ನ್ಯೂಸ್

ಚೀನಾ ವಿರುದ್ಧ ತಿರುಗಿಬಿದ್ದ 100ಕ್ಕೂ ಹೆಚ್ಚು ರಾಷ್ಟ್ರಗಳು, ಕರೊನಾ ವೈರಸ್​ ಮೂಲ ಶೋಧಕ್ಕೆ ಒತ್ತಾಯ

ನವದೆಹಲಿ: ಇಡೀ ಜಗತ್ತನ್ನೇ ಕಾಡುತ್ತಿರುವ ಕರೊನಾ ವೈರಸ್​ ಮೂಲ ಯಾವುದು? ಇದು ಶುರುವಾಗಿದ್ದೆಲ್ಲಿ?...
ಅರೇ ಇದೇನಿದು... ಚೀನಾದಿಂದಲೇ ಇದು ಆರಂಭವಾಗಿದ್ದು, ವುಹಾನ್​ ಸಿಟಿಯಲ್ಲಿ ಮೊದಲ ಪ್ರಕರಣ ವರದಿಯಾಗಿದ್ದು ಎಂಬುದು ಜಗತ್ತಿಗೆ ಗೊತ್ತಿರುವ ಸತ್ಯ ಅಂತೀರಾ. ಆದರೆ, ಸ್ವತಃ ಚೀನಾ ಇದನ್ನು ಬಹಿರಂಗವಾಗಿ ಒಪ್ಪಿಕೊಂಡಿಲ್ಲವಲ್ಲ. ಹೀಗಾಗಿ ಈ ಬಗ್ಗೆ ಅಮೂಲಾಗ್ರ ತನಿಖೆ ನಡೆಯಬೇಕೆಂದು 100ಕ್ಕೂ ಅಧಿಕ ದೇಶಗಳು ಒತ್ತಾಯಿಸಿವೆ.

ವಿಶ್ವ ಆರೋಗ್ಯ ಸಂಸ್ಥೆಯ ಮಹತ್ವದ ನೀತಿ ನಿರೂಪಕ ಸಭೆಯಾದ ವಿಶ್ವ ಆರೋಗ್ಯ ಸಮಾವೇಶ ನಡೆಯಲಿದ್ದು, ಇದೇ ಮೊದಲ ಬಾರಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಆಯೋಜಿಸಲಾಗಿದೆ. ಕರೊನಾ ವೈರಸ್​ ಮೂಲದ ಬಗ್ಗೆ ತನಿಖೆಯಾಗಬೇಕೆಂದು ಒತ್ತಾಯಿಸಿರುವ ಪ್ರಸ್ತಾವನೆಯೂ ಸಮಾವೇಶದಲ್ಲಿ ಚರ್ಚೆಯಾಗಲಿದೆ.

ಅಮೆರಿಕದ ಬೆಂಬಲದೊಂದಿಗೆ ಆಸ್ಟ್ರೇಲಿಯಾ ಈ ಪ್ರಸ್ತಾವನೆ ಮಂಡಿಸಿದೆ. ಭಾರತವೂ ಸೇರಿ 123 ದೇಶಗಳು ಇದಕ್ಕೆ ಬೆಂಬಲ ನೀಡಿವೆ. ಹೀಗಾಗಿ ಚೀನಾಗೆ ತಲೆನೋವು ಶುರುವಾಗಿದೆ. ಚೀನಾ ಮಾತ್ರವಲ್ಲ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ. ಟೆಡ್ರಸ್​ ಅಡ್ನಾಂ ಹುದ್ದೆಗೂ ಇದು ಕುತ್ತು ತರುವ ಸಂಭವವಿದೆ.
ಕರೊನಾ ವಿಚಾರವಾಗಿ ಅಮೆರಿಕ ಪದೇಪದೆ ಚೀನಾ ವಿರುದ್ಧ ಹರಿಹಾಯುತ್ತಲೇ ಇತ್ತು. ಇದನ್ನು ವಿಶ್ವಸಂಸ್ಥೆಯೂ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಅಮೆರಿಕ, ವಿಶ್ವಸಂಸ್ಥೆಗೆ ನೀಡಬೇಕಿದ್ದ ಆರ್ಥಿಕ ಅನುದಾನವನ್ನು ತಡೆಹಿಡಿದಿದೆ. ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರ ಕಾರ್ಯವೈಖರಿ ಬಗ್ಗೆಯೂ ಪ್ರಶ್ನೆಗಳೆದ್ದಿವೆ.

ಚೀನಾ ಕರೊನಾ ವಿಚಾರವಾಗಿ ಸತ್ಯವನ್ನು ಮುಚ್ಚಿಟ್ಟಲ್ಲದೇ, ಅಮೆರಿಕದತ್ತ ಬೊಟ್ಟು ತೋರಿಸಿತ್ತು. ಚೀನಾದ ವೈರಾಣು ಪ್ರಯೋಗಾಲಯದಿಂದಲೇ ಇದು ಸೋರಿಕೆಯಾಗಿದೆ ಎಂದು ಅಮೆರಿಕ ಆರೋಪಿಸಿತ್ತು. ಒಟ್ಟಾರೆ ಕರೊನಾದಿಂದಾಗಿ ಇಡೀ ಜಗತ್ತು ಸಂಕಷ್ಟಕ್ಕೀಡಾಗಿದೆ. ಹೀಗಾಗಿ ಇದರ ಮೂಲದ ಬಗ್ಗೆ ನಿಷ್ಪಕ್ಷಪಾತ, ಸಮಗ್ರ ಹಾಗೂ ಸ್ವತಂತ್ರ ತನಿಖೆ ನಡೆಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಗೆ ಎಲ್ಲ ರಾಷ್ಟ್ರಗಳು ಒತ್ತಾಯಿಸಿವೆ.