ನ್ಯೂಸ್

Shiggaon ByPoll; ಮತ್ತೊಮ್ಮೆ ಅಲ್ಪಸಂಖ್ಯಾತರಿಗೆ ಮಣೆ ಹಾಕಿದ ಕಾಂಗ್ರೆಸ್​

ನವದೆಹಲಿ: ರಾಜ್ಯ ಕಾಂಗ್ರೆಸ್​ ಘಟಕದ ಪಾಲಿಗೆ ಕಗ್ಗಂಟಾಗಿ ಉಳಿದಿದ್ದ ಶಿಗ್ಗಾಂವಿ ಕ್ಷೇತ್ರಕ್ಕೆ (Shiggaon Bypoll) ಸಂಬಂಧಿಸಿದಂತೆ ಅಭ್ಯರ್ಥಿಯನ್ನು ಘೊಷಿಸಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಫರ್ಧಿಸಿ ಸೋಲುಂಡಿದ್ದ ಯಾಸಿರ್​ ಖಾನ್​ ಪಠಾಣ್​ ಅವರಿಗೆ ಕಾಂಗ್ರೆಸ್​ ಮತ್ತೊಮ್ಮೆ ಮಣೆ ಹಾಕಿದೆ.

2023ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದ ಯಾಸಿರ್​ ಖಅನ್​ ಅವರಿಗೆ ಕಾಂಗ್ರೆಸ್​ ಮತ್ತೊಮ್ಮೆ ಟಿಕೆಟ್​ ನೀಡಿದ್ದು, ಈ ಸಂಬಂಧ ಎಐಸಿಸಿ ಆದೇಶ ಹೊರಡಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆದೇಶದ ಮೇರೆಗೆ ಎಐಸಿಸಿ ಜನರಲ್ ಸೆಕ್ರೆಟರಿ ಕೆಸಿ ವೇಣುಗೋಪಾಲ್ ಅವರು ಗುರುವಾರ (ಅಕ್ಟೋಬರ್ 24) ಅಧಿಕೃತ ಆದೇಶ ಹೊರಡಿಸಿದ್ದಾರೆ.

ಹಾವೇರಿ ಲೋಕಸಭಾ ಕ್ಷೇತ್ರದಿಂದ ಗೆದ್ದಿರುವ ಬಸವರಾಜ್​ ಬೊಮ್ಮಾಯಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಉಪಚುನಾವಣೆಗೆ ಬಿಜೆಪಿಯಿಂದ ಬೊಮ್ಮಾಯಿ ಅವರ ಪುತ್ರ ಭರತ್​ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್​ನಲ್ಲಿ ಅಲ್ಪಸಂಖ್ಯಾತರ ಅಥವಾ ಲಿಂಗಾಯತರಿಗೆ ಟಿಕೆಟ್​ ನೀಡಬೇಕೆಂಬ ಆಗ್ರಹ ಕೇಳಿ ಬಂದಿತ್ತು. ಅಂತಿಮವಾಗಿ ಹೈಕಮಾಂಡ್​ ಮುಸ್ಲಿಂ ಅಭ್ಯರ್ಥಿಗೆ ಮಣೆ ಹಾಕಿದೆ.

ಈ ಮೊದಲು ಕಾಂಗ್ರೆಸ್​ನಲ್ಲಿ ಶಿಗ್ಗಾಂವ್​ (Shiggaon ByPoll) ಟಿಕೆಟ್​ಗಾಗಿ ಯಾಸಿರ್​ಖಾನ್​ ಪಠಾಣ್​, ಅಜ್ಜಂಪೀರ್​ ಖಾದ್ರಿ, ವೈಶಾಲಿ ಕುಲಕರ್ಣಿ (ಶಾಸಕ ವಿನಯ್​ ಕುಲಕರ್ಣಿ ಪುತ್ರಿ) ಹೆಸರುಗಳು ಮುಂಚೂಣಿಗೆ ಬಂದಿದ್ದವು. ಅಲ್ಪಸಂಖ್ಯಾತರಿಗೆ ಟಿಕೆಟ್​ ನೀಡುವಂತೆ ಸಚಿವ ಜಮೀರ್​ ಅಹ್ಮದ್​ ಹೈಕಮಾಂಡ್​ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಅಂತಿಮವಾಗಿ ಹೈಕಮಾಂಡ್​ ಯಾಸಿರ್​ ಖಾನ್​ ಪಠಾಣ್​ ಅವರಿಗೆ ಟಿಕೆಟ್​ ನೀಡಿದೆ.