ಚೆನ್ನೈ: ಆದಾಯಕ್ಕಿಂತಲೂ ಆಸ್ತಿಪಾಸ್ತಿ ಸಂಪಾದಿಸಿ ಶಿಕ್ಷೆಗೆ ಒಳಗಾಗಿದ್ದ ಹಾಗೂ ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ತಮಿಳುನಾಡಿನ ಶಶಿಕಲಾ ನಟರಾಜನ್ (ವಿಕೆ ಶಶಿಕಲಾ) ರಾಜಕೀಯ ತೊರೆಯುವುದಾಗಿ ಘೋಷಣೆ ಮಾಡಿದ್ದಾರೆ.
ಈ ಕುರಿತು ಬುಧವಾರ ಸಂಜೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ನನಗೆ ಅಧಿಕಾರ ಹಾಗೂ ಯಾವುದೇ ಹುದ್ದೆಯ ಆಸೆಯಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ನಾನು ತಮಿಳುನಾಡಿನ ಸಕ್ರಿಯ ರಾಜಕಾರಣದಿಂದ ಹೊರಹೋಗುತ್ತಿದ್ದೇನೆ ಎಂದು ಚಿನ್ನಮ್ಮ ಹೇಳಿದ್ದಾರೆ.
ಜಯಾ ಹೋದ ಮೇಲೆ ಏನಿದ್ದರೂ ನನಗೆ ಶೂನ್ಯ, ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷ ಶಕ್ತಿಶಾಲಿಯಾಗಿ ಬೆಳೆಯಲಿ. ಒಗ್ಗಟ್ಟಾಗಿರಲಿ. ಡಿಎಂಕೆ ವಿರುದ್ಧ ಎಂದೂ ಹೋರಾಟವನ್ನು ನಿಲ್ಲಿಸಬೇಡಿ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಇತ್ತೀಚಿಗಷ್ಟೇ ಐದು ವರ್ಷ ಶಿಕ್ಷೆ ಅನುಭವಿಸಿ ಶಶಿಕಲಾ ಬೆಂಗಳೂರು ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದರು. ಮುಂದಿನ ತಿಂಗಳು ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿದ್ದು ಎಐಎಡಿಎಂಕೆ ಯ ನಾಯಕತ್ವವನ್ನು ಶಶಿಕಲಾ ವಹಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಇದೀಗ ಶಶಿಕಲಾ ಕೈಗೊಂಡಿರುವ ನಿರ್ಧಾರ ದೊಡ್ಡ ಆಶ್ಚರ್ಯಕ್ಕೆ ಕಾರಣವಾಗಿದೆ. ತಮಿಳುನಾಡಿನಲ್ಲಿ ರಾಜಕೀಯ ಸಮೀಕರಣ ಬದಲಾಗುವ ನಿರೀಕ್ಷೆ ಇದೆ.