ನ್ಯೂಸ್

Akhilesh Yadav | ಎಸ್​ಪಿ ನಾಯಕರ ವಾಗ್ದಾಳಿ ನಂತರ ಅಖಿಲೇಶ್ ಯಾದವ್ ಫೇಸ್‌ಬುಕ್ ಖಾತೆ ಮತ್ತೆ ಸಕ್ರಿಯ!

Akhilesh Yadav: ಶುಕ್ರವಾರ (ಅ 10) ಸಂಜೆ ನಿಷ್ಕ್ರಿಯಗೊಂಡಿದ್ದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅಧಿಕೃತ ಫೇಸ್‌ಬುಕ್ ಖಾತೆಯನ್ನು ಮತ್ತೆ ಸಕ್ರಿಯಗೊಂಡಿದ್ದು, ಇದು ರಾಜಕೀಯ ಪಿತೂರಿ ಎಂದು ಕರೆದಿವೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿರುವ ಎಸ್​ಪಿ ಸಂಸದ ರಾಜೀವ್ ರೈ, ಸಂಸತ್ತಿನ ಮೂರನೇ ಅತಿದೊಡ್ಡ ಪಕ್ಷದ ನಾಯಕ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಖಾತೆಯನ್ನು ಫೇಸ್‌ಬುಕ್ ನಿರ್ಬಂಧಿಸಿರುವುದು ಖಂಡನೀಯ, ಇದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಹೊಡೆತವಾಗಿದೆ. ಆಡಳಿತ ಪಕ್ಷದ ಆಜ್ಞೆಯ ಮೇರೆಗೆ ಇದೆಲ್ಲಾ ನಡೆಯುತ್ತಿದ್ದು, ಈ ರೀತಿಯ ಕ್ರಮಗಳು ಹೇಡಿತನದ ಸಂಕೇತವಾಗಿದೆ. ಇಂತಹ ನಡೆಗಳಿಂದ ಸಮಾಜವಾದಿಗಳ ಧ್ವನಿಯನ್ನು ಹತ್ತಿಕ್ಕಲು ಸಾಧ್ಯ ಎಂದು ಅಂದುಕೊಂಡಿದ್ದರೆ ಅದು ತಪ್ಪು ಕಲ್ಪನೆ ಎಂದರು.

ಎಸ್‌ಪಿ ವಕ್ತಾರ ಫಕ್ರುಲ್ ಹಸನ್ ಚಾಂದ್ ಕೂಡ ತಮ್ಮ ಎಕ್ಸ್​ ಖಾತೆಯ ಮೂಲಕ ಇದೇ ರೀತಿಯ ಕಳವಳಗಳ ವ್ಯಕ್ತಪಡಿಸಿದ್ದು, ಈ ಕ್ರಮ ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ, ಬಿಜೆಪಿ ಸರ್ಕಾರ ಅಘೋಷಿತ ತುರ್ತು ಪರಿಸ್ಥಿತಿಯನ್ನು ಹೇರುತ್ತಿದೆ, ಪ್ರತಿ ಸಂದರ್ಭದಲ್ಲೂ ಆಡಳಿತ ಪಕ್ಷದ ವಿರುದ್ಧ ಹೊರ ಹೊಮ್ಮುವ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ, ಆದರೆ ಸಮಾಜವಾದಿ ಪಕ್ಷವು ಬಿಜೆಪಿಯ ಜನವಿರೋಧಿ ನೀತಿಗಳನ್ನು ಖಂಡಿಸುವುದನ್ನು ಮುಂದುವರಿಸುತ್ತದೆ ಎಂದು ಅವರು ಬರೆದಿದ್ದಾರೆ.

ಯಾವುದೇ ಎಚ್ಚರಿಕೆ ಅಥವಾ ಸೂಚನೆ ನೀಡದೆ ಅಖಿಲೇಶ್ ಅವರ ಖಾತೆಯನ್ನು ಅಮಾನತುಗೊಳಿಸಿದ್ದಕ್ಕಾಗಿ ಸಮಾಜವಾದಿ ಪಕ್ಷದ ಶಾಸಕಿ ಪೂಜಾ ಶುಕ್ಲಾ ಫೇಸ್‌ಬುಕ್ ಅನ್ನು ಟೀಕಿಸಿದರು. ಫೇಸ್‌ಬುಕ್ ತನ್ನ ಮಿತಿಗಳನ್ನು ಮೀರುವ ಧೈರ್ಯ ಮಾಡಿದೆ. ಯಾವುದೇ ಎಚ್ಚರಿಕೆ ಮತ್ತು ಪೂರ್ವ ಸೂಚನೆ ಇಲ್ಲದೆ ಅಖಿಲೇಶ್ ಯಾದವ್ ಅವರ ಅಧಿಕೃತ ಖಾತೆಯನ್ನು ಸ್ಥಗಿತಗೊಳಿಸಿದೆ. ಇದು ಸಾಮಾನ್ಯ ಖಾತೆಯಲ್ಲ, ಲಕ್ಷಾಂತರ ಜನರ ಧ್ವನಿ, ಫೇಸ್‌ಬುಕ್ ತನ್ನ ಸೀಮಿತ ಗಡಿಯನ್ನು ನೆನಪಿನಲ್ಲಿಟ್ಟುಕೊಂಡು ಅದಕ್ಕೆ ತಕ್ಕಂತೆ ವರ್ತಿಸಬೇಕು, ಪ್ರಜಾಪ್ರಭುತ್ವವನ್ನು ಮೌನಗೊಳಿಸಲು ಸಾಧ್ಯವಿಲ್ಲ, ಸಮಾಜವಾದಿಗಳೇ, ಫೇಸ್‌ಬುಕ್ ಅನ್ನು ಅದರ ಅರಿವಿಗೆ ತರುವ ಸಮಯ ಬಂದಿದೆ, ಇಂತಹ ದುರಹಂಕಾರವನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಕೇಂದ್ರ ಸಚಿವರು ಹೇಳಿದ್ದೇನು..

ಈ ಎಲ್ಲ ಆರೋಪಗಳಿಗೆ ಮಾಧ್ಯಮಗಳ ಮೂಲಕ ಸ್ಪಷ್ಟನೆ ನೀಡಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಎಸ್​​ಪಿ ನಾಯಕ ಅಖಿಲೇಶ್ ಯಾದವ್ ಅವರ ಫೇಸ್‌ಬುಕ್ ಖಾತೆ ಅಮಾನತುಗೊಳಿಸುವಿಕೆಯಲ್ಲಿ ಸರ್ಕಾರದ ಪಾತ್ರವಿಲ್ಲ ಎಂದು ದೃಢಪಡಿಸಿದರು. ಫೇಸ್‌ಬುಕ್ ಈ ಕ್ರಮ ಕೈಗೊಂಡಿದ್ದು, ಇದರಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ, ಅವರ ಖಾತೆಯಿಂದ ನಿಂದನೀಯ ಪೋಸ್ಟ್ ಹಂಚಿಕೊಂಡಿದ್ದಾರೆ ಎನ್ನಲಾಗಿದ್ದು, ಆದ್ದರಿಂದಲೇ ಫೇಸ್‌ಬುಕ್ ತನ್ನದೇ ಆದ ನಿಯಮಗಳ ಅನ್ವಯ ಈ ರೀತಿಯ ಕ್ರಮ ತೆಗೆದುಕೊಂಡಿದೆ ಎಂದು ಹೇಳಿದರು. ಸರ್ಕಾರಿ ಮೂಲಗಳ ಪ್ರಕಾರ, ಅನುಚಿತ ಪೋಸ್ಟ್ ಹಂಚಿಕೊಂಡ ಆರೋಪದ ಮೇಲೆ ಫೇಸ್‌ಬುಕ್ ಆ ಖಾತೆಯನ್ನು ನಿರ್ಬಂಧಿಸಿದೆ. ಅಖಿಲೇಶ್ ಯಾದವ್ ಅವರ ರಾಜಕೀಯ ಹೇಳಿಕೆಗಳು, ಸರ್ಕಾರಿ ನೀತಿಗಳ ಟೀಕೆಗಳು ಮತ್ತು ಪ್ರಚಾರಕ್ಕೆ ಸಂಬಂಧಿಸಿದ ವಿಷಯವನ್ನು ನಿಯಮಿತವಾಗಿ ಹಂಚಿಕೊಳ್ಳಲಾಗಿದೆ.

ಫೇಸ್​​ಬುಕ್​​ ಖಾತೆ ನಿಷ್ಕ್ರಿಯಗೊಂಡ ಬಳಿಕ ಎಸ್‌ಪಿಯ ಐಟಿ ತಂಡ ಅಧಿಕೃತ ಮಾರ್ಗಗಳ ಮೂಲಕ ಮೆಟಾದೊಂದಿಗೆ ಸಂಪರ್ಕ ಸಾಧಿಸಿ, ಸಮಸ್ಯೆಯನ್ನು ವರದಿ ಮಾಡಲು ಫೇಸ್‌ಬುಕ್ ಇಂಡಿಯಾಗೆ ವಿಷಯವನ್ನು ತಿಳಿಸಿತು, ಶನಿವಾರ (ಅ 11) ಬೆಳಿಗ್ಗೆಯ ವೇಳೆಗೆ ಖಾತೆಯನ್ನು ಮರುಸ್ಥಾಪಿಸಲಾಯಿತು, ಹಿಂದಿನ ಎಲ್ಲಾ ಪೋಸ್ಟ್‌ಗಳು, ಚಿತ್ರಗಳು ಮತ್ತು ವೀಡಿಯೊಗಳು ಮತ್ತೊಮ್ಮೆ ಯಥಾಸ್ಥಿತಿ ಸಾರ್ವಜನಿಕರಿಗೆ ಗೋಚರವಾಗಿವೆ. ಈ ತಾತ್ಕಾಲಿಕ ಅಮಾನತಿಗೆ ಸಂಬಂಧಪಟ್ಟಂತೆ ಮೆಟಾ ಇನ್ನೂ ವಿವರಣೆಯನ್ನು ನೀಡಿಲ್ಲ.(ಏಜೆನ್ಸೀಸ್​​)