ನ್ಯೂಸ್

ಸರ್ವರಿಗೂ ಕೃಷಿ ಭಾಗ್ಯ; ಭೂಮಿ ಖರೀದಿಸುವುದಕ್ಕೆ ರೈತರಲ್ಲದವರಿಗೂ ರಾಜ್ಯ ಮುಕ್ತ

ಬೆಂಗಳೂರು: ರಾಜ್ಯದಲ್ಲಿ ಇನ್ನು ಮುಂದೆ ಯಾರು ಬೇಕಾದರೂ ಕೃಷಿ ಜಮೀನು ಖರೀದಿಸಲು ಸಾಧ್ಯವಾಗುವಂತೆ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಮಹತ್ವದ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಹಾಲಿ ಕಾಯ್ದೆಯಲ್ಲಿ ಕೃಷಿ ಭೂಮಿ ಖರೀದಿಸುವುದಕ್ಕೆ ಕೆಲವು ನಿರ್ಬಂಧಗಳಿದ್ದವು. ಅವುಗಳನ್ನು ಸಡಿಲಿಸುವ ಜತೆಗೆ ಕಾಯ್ದೆ ಸೇವೆಯನ್ನು ಸರಳೀಕರಣಗೊಳಿಲು ಗುರುವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಕಾನೂನು ಸಚಿವ ಮಾಧುಸ್ವಾಮಿ ಸರ್ಕಾರದ ನಿರ್ಧಾರ ಕುರಿತ ಮಾಹಿತಿಯನ್ನು ಸಭೆಯ ಬಳಿಕ ಸುದ್ದಿಗಾರರಿಗೆ ನೀಡಿದರು. ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಕೇರಳದಲ್ಲಿ ಭೂಮಿ ಖರೀದಿಗೆ ನಿರ್ಬಂಧಿಸುವಂಥ ಕಾನೂನುಗಳಿಲ್ಲ. ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲೂ ಕೃಷಿಯೇತರರಿಗೆ ಕೃಷಿ ಜಮೀನು ಖರೀದಿಸುವುದಕ್ಕೆ ಅವಕಾಶವಿದೆ. ಅದೇ ರೀತಿ ನಮ್ಮಲ್ಲೂ ಕಾಯ್ದೆಗೆ ತಿದ್ದುಪಡಿ ತರಲು ಸಂಪುಟ ನಿರ್ಧರಿಸಿದೆ ಎಂದರು. ಇದನ್ನೂ ಓದಿ: ಬಾಡಿಬಿಲ್ಡಿಂಗ್ ಸೀಕ್ರೆಟ್ ಬಿಚ್ಚಿಟ್ಟ 8 ಬಾರಿ ಮಿಸ್ಟರ್ ಒಲಂಪಿಯಾ ರೋನಿ ಕೊಲ್ಮಾನ್…

ಮೊದಲು 2 ಲಕ್ಷ ರೂ. ಮೇಲ್ಪಟ್ಟ ಕೃಷಿಯೇತರ ಆದಾಯ ವುಳ್ಳವರು ಕೃಷಿ ಜಮೀನು ಖರೀದಿಸುವುದಕ್ಕೆ ಅವಕಾಶ ಇರಲಿಲ್ಲ. ತರುವಾಯ ಈ ಆದಾಯದ ಮಿತಿ 25 ಲಕ್ಷ ರೂ.ಗೆ ಏರಿಕೆಯಾಗಿತ್ತು. ಜತೆಗೆ ಕೃಷಿ ಜಮೀನು ಹೊಂದಿದವರಷ್ಟೇ ಕೃಷಿ ಜಮೀನು ಖರೀದಿಸಬಹುದೆಂಬ ನಿಯಮ ಜಾರಿಯಲ್ಲಿತ್ತು. ಇದರಿಂದಾಗಿ ಅನೇಕರು ನೆರೆಯ ರಾಜ್ಯಗಳಲ್ಲಿ ಜಮೀನು ಖರೀದಿ ಸುತ್ತಿದ್ದಾರೆ. ನಮ್ಮ ರಾಜ್ಯದಲ್ಲೇ ಭೂಮಿಗಾಗಿ ಬಂಡವಾಳ ಹೂಡಿದರೆ ಹೆಚ್ಚು ಉಪಯೋಗ ಆಗಲಿದೆ ಎಂಬುದು ಸರ್ಕಾರದ ಉದ್ದೇಶವಾಗಿದೆ ಎಂದು ಸಚಿವರು ತಿಳಿಸಿದರು.

ಕಿರುಕುಳ ತಪ್ಪುತ್ತದೆ: ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961 ಕಲಂ 79ಎ,ಬಿ,ಸಿ ಮತ್ತು 80ನ್ನು ತೆಗೆದು ಹಾಕಿದರೆ ಜನಸಾಮಾನ್ಯರಿಗೆ ಕಿರುಕುಳ ತಪ್ಪುತ್ತದೆ. ಮತ್ತು ಕಲಂ 63ರ ಅಡಿ ಇರುವ ಭೂಮಿಯ ಗರಿಷ್ಠ ಮಿತಿಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಕೃಷಿ ಭೂಮಿ ಇಲ್ಲದ ಅನೇಕರಿಗೆ ಕೃಷಿ ಮಾಡಲು ಆಸಕ್ತಿ ಇದ್ದರೂ ಈಗಿರುವ ಕಾಯ್ದೆಯಿಂದ ಜಮೀನು ಖರೀದಿಸಲಾಗುತ್ತಿರಲಿಲ್ಲ. ಅಲ್ಲದೆ, ಐಟಿ ಬಿಟಿಯವರು ಕೂಡ ಸದ್ಯ ಕೃಷಿ ಕಡೆಗೆ ಹೆಚ್ಚು ಉತ್ತೇಜಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷಿ ಭೂಮಿ ಖರೀದಿಗೆ ಇದ್ದ ನಿರ್ಬಂಧ ತೆಗೆದು ಹಾಕಲು ನಿರ್ಧರಿಸಲಾಗಿದೆ. ಈ ಕುರಿತು ವಿಧಾನ ಮಂಡಲದ ಅಧಿವೇಶನದಲ್ಲಿ ವಿಧೇಯಕ ತಂದು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಮಾಧುಸ್ವಾಮಿ ವಿವರಿಸಿದರು. ಇದನ್ನೂ ಓದಿ: ಮನುಷ್ಯನನ್ನು ಹಿಡಿದು ಕೊಂದಿದ್ದ ಹೆಣ್ಣು ಹುಲಿಗೆ ಅನಾರೋಗ್ಯ; ಹೊಳೆಯಲ್ಲೇ ಪ್ರಾಣ ಬಿಟ್ಟಿತು

ಹೈಕೋರ್ಟ್ ನಿರ್ದೇಶನ: ರಾಜ್ಯ ಹೈಕೋರ್ಟ್ ಕೂಡ ಜನರಿಗೆ ಈ ಕಾಯ್ದೆಯಿಂದ ಆಗುತ್ತಿರುವ ಕಿರುಕುಳ ತಪ್ಪಿಸುವಂತೆ ಹಾಗೂ ಸರಳೀಕರಣಗೊಳಿಸುವಂತೆ ನಿರ್ದೇಶನ ನೀಡಿತ್ತೆಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
11.79 ಲಕ್ಷ ಹೆಕ್ಟೇರ್ ಬೀಳು ಭೂಮಿ

ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ಕಲಂ 79 ಎ ಮತ್ತು 79 ಬಿ ಪ್ರಕಾರ ಸಕ್ರಮ ಕೋರಿ ಒಟ್ಟು 83,171 ಪ್ರಕರಣ ದಾಖಲಾಗಿವೆ. ಒಟ್ಟು 1,76,180 ಎಕರೆ ವಿಸ್ತೀರ್ಣ ಒಳಗೊಂಡಿದೆ. ಒಟ್ಟು ಪ್ರಕರಣಗಳ ಪೈಕಿ 12,231 ಪ್ರಕರಣ ಬಾಕಿ ಇವೆ. ಅದರಲ್ಲಿ 24,553 ಎಕರೆ ವಿಸ್ತೀರ್ಣದ ಜಮೀನು ಇದೆ. ಒಟ್ಟು 190.50 ಲಕ್ಷ ಹೆ. ಜಮೀನು ಇದ್ದು, ಅದರಲ್ಲಿ ಅರಣ್ಯ ಭೂಮಿ 30.73 ಲಕ್ಷ ಹೆ. ಇದೆ. ಅದೇ ರೀತಿ ವ್ಯವಸಾಯಕ್ಕೆ ಯೋಗ್ಯವಲ್ಲದ ಜಮೀನು 22.94 ಲಕ್ಷ ಹೆ. ಇದೆ. ಹಾಗೆಯೇ ಬೀಳು ಬಿದ್ದ ಜಮೀನು 22.07 ಲಕ್ಷ ಹೆ. ಆಗಿದೆ. ವ್ಯವಸಾಯ ಮಾಡದೇ ಬೀಳು ಬಿದ್ದ ಜಮೀನುಗಳು ಒಟ್ಟು 11.79 ಲಕ್ಷ ಹೆ.ಇದೆ. ಆದ್ದರಿಂದ ಕೃಷಿಕರಲ್ಲದವರು ಈಗಲೂ ಕೃಷಿ ಜಮೀನು ಖರೀದಿಸಿದರೆ ಕೃಷಿ ಉತ್ಪಾದನೆ ಹೆಚ್ಚುತ್ತದೆ ಎಂದು ಸಚಿವರು ತಿಳಿಸಿದರು. ಇದನ್ನೂ ಓದಿ: ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯುವ ದಿನ ಲಾಕ್​ಡೌನ್​..! ಹೀಗಂತ ಮಾಜಿ ಶಿಕ್ಷಣ ಸಚಿವರು ಹೇಳಿದ್ದೇಕೆ?

ಅನುಕೂಲಗಳು
  • ಉದ್ಯಮಿಗಳು/ಬಂಡವಾಳ ಹೂಡಿಕೆದಾರರು ಸುಲಭವಾಗಿ ಕೃಷಿ ಭೂಮಿ ಮಾಲೀಕರಾಗಬಹುದು
  • ಆದಾಯ ಮಿತಿ ಇಲ್ಲದೇ ಇರುವುದರಿಂದ ಶ್ರೀಮಂತರು ನೆರೆ ರಾಜ್ಯದ ಬದಲಾಗಿ ರಾಜ್ಯಕ್ಕೆ ಬರಬಹುದು
  • ಕೃಷಿ ಭೂಮಿ ಬೆಲೆ ಏರಿಕೆಯಾಗಿ ರೈತರಿಗೆ ಅನುಕೂಲ
  • ಗುತ್ತಿಗೆ ಕೃಷಿಗೆ ಹಾಗೂ ಕಂಪನಿ ಕೃಷಿಗೆ ಅನುಕೂಲ
  • ಪಾಳು ಬಿದ್ದ ಭೂಮಿಯೂ ಕೃಷಿಗೆ ಬಳಕೆ ಆಗುತ್ತದೆ
ಆತಂಕವೇನು?
  • ಕೃಷಿ ಭೂಮಿ ಪರಭಾರೆಯಾಗುವ ಅಪಾಯ ಹೆಚ್ಚು
  • ಸಣ್ಣ ಹಿಡುವಳಿದಾರರು, ಬಡವರು ಭೂಮಿ ಕಳೆದುಕೊಳ್ಳುವ ಸಾಧ್ಯತೆಗಳಿವೆ
  • ಕೃಷಿಯೇತರ ಚಟುವಟಿಕೆಗಳಿಗೆ ದುರ್ಬಳಕೆ ಮಾಡಿ ಕೊಳ್ಳುವ ಅಪಾಯ
ಇದು ಯಾರು ವ್ಯವಸಾಯ ಮಾಡುತ್ತಾರೋ ಅವರ ಬಳಿ ಭೂಮಿ ಇರಬಾರದು, ಹಣ ಇದ್ದವರ ಕೈಯಲ್ಲಿ ಇರಬೇಕು ಎಂಬಂತಿದೆ. ಸರ್ಕಾರದ ಈ ನೀತಿಯ ವಿರುದ್ಧ ಜೂ. 27 ರಿಂದ 30 ತನಕ ರಾಜ್ಯದ 1000 ಗ್ರಾಮ ಪಂಚಾಯಿತಿಗಳ ಎದುರು ಪ್ರತಿಭಟನೆ ನಡೆಸಲಾಗುತ್ತದೆ. | ಜೆ.ಸಿ. ಬಯ್ಯಾರೆಡ್ಡಿ ಅಧ್ಯಕ್ಷ, ಪ್ರಾಂತ ರೈತ ಸಂಘ
108 ಎಕರೆಗೆ ಅವಕಾಶ

ಉದ್ದೇಶಿತ ಕಾಯ್ದೆ ತಿದ್ದುಪಡಿ ಯಿಂದ ಕುಟುಂಬವಿಲ್ಲದ ವ್ಯಕ್ತಿ ಅಥವಾ ಐದು ಮಂದಿ ಇರುವ ಒಂದು ಕುಟುಂಬ 108 ಎಕರೆವರೆಗೆ ಜಮೀನು ಖರೀದಿಸಬಹುದಾಗಿದೆ. ಕೃಷಿ ಭೂಮಿ ಖರೀದಿಗೆ ಇದ್ದ ಆದಾಯ ಮಿತಿಯನ್ನೂ ತೆಗೆದು ಹಾಕಲು ಸರ್ಕಾರ ತೀರ್ಮಾನಿಸಿದೆ.