ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯ ಮತ್ತೆ ತೀವ್ರಗೊಂಡಿದ್ದು ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಈ ವರ್ಷ ಇದೇ ಮೊದಲ ಬಾರಿಗೆ 400ಕ್ಕಿಂತ ಅಧಿಕ ಪ್ರಮಾಣದಲ್ಲಿ ದಾಖಲಾಗಿದೆ. ಜನರು ಉಸಿರಾಡಲು ತೊಂದರೆ ಪಡುವಂತಾಗಿದ್ದು, ಸರ್ಕಾರ ಕೂಡಲೇ ತುರ್ತಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಗುರುವಾರ ಬೆಳಗ್ಗೆನಿಂದಲೇ ರಾಜಧಾನಿಯಾದ್ಯಂತ ದಟ್ಟವಾದ ಮಂಜಿನ ಪದರ ನಿರ್ವಣವಾಗಿತ್ತು. ಆನಂದ ವಿಹಾರ, ವಿಮಾನ ನಿಲ್ದಾಣ, ಮಂದಿರ ಮಾರ್ಗ ಇನ್ನಿತರ ಪ್ರದೇಶಗಳಲ್ಲಿ ವಾಯು ಗುಣಮಟ್ಟ 400ಕ್ಕಿಂತ ಅಧಿಕ ವಾಗಿತ್ತು. ಇದು ಈ ವರ್ಷದ ಅತ್ಯಂತ ಕಳಪೆ ಗುಣಮಟ್ಟ ವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೂ ಪರಿಸ್ಥಿತಿ ವಿಕೋಪಕ್ಕೆ ಹೋಗಿಲ್ಲ ಎಂದು ದೆಹಲಿ ಪರಿಸರ ಸಚಿವ ಗೋಪಾಲ ರೈ ಹೇಳಿಕೊಂಡಿದ್ದಾರೆ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳಿಗೆ ಸರ್ಕಾರ ಸೂಚನೆ ನೀಡಿದೆ ಎಂದಿದ್ದಾರೆ.
ಮಾಲಿನ್ಯ ಹೆಚ್ಚಳಕ್ಕೆ ಕಾರಣಗಳು ಏನು?: ಪ್ರತಿ ದೀಪಾವಳಿ ಬಳಿಕ ದೆಹಲಿಯಲ್ಲಿ ಭಾರಿ ಪ್ರಮಾಣದಲ್ಲಿ ವಾಯುಮಾಲಿನ್ಯ ಉಂಟಾಗುತ್ತಿದೆ. ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿದ್ದಾಗ್ಯೂ ಮಾಲಿನ್ಯ ಮಿತಿ ಮೀರುತ್ತಿದೆ. ಪಟಾಕಿ ನಿಯಂತ್ರಣವನ್ನು ಸಮರ್ಪಕವಾಗಿ ಜಾರಿ ಮಾಡದ ದೆಹಲಿ ಪೊಲೀಸ್ ಇಲಾಖೆಯನ್ನು ಇತ್ತೀಚಿಗೆ ಸುಪ್ರೀಂ ಕೋರ್ಟ್ ಕೂಡ ತರಾಟೆಗೆ ತೆಗೆದುಕೊಂಡಿತ್ತು. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯ ಸುಡುವುದು ಮಾಲಿನ್ಯ ಏರಿಕೆಗೆ ಪ್ರಮುಖ ಕಾರಣವಾಗಿದೆ. ಪ್ರತಿ ವರ್ಷ ಕೂಳೆ ಸುಡುವುದನ್ನು ಸರ್ಕಾರ ನಿಷೇಧಿಸುತ್ತಿದ್ದರೂ ರೈತರು ಇದನ್ನು ಲೆಕ್ಕಿಸದೆ ದೊಡ್ಡ ಪ್ರಮಾಣದಲ್ಲಿ ಕೃಷಿ ತ್ಯಾಜ್ಯಗಳನ್ನು ದಹನ ಮಾಡುತ್ತಿದ್ದಾರೆ. ಈ ಹೊಗೆ ದೆಹಲಿಯ ಮೇಲ್ಭಾಗದಲ್ಲಿ ಆವರಿಸಿ ವಾಯುಮಾಲಿನ್ಯಕ್ಕೆ ಕಾರಣವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಹನ ಸಂಚಾರ ಕೂಡ ವ್ಯಾಪಕವಾಗಿದೆ. ಇದರಿಂದ ಹೊರಸೂಸುವ ಇಂಗಾಲಾಮ್ಲ ಗಾಳಿಯಲ್ಲಿ ಬೆರೆತು ಮಾಲಿನ್ಯ ಸಂಭವಿಸುತ್ತಿದೆ. ಇದರ ಜೊತೆಗೆ ಕಟ್ಟಡ ನಿರ್ಮಾಣ ಕಾರ್ಯ, ಕೈಗಾರಿಕೆ ಇನ್ನಿತರ ವಾಣಿಜ್ಯ ಚಟುವಟಿಕೆಗಳಿಂದ ಹೊರಹೊಮ್ಮುವ ಅನಿಲ, ದೂಳು ವಾತಾವರಣದಲ್ಲಿ ಬೆರೆತು ವಾಯುಗುಣ ಮಟ್ಟವನ್ನು ತಗ್ಗಿಸುತ್ತಿದೆ. ದೆಹಲಿಯಲ್ಲಿ ಗಾಳಿ ಬೀಸುವ ಪ್ರಮಾಣ (ವೇಗ) ಕಡಿಮೆ ಇದ್ದಲ್ಲಿ ಈ ಎಲ್ಲಾ ಮಾಲಿನ್ಯಕಾರಿ ಕಣಗಳು ವಾತಾವರಣದಲ್ಲೇ ಉಳಿದು ಸಮಸ್ಯೆ ಮತ್ತಷ್ಟು ಉಲ್ಬಣ ಆಗುವಂತೆ ಮಾಡುತ್ತದೆ.
ಪಾಕಿಸ್ತಾನದಲ್ಲಿ ಚಿಂತಾಜನಕ ಸ್ಥಿತಿ: ಪಾಕಿಸ್ತಾನದ ಲಾಹೋರ್ ಪಟ್ಟಣದಲ್ಲಿ ವಾಯುಮಾಲಿನ್ಯ ಪ್ರಮಾಣ 1165 ತಲುಪಿದ್ದು, ಚಿಂತಾಜನಕ ಸ್ಥಿತಿ ನಿರ್ವಣವಾಗಿದೆ. ಲಾಹೋರ್ ಪಟ್ಟಣದಲ್ಲಿ 1.4 ಕೋಟಿ ಜನರು ವಾಸವಾಗಿದ್ದಾರೆ. ಭಾರಿ ಕೈಗಾರಿಕೆ, ಉದ್ದಿಮೆಗಳು ಇಲ್ಲಿವೆ. ವಾಯುಮಾಲಿನ್ಯ ಏರಿಕೆ ಹಿನ್ನೆಲೆಯಲ್ಲಿ ಗುರುವಾರ ಒಂದೇ ದಿನ ಸುಮಾರು ಹದಿನೈದು ಸಾವಿರ ಜನರು ಅನಾರೋಗ್ಯ ಪೀಡಿತಗೊಂಡು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿದ್ದು, ಆರೋಗ್ಯ ತುರ್ತು ಪರಿಸ್ಥಿತಿ ನಿರ್ವಣವಾಗಿದೆ. ಒಣ ಕೆಮ್ಮು, ಉಸಿರಾಟದ ಸಮಸ್ಯೆ, ನ್ಯುಮೋನಿಯಾ, ಎದೆ ನೋವು ಇನ್ನಿತರ ಸಮಸ್ಯೆಗಳಿಂದ ಜನರು ಬಳಲುತ್ತಿದ್ದಾರೆ. ಮಕ್ಕಳು ಮತ್ತು ವಯಸ್ಕರಲ್ಲಿ ಅಸ್ತಮಾ ಮತ್ತು ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗಲಿವೆ ಎಂದು ಆರೋಗ್ಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿದ್ದು, ಜನರು ಹೊರಗಡೆ ಓಡಾಟ ಮಾಡದಂತೆ ನಿರ್ಬಂಧ ವಿಧಿಸಲಾಗಿದೆ. ಮುಲ್ತಾನ್ ಪಟ್ಟಣದಲ್ಲಿ ಮಾಲಿನ್ಯ ಪ್ರಮಾಣ 2000 ಮಟ್ಟಕ್ಕೆ ತಲುಪಿದ್ದು, ಬಾರಿ ಗಂಭೀರ ಪರಿಸ್ಥಿತಿ ನಿರ್ವಣವಾಗಿದೆ. ಸಾಮಾನ್ಯವಾಗಿ ವಾಯುಗುಣ ಮಟ್ಟ 300 ದಾಟಿದರೆ ಅದನ್ನು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ ಪಾಕ್ನಲ್ಲಿ ಇದು ಎರಡು ಸಾವಿರ ದಾಟಿರುವುದು ಗಂಭೀರತೆಯನ್ನು ವಿವರಿಸುತ್ತದೆ.
ವಿಮಾನ ಸಂಚಾರ ಅಸ್ತವ್ಯಸ್ತ: ದೆಹಲಿ ವಿಮಾನ ನಿಲ್ದಾಣದಲ್ಲಿ ಶೂನ್ಯ ಗೋಚರತೆ ಕಾರಣ ಹಲವು ವಿಮಾನಗಳನ್ನು ರದ್ದು ಮಾಡಲಾಗಿದೆ. ಲ್ಯಾಂಡಿಂಗ್ ಆಗಬೇಕಾಗಿದ್ದ ವಿಮಾನಗಳನ್ನು ಬೇರೆ ಏರ್ ಪೋರ್ಟ್ಗಳಿಗೆ ಡೈವರ್ಟ್ ಮಾಡಲಾಗಿದೆ. ಬೆಳಗ್ಗೆ ರನ್ವೇ ಗೋಚರತೆ ಪ್ರಮಾಣ 125ರಿಂದ 500 ಮೀಟರ್ ಮಾತ್ರ ಇತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ. 300ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿ ಸಂಚಾರ ನಡೆಸಿವೆ.
ತುರ್ತು ಕ್ರಮ ಘೊಷಣೆ: ನಿವಾರ್ಯವಲ್ಲದ ನಿರ್ಮಾಣ ಕಾಮಗಾರಿಗಳು, ಡೆಮಾಲಿಷನ್ ಬಂದ್ ್ಝಳೆಯ ಡೀಸೆಲ್ ವಾಹನ ಸಂಚಾರ ನಿರ್ಬಂಧ. ರಸ್ತೆಗಳಲ್ಲಿ ನೀರು ಸಿಂಪಡಿಸುವ ವಾಹನಗಳ ನಿಯೋಜನೆ. ತುರ್ತು ಅಗತ್ಯ ಕಾಮಗಾರಿಗಳಿಗೆ ಮಾತ್ರ ಅನುಮತಿ