ಅರ್ಥ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಈ ಮನಸ್ಥಿತಿಯನ್ನು ಅಳವಡಿಸಿಕೊಂಡಿಲ್ಲ. ಆದರೆ, ಅವರಿಗೆ ಈ ವಿಚಾರ ಸಂಪೂರ್ಣವಾಗಿ ಅರ್ಥವಾಗಿದೆ. ಇಷ್ಟಾದರೂ ತಮ್ಮ ಹವ್ಯಾಸ ಹಾಗೂ ಸ್ವಾರ್ಥದಿಂದಾಗಿ ಈ ವಿಚಾರವನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇನ್ನೂ ಕೆಲವರಂತೂ ಈ ವಿಚಾರವನ್ನು ಅರ್ಥವನ್ನೂ ಮಾಡಿಕೊಂಡಿಲ್ಲ, ಬದಲಾಗಿ ಮರೆತೂ ಹೋಗಿದ್ದಾರೆ.
ನಾವೆಲ್ಲರೂ ಈ ವಿಚಾರವನ್ನು ಅರ್ಥ ಮಾಡಿಕೊಂಡಿದ್ದೇವೆ. ಕೆಲವರು ಈ ವಿಚಾರವನ್ನು ಒಪ್ಪಿಕೊಂಡಿದ್ಧಾರೆ. ಇನ್ನು ಕೆಲವರು ಒಪ್ಪಿಕೊಂಡಿಲ್ಲ. ನಮ್ಮ ಸಿದ್ದಾಂತಕ್ಕೆ ಪ್ರಪಂಚದಾದ್ಯಂತ ಹೆಚ್ಚಿನ ಬೇಡಿಕೆಯಿದ್ದು, ಇದಕ್ಕೆ ಪರ್ಯಾಯವಾಗಿ ಬೇರೊಂದಿಲ್ಲ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕಾರ್ಯಕ್ರಮ ಒಂದರಲ್ಲಿ ಹೇಳಿದ್ದಾರೆ.