ನ್ಯೂಸ್

ಸೂಪರ್​ ಹೀರೋ ಅವತಾರದಲ್ಲಿ ಕತ್ರಿನಾ; ಅಲಿ ಅಬ್ಬಾಸ್ ಜಾಫರ್ ಜತೆ ಹ್ಯಾಟ್ರಿಕ್​ ಸಿಡಿಸಲು ರೆಡಿ

ಬಾಲಿವುಡ್ ನಟಿ ಕತ್ರಿನಾ ಕೈಫ್​ ಇಲ್ಲಿಯವರೆಗೂ ನಾಯಕಿ ಪ್ರಧಾನ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಸ್ಟಾರ್ ನಾಯಕರೊಂದಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದೇ ಹೆಚ್ಚು. ಆದರೆ ಇದೀಗ ಇದೇ ಕತ್ರಿನಾ ನಾಯಕಿ ಪ್ರಧಾನ ಸಿನಿಮಾ ಮಾಡಲು ಸಿದ್ಧರಾಗುತ್ತಿದ್ದಾರೆ. ಅವರ ಆ ಚಿತ್ರವನ್ನು ಖ್ಯಾತ ನಿರ್ದೇಶಕ ಅಲಿ ಅಬ್ಬಾಸ್​ ಜಾಫರ್​ ನಿರ್ದೇಶನ ಮಾಡಲಿದ್ದಾರೆ.

ಈಗಾಗಲೇ ಅಲಿ ಅಬ್ಬಾಸ್​ ಜಾಫರ್​ ಜತೆಗೆ ಟೈಗರ್ ಜಿಂದಾ ಹೈ ಮತ್ತು ಭಾರತ್​ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಕತ್ರಿನಾ ಕೈಫ್​ ಇದೀಗ ಮೂರನೇ ಬಾರಿ ಅವರೊಟ್ಟಿಗೆ ಕೈ ಜೋಡಿಸುತ್ತಿದ್ದಾರೆ. ಅಂದಹಾಗೆ ಈ ಸಿನಿಮಾ ಸೂಪರ್​ಹೀರೋ ಪರಿಕಲ್ಪನೆಯಲ್ಲಿ ತಯಾರಾಗಲಿದ್ದು, ಎರಡು ಪಾರ್ಟ್​ಗಳಲ್ಲಿ ಸಿದ್ಧವಾಗಲಿದೆ. ಬರೋಬ್ಬರಿ 200 ಕೋಟಿ ರೂ. ಬಜೆಟ್​ನಲ್ಲಿ ಚಿತ್ರ ನಿರ್ಮಾಣವಾಗಲಿದೆಯಂತೆ.

ಈಗಾಗಲೇ ಚಿತ್ರದ ಪ್ರೀ ಪ್ರೊಡಕ್ಷನ್​ ಕೆಲಸಗಳು ಮುಗಿದಿದ್ದು, ನಿರ್ದೇಶಕ ಅಲಿ ಆ್ಯಕ್ಷನ್​ ಸೀಕ್ವೆನ್ಸ್ ಗಳಿಗಾಗಿ ವಿದೇಶಿ ಸಾಹಸ ನಿರ್ದೇಶಕರ ಹುಡುಕಾಟದಲ್ಲಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ, ಆಗಸ್ಟ್ ತಿಂಗಳಾಂತ್ಯಕ್ಕೆ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ದೊರಕಲಿದೆ. ಅಚ್ಚರಿ ವಿಚಾರ ಏನೆಂದರೆ ಈ ಸಿನಿಮಾ ಚಿತ್ರಮಂದಿರದಲ್ಲಿ ತೆರೆಕಾಣುವುದಿಲ್ಲ. ಬದಲಿಗೆ ನೇರವಾಗಿ ನೆಟ್​ಫ್ಲಿಕ್ಸ್ ಓಟಿಟಿ ವೇದಿಕೆ ಮೂಲಕ ಬಿತ್ತರವಾಗಲಿದೆ. (ಏಜೆನ್ಸೀಸ್​)