ನ್ಯೂಸ್

'ಬಡೇ ಮಿಯಾನ್ ಚೋಟೆ ಮಿಯಾನ್' ಪ್ರಚಾರದ ವೇಳೆ ಅಕ್ಷಯ್, ಟೈಗರ್ ಶ್ರಾಫ್ ಮೇಲೆ ಶೂ, ಚಪ್ಪಲಿ ಎಸೆತ!

ಮುಂಬೈ: ಬಾಲಿವುಡ್ ನಟರಾದ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ತಮ್ಮ ಮುಂಬರುವ ಚಿತ್ರ 'ಬಡೇ ಮಿಯಾನ್ ಚೋಟೆ ಮಿಯಾನ್' ಪ್ರಚಾರದಲ್ಲಿ ನಿರತರಾಗಿದ್ದಾರೆ. ಇಬ್ಬರೂ ಸ್ಟಾರ್‌ಗಳು ಸಾಮಾಜಿಕ ಮಾಧ್ಯಮಗಳ ಮೂಲಕ, ವಿವಿಧ ನಗರಗಳಲ್ಲಿ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ಈ ನಟರು ನಿರೀಕ್ಷಿಸದ ಘಟನೆಯೊಂದು ನಡೆದಿದೆ.

ಹೌದು, ಅಕ್ಷಯ್ ಮತ್ತು ಟೈಗರ್ ಶ್ರಾಫ್ ಚಿತ್ರ ಪ್ರಚಾರದ ಸಮಯದಲ್ಲಿ ಜನರು ಶೂ ಮತ್ತು ಚಪ್ಪಲಿಗಳನ್ನು ಎಸೆಯಲು ಪ್ರಾರಂಭಿಸಿದರು. ವಿಷಯ ಎಷ್ಟು ಬಿಗಡಾಯಿಸಿತು ಎಂದರೆ ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು. ಹಾಗಾದರೆ ಆಗಿದ್ದೇನು?, ನೋಡೋಣ ಬನ್ನಿ...

ವರದಿಯ ಪ್ರಕಾರ, ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಚಿತ್ರದ ಪ್ರಚಾರಕ್ಕಾಗಿ ಲಕ್ನೋ ತಲುಪಿದರು. ಅಲ್ಲಿ ಬಾಲಿವುಡ್ ತಾರೆಯರು ಬರಲಿದ್ದಾರೆ ಎಂದು ಅರ್ಧ ಗಂಟೆಯ ಹಿಂದೆ ತಿಳಿಸಲಾಯಿತು. ಸ್ವಲ್ಪ ಸಮಯದಲ್ಲೇ ಲಕ್ನೋದ ಘಂಟಾಘರ್ ಬಳಿ ಅಭಿಮಾನಿಗಳ ಗುಂಪು ಜಮಾಯಿಸಿತು.

ಅಭಿಮಾನಿಗಳು ಅಕ್ಷಯ್ ಕುಮಾರ್‌ಗೆ ಹಾಡು ಹಾಡಲು ವಿನಂತಿಸಿದರು, ಕೆಲವರು ಸ್ಟಾರ್‌ಗಳಿಗೆ ಪ್ರಶ್ನೆಗಳನ್ನು ಕೇಳಿದರು, ಆದರೆ ಸಮಯ ಕಳೆದಂತೆ ಜನಸಂದಣಿ ತುಂಬಾ ಹೆಚ್ಚಾಯಿತು, ಜನರ ನಡುವೆ ಜಗಳ ಹೆಚ್ಚಾಯಿತು ಮತ್ತು ಜನರು ಹೊಡೆದಾಡಲು ಪ್ರಾರಂಭಿಸಿದರು. ಇದೇ ವೇಳೆ ಇಬ್ಬರು ತಾರೆಯರಿಂದ ಮನವಿ ಈಡೇರದ ಹಿನ್ನೆಲೆಯಲ್ಲಿ ಕೆಲವರು ಚಪ್ಪಲಿ, ಶೂ ಎಸೆದರು.

ಲಾಠಿಚಾರ್ಜ್ ಮಾಡಿದ ಪೊಲೀಸರು

ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಜನರ ಮೇಲೆ ಲಾಠಿ ಪ್ರಹಾರ ನಡೆಸಿದರು. ಪೊಲೀಸರ ಆಗಮನದ ನಂತರ ಸುತ್ತಲೂ ನೂಕುನುಗ್ಗಲು ಉಂಟಾಯಿತು. ಆದರೆ ಚಪ್ಪಲಿ ಮತ್ತು ಬೂಟುಗಳು ಸ್ಟಾರ್​​​​​ಗಳಿಗೆ ತಾಗದಿರುವುದು ಅದೃಷ್ಟ. ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಗಿ ಬಂದರೂ ಪರಿಸ್ಥಿತಿ ಹತೋಟಿಗೆ ತರಲಾಯಿತು.

ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಆಕ್ಷನ್ ನಟನೆಯ 'ಬಡೇ ಮಿಯಾನ್ ಚೋಟೆ ಮಿಯಾನ್' ಈದ್ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಟೀಸರ್ ಕೂಡ ಹೊರ ಬಂದಿದೆ. ಈ ಚಿತ್ರಕ್ಕಾಗಿ ಇಬ್ಬರೂ ಸ್ಟಾರ್‌ಗಳು ಆ್ಯಕ್ಷನ್ ಮಾಡಿದ್ದಾರೆ.