ನ್ಯೂಸ್

2022ರ ಪಂಜಾಬ್ ಚುನಾವಣೆಗೆ ಅಕಾಲಿ ದಳ ಮತ್ತು ಬಿಎಸ್​ಪಿ ಜೋಡಿ

ನವದೆಹಲಿ: ಕೇಂದ್ರದ ವಿವಾದಾತ್ಮಕ ಕೃಷಿ ಕಾನೂನುಗಳ ಹಿನ್ನೆಲೆಯಲ್ಲಿ ಕಳೆದ ವರ್ಷ ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದ ನಂತರ ಶಿರೋಮಣಿ ಅಕಾಲಿ ದಳ(ಎಸ್‌ಎಡಿ)ವು ಮಾಯಾವತಿಯವರ ಬಹುಜನ ಸಮಾಜ ಪಕ್ಷ(ಬಿಎಸ್‌ಪಿ)ದೊಂದಿಗೆ ಮೈತ್ರಿ ಮಾಡಿಕೊಂಡಿದೆ. 2022 ರಲ್ಲಿ ನಡೆಯಲಿರುವ ಪಂಜಾಬಿನ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಇದು ಭಾರೀ ಬದಲಾವಣೆ ತರಲಿದೆ ಎನ್ನಲಾಗಿದೆ.

"ಇದು ಪಂಜಾಬಿನ ರಾಜಕೀಯದಲ್ಲಿ ಹೊಸ ದಿನ. ಶಿರೋಮಣಿ ಅಕಾಲಿ ದಳ ಮತ್ತು ಬಹುಜನ ಸಮಾಜ ಪಾರ್ಟಿ 2022 ರ ರಾಜ್ಯ ಚುನಾವಣೆಗಳನ್ನು ಮತ್ತು ಭವಿಷ್ಯದ ಚುನಾವಣೆಗಳನ್ನು ಒಟ್ಟಿಗೆ ಎದುರಿಸಲಿವೆ" ಎಂದು ಎಸ್​ಎಡಿಯ ಅಧ್ಯಕ್ಷ ಸುಖ್​ಬೀರ್​ ಸಿಂಗ್ ಬಾದಲ್ ಇಂದು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.

ರಾಜ್ಯ ವಿಧಾನಸಭೆಯಲ್ಲಿ ಒಟ್ಟು 117 ಸೀಟುಗಳಿದ್ದು, 20 ಸೀಟುಗಳನ್ನು ಬಿಎಸ್​ಪಿಗೆ ನೀಡಲಾಗಿದೆ. ಉಳಿದ 97 ಸೀಟುಗಳಲ್ಲಿ ಅಕಾಲಿ ದಳ ಚುನಾವಣೆ ಎದುರಿಸಲಿದೆ. ಪಂಜಾಬಿನ ಜನಸಂಖ್ಯೆಯಲ್ಲಿ ಶೇ. 40 ರಷ್ಟು ದಲಿತರಿದ್ದು, ಶೇ. 31 ರಷ್ಟಿರುವ ರಾಜ್ಯದ ದಲಿತ ಮತಗಳ ಮೇಲೆ ಬಿಎಸ್​ಪಿ ಹಿಡಿತ ಸಾಧಿಸಬಲ್ಲದು ಎನ್ನಲಾಗಿದೆ.

ಕಾಂಗ್ರೆಸ್, ಬಿಜೆಪಿ ಮತ್ತು ಅರವಿಂದ್ ಕೇಜ್ರಿವಾಲ್​​ರ ಆಮ್ ಆದ್ಮಿ ಪಕ್ಷಗಳನ್ನು ಹೊರತುಪಡಿಸಿ ತಮ್ಮ ಪಕ್ಷ ಮತ್ತಾವುದೇ ಪಕ್ಷದೊಂದಿಗೆ ಒಪ್ಪಂದಕ್ಕೆ ಮುಕ್ತವಾಗಿದೆ ಎಂದು ಬಾದಲ್​ ಅವರು ಕಳೆದ ವಾರ ಘೋಷಿಸಿದ್ದರು. 27 ವರ್ಷಗಳ ಹಿಂದೆ, 1996 ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ, ಅಕಾಲಿ ದಳ ಮತ್ತು ಬಿಎಸ್​ಪಿ ಒಪ್ಪಂದ ಮಾಡಿಕೊಂಡಿದ್ದವು. ಆಗ, 13 ಸೀಟುಗಳಲ್ಲಿ 11 ಸೀಟುಗಳನ್ನು ಇವರ ಒಕ್ಕೂಟ ಗೆದ್ದಿತ್ತು.

"ಈ ಬಾರಿ ನಮ್ಮ ಒಕ್ಕೂಟವನ್ನು ಮುರಿಯುವುದಿಲ್ಲ. ಕಾಂಗ್ರೆಸ್​ ನಾಯಕತ್ವದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಹಗರಣಗಳಿಗೆ ಅಂತ್ಯ ಹಾಡಲು ನಾವು ಕೆಲಸ ಮಾಡುತ್ತೇವೆ. ಹಾಲಿ ಸರ್ಕಾರವು ದಲಿತವಿರೋಧಿ ಮತ್ತು ರೈತವಿರೋಧಿಯಾಗಿದೆ. ಆದರೆ ನಾವು ಎಲ್ಲರ ಕಲ್ಯಾಣಕ್ಕಾಗಿ, ಅಭಿವೃದ್ಧಿಗಾಗಿ ದುಡಿಯುತ್ತೇವೆ" ಎಂದು ಬಿಎಸ್​ಪಿ ಸಂಸದ ಸತೀಶ್ ಮಿಶ್ರ ಹೇಳಿದ್ದಾರೆ. (ಏಜೆನ್ಸೀಸ್)