ನ್ಯೂಸ್

ಖರ್ಗೆಗೆ ಸಿಗುತ್ತಾ ಎಐಸಿಸಿ ಪಟ್ಟ?; ಅಶೋಕ್ ಗೆಹ್ಲೋಟ್ ರಾಜಕೀಯ ಪ್ರಹಸನ ಬಳಿಕ ಹೊಸ ಚರ್ಚೆ

Webdesk - Ravikanth

ಕಲಬುರಗಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ರಾಜಕೀಯ ಪ್ರಹಸನ ಬಳಿಕ ಕೈ ಅಧ್ಯಕ್ಷ ಹುದ್ದೆಗೆ ರಾಜ್ಯಸಭೆ ಪ್ರತಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಹೆಸರು ಕೇಳಿಬರುತ್ತಿದೆ.

ನಾನು ಎಐಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ. ಈ ಸ್ಥಾನಕ್ಕೆ ಸ್ಪರ್ಧೆ ಬಯಸಿ ಅರ್ಜಿಯೂ ಸಲ್ಲಿಸುವುದಿಲ್ಲ ಎಂದು ಖರ್ಗೆ ಈಗಾಗಲೇ ಹೇಳಿದ್ದಾರೆ. ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ ಅಧ್ಯಕ್ಷಗಿರಿ ವಹಿಸಿಕೊಳ್ಳುವುದು ಉತ್ತಮ ಎಂದು ವೈಯಕ್ತಿಕ ಅಭಿಪ್ರಾಯವನ್ನು ತಿಳಿಸಿದ್ದಾರೆ. ಇದರ ನಡುವೆಯೂ ಪಕ್ಷದಲ್ಲಿ ನಡೆದಿರುವ ನಾನಾ ಬೆಳವಣಿಗೆ ಹಾಗೂ ತಿರುವುಗಳು ಅಧ್ಯಕ್ಷ ಸ್ಥಾನಕ್ಕಾಗಿ ದಿಢೀರ್ ಖರ್ಗೆ ಹೆಸರು ಮುಂಚೂಣಿಗೆ ತಂದು ನಿಲ್ಲಿಸಿದೆ.

ಎಐಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಗಳಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೆಸರಿದೆ. ಆದರೆ ರಾಜಸ್ಥಾನ ಕಾಂಗ್ರೆಸ್​ನಲ್ಲಿ ಎದ್ದಿರುವ ಸುನಾಮಿ ಪರಿಣಾಮ ಅಧ್ಯಕ್ಷ ಸ್ಥಾನದ ಚುನಾವಣೆ ಮೇಲೂ ಬಿದ್ದಿದೆ. ರಾಜಸ್ಥಾನ ಬಿಕ್ಕಟ್ಟು ಬಗೆಹರಿಯದಿದ್ದರೆ ಅಂಥ ಸ್ಥಿತಿಯಲ್ಲಿ ಸೋನಿಯಾ ಸೇರಿ ನಾಯಕರು ಗೆಹ್ಲೋಟ್ ಪರ ನಿಲ್ಲುವ ಸಾಧ್ಯತೆ ಕಮ್ಮಿ. ಹೀಗಾಗಿ ಪರ್ಯಾಯ ನಾಯಕರಲ್ಲಿ ಖರ್ಗೆ ಚಹರೆ ಪ್ರಮುಖವಾಗಿ ಆಕರ್ಷಿಸುತ್ತಿದೆ ಎಂದು ಹೇಳಲಾಗುತ್ತಿದೆ. ಶಶಿ ತರೂರ್, ದಿಗ್ವಿಜಯಸಿಂಗ್ ಹೆಸರು ಸಹ ಅಧ್ಯಕ್ಷ ಸ್ಥಾನದ ರೇಸ್​ನಲ್ಲಿವೆ. ಆದರೆ ಇವರಿಬ್ಬರೂ ನಾನಾ ಕಾರಣದಿಂದ ಆಗಾಗ್ಗೆ ವಿವಾದಿತ ಚರ್ಚೆಯಲ್ಲಿದ್ದವರು. ತಮ್ಮ ಹೇಳಿಕೆ ಮೂಲಕ ಗೊಂದಲ ಸೃಷ್ಟಿಸಿದವರು. ಇನ್ನು ಗೆಹ್ಲೋಟ್ ಗಾಂಧಿ ಪರಿವಾರಕ್ಕೆ ಭವಿಷ್ಯದಲ್ಲಿ ಸೆಡ್ಡು ಹೊಡೆದರೂ ಅಚ್ಚರಿಯಿಲ್ಲ ಎಂಬ ಬಗ್ಗೆ ವ್ಯಾಖ್ಯಾನಗಳೂ ನಡೆದಿವೆ. ಈಗ ಕಾಣಲಿರುವ ಇತರ ಮುಖಗಳಿಗಿಂತಲೂ ಖರ್ಗೆ ಉತ್ತಮ ಆಗಬಹುದು ಎಂಬ ಚರ್ಚೆ ಎಐಸಿಸಿ ಮಟ್ಟದಲ್ಲಿ ನಡೆದಿದೆ.

ಮುಂದಿನ ಚುನಾವಣೆ ಲೆಕ್ಕಾಚಾರ: ಖರ್ಗೆ ದಲಿತ ಸಮಾಜದವರು. ಹಾಗಂತ ಯಾವೊಂದು ಜಾತಿಗೆ ಸೀಮಿತರಾಗಿ ರಾಜಕೀಯ ಮಾಡಿಲ್ಲ. ಸದಾ ಜನಸಾಮಾನ್ಯರ ಪರ ಧ್ವನಿ ಎತ್ತಿದವರು. ದಲಿತರು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕೆಂಬ ಬಗ್ಗೆ ಅನೇಕ ಸಲ ಚರ್ಚೆ ನಡೆದು ತಣ್ಣಗಾಗಿದೆ. ಆದರೆ ಯಾವತ್ತೂ ಖರ್ಗೆ ಈ ಬಗ್ಗೆ ಚಕಾರ ಎತ್ತಿಲ್ಲ. ಮುಂಬರುವ ಕರ್ನಾಟಕ, ಗುಜರಾತ್, ಹಿಮಾಚಲಪ್ರದೇಶ ಇತರ ರಾಜ್ಯಗಳ ವಿಧಾನಸಭೆ ಚುನಾವಣೆ, 2024ರ ಲೋಕಸಭಾ ಚುನಾವಣೆಯಲ್ಲಿ ದಲಿತರ ಮತಗಳು ಭರಪೂರ ಸೆಳೆಯುವಲ್ಲಿ ಇದು ಪರಿಣಾಮಕಾರಿ ಕ್ರಮ ಆದರೂ ಆಗಬಹುದು.

ಸೋನಿಯಾ ಸೂಚಿಸಿದರೆ ಖರ್ಗೆ ಸ್ಪರ್ಧೆ: ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚಿಸಿದರೆ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಮಲ್ಲಿಕಾರ್ಜುನ ಖರ್ಗೆ ಹಿಂದೇಟು ಹಾಕುವುದಿಲ್ಲ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಪಕ್ಷ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಒಪ್ಪಿಕೊಳ್ಳುವುದಾಗಿ ಖರ್ಗೆ, ಸೋನಿಯಾಗಾಂಧಿಗೆ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಎನ್​ಸಿಪಿ ಅಧ್ಯಕ್ಷ ಶರದ್ ಪವಾರ್, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಸೇರಿದಂತೆ ವಿರೋಧ ಪಕ್ಷಗಳ ನಾಯಕರ ಜತೆ ಖರ್ಗೆ ಉತ್ತಮ ಸಂಪರ್ಕ ಮತ್ತು ಬಾಂಧವ್ಯವನ್ನು ಹೊಂದಿದ್ದಾರೆ. ಇದು ಅವರ ಪ್ರಯೋಜನಕ್ಕೆ ಬರಲಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. ಪಕ್ಷ ಕೇಳಿದ್ದನ್ನು ಖರ್ಗೆ ಎಂದೂ ನಿರಾಕರಿಸಿಲ್ಲ. ಪಕ್ಷ ತೆಗೆದುಕೊಳ್ಳುವ ನಿರ್ಧಾರವನ್ನು ಅವರು ಪಾಲಿಸುತ್ತಾರೆ ಎಂದು ಆಪ್ತರು ಹೇಳಿದ್ದಾರೆ.

ನಾಮಪತ್ರ ಕ್ಲೈಮಾಕ್ಸ್ ನಾಳೆ: ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಶುಕ್ರವಾರ ಕೊನೇ ದಿನ. ಒಂದು ವೇಳೆ ಮಲ್ಲಿಕಾರ್ಜುನ ಖರ್ಗೆ ಕೊನೇ ಹಂತದ ಬೆಳವಣಿಗೆಗಳಲ್ಲಿ ನಾಮಪತ್ರ ದಾಖಲಿಸಿದರೆ ಅಧ್ಯಕ್ಷರಾಗಿ ಆಯ್ಕೆ ಆಗುವುದು ಪಕ್ಕಾ ಎಂದು ಅವರ ಆಪ್ತ ವಲಯದ ಮೂಲಗಳು ತಿಳಿಸುತ್ತವೆ. ನಾಮಪತ್ರ ಸಲ್ಲಿಸಲ್ಲ ಎಂದು ಈಗಾಗಲೇ ಖರ್ಗೆ ಸ್ಪಷ್ಟಪಡಿಸಿದ ಕಾರಣ ಕೆಲ ಹಿರಿಯ ಮುಖಂಡರು ಇವರ ಮನವೊಲಿಕೆ ಮಾಡುತ್ತಿದ್ದಾರೆ.

ಪ್ರಿಯಾಂಕಾ ಪರ ಬ್ಯಾಟಿಂಗ್: ಅಧ್ಯಕ್ಷ ಹುದ್ದೆಗೆ ಪ್ರಿಯಾಂಕಾ ಗಾಂಧಿ ನೇಮಕ ಮಾಡಬೇಕು ಎಂದು ಸಂಸದ ಅಬ್ದುಲ್ ಖಲೀಕ್ ಹೇಳಿದ್ದಾರೆ. ಪ್ರಿಯಾಂಕಾ ಈಗ ವಾದ್ರಾ ಕುಟುಂಬದ ಸೊಸೆಯಾಗಿದ್ದು, ವಿವಾಹವಾದ ನಂತರ ಅವರು ಗಾಂಧಿ ಕುಟುಂಬಕ್ಕೆ ಸೇರುವುದಿಲ್ಲ. ಹಾಗಾಗಿ ಅವರನ್ನು ಪಕ್ಷದ ಅಧ್ಯಕ್ಷರಾಗಿ ನೇಮಕ ಮಾಡಬೇಕು ಎಂದು ಹೇಳಿದ್ದಾರೆ.

ಸದ್ಯಕ್ಕೆ ಗೆಹ್ಲೋಟ್ ರಾಜೀನಾಮೆ ಇಲ್ಲ: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸದ್ಯಕ್ಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಅವರ ಆಪ್ತರಾದ ರಾಜ್ಯ ಸಚಿವ ಪ್ರತಾಪ್ ಸಿಂಗ್ ಕಚರಿಯಾವಾಸ್ ಹೇಳಿದ್ದಾರೆ. ಗೆಹ್ಲೋಟ್ ನೇತೃತ್ವದಲ್ಲಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಅವರ ರಾಜೀನಾಮೆ ಬಗ್ಗೆ ನಾವು ರ್ಚಚಿಸಿಲ್ಲ. ಮುಂದೆಯೂ ಅವರು ರಾಜೀನಾಮೆ ನೀಡುವುದಿಲ್ಲ ಎಂದು ಪ್ರತಾಪ್ ಸಿಂಗ್ ಹೇಳಿದ್ದಾರೆ. ರಾಜಸ್ಥಾನದಲ್ಲಿ ಗೆಹ್ಲೋಟ್ ಐದು ವರ್ಷಗಳನ್ನು ಪೂರ್ಣಗೊಳಿಸಲಿದ್ದಾರೆ ಎಂದು ಮತ್ತೊಬ್ಬ ಸಚಿವ ವಿಶ್ವೇಂದ್ರ ಸಿಂಗ್ ಹೇಳಿದ್ದಾರೆ.

ದಿಗ್ವಿಜಯ ಸಿಂಗ್ ಸ್ಪರ್ಧೆ ಸಾಧ್ಯತೆ: ಅಧ್ಯಕ್ಷೀಯ ಚುನಾವಣೆಗೆ ಸೆ.30ರಂದು ನಾಮಪತ್ರ ಸಲ್ಲಿಸಲು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ನಿರ್ಧರಿಸಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸು ವುದು ಅವರ ಸ್ವಂತ ನಿರ್ಧಾರವಾಗಿದ್ದು, ಗಾಂಧಿ ಕುಟುಂಬದಿಂದ ಅವರಿಗೆ ಯಾವುದೇ ಸೂಚನೆ ಬಂದಿಲ್ಲ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ವಯನಾಡು ಪ್ರವೇಶಿಸಿದ ಭಾರತ್ ಜೋಡೊ: ಕಾಂಗ್ರೆಸ್​ನ ಭಾರತ್ ಜೋಡೊ ಯಾತ್ರೆ ಬುಧವಾರ ವಯನಾಡು ಪ್ರವೇಶಿಸುವ ಮೂಲಕ 18ನೇ ದಿನಕ್ಕೆ ಕಾಲಿಟ್ಟಿದೆ. ವಯನಾಡು ರಾಹುಲ್ ಗಾಂಧಿಯವರ ಲೋಕಸಭೆ ಕ್ಷೇತ್ರವಾಗಿದೆ. ವಯನಾಡಿಗೆ ಸ್ವಾಗತ ಎಂಬ ಶೀರ್ಷಿಕೆಯಡಿ ಕೇರಳದ ಸಾಂಪ್ರದಾಯಿಕ ನೃತ್ಯವನ್ನು ಪ್ರದರ್ಶಿಸುವ ಮೂಲಕ ಯಾತ್ರಾರ್ಥಿಗಳಿಗೆ ಸ್ವಾಗತ ಕೋರಲಾಯಿತು. ‘ಬುಧವಾರ ಬೆಳಗ್ಗೆ 6.10ಕ್ಕೆ ಕಂಟೈನರ್ ಬಳಿ ಧ್ವಜಾರೋಹಣ ಮಾಡುವ ಭಾಗ್ಯ ನನ್ನದಾಗಿತ್ತು. ಭಾರತ್ ಜೋಡೊ ಯಾತ್ರೆಯು ಕೇರಳದಲ್ಲಿ 11ನೇ ದಿನಕ್ಕೆ ಕಾಲಿಟ್ಟಿದೆ ’ ಎಂದು ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಸೇರಿದ ಹಿಮಾಚಲ ಕೈ ಮುಖ್ಯಸ್ಥ: ಹಿಮಾಚಲ ಪ್ರದೇಶ ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷ ಹರ್ಷ ಮಹಾಜನ್ ಬುಧವಾರ ಬಿಜೆಪಿಗೆ ಸೇರ್ಪಡೆ ಗೊಂಡರು. ಕಾಂಗ್ರೆಸ್ ದೃಷ್ಟಿಹೀನ, ದಿಕ್ಕಿಲ್ಲದ ಮತ್ತು ನಾಯಕನಿಲ್ಲದ ಪಕ್ಷವಾಗಿದೆ. ಇದು ದೆಹಲಿಯಂತೆಯೇ ‘ಮಾ-ಬೇಟಾ’ದಿಂದ ಆಳಲ್ಪಟ್ಟಿದೆ ಎಂದು ಎಂದು ಅವರು ವಾಗ್ದಾಳಿ ನಡೆಸಿದರು.