ಚೆನ್ನೈ: ತಮಿಳುನಾಡಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಯೊಬ್ಬ ತನ್ನ ಪ್ರತಿಭೆಯ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. 9ನೇ ತರಗತಿಯಲ್ಲೇ ವಿಶ್ವದ ಅತಿದೊಡ್ಡ ಕಂಪನಿಯಾದ ಅಮೆಜಾನ್ ಜತೆ ಒಪ್ಪಂದ ಮಾಡಿಕೊಂಡಿದ್ದು, ಈ ವಯಸ್ಸಿನಲ್ಲೇ ತಿಂಗಳಿಗೆ 2 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಇದನ್ನು ಕೇಳಿದರೆ ನಿಮಗೆ ಅಚ್ಚರಿಯಾಗಬಹುದು. ಈ ಕುರಿತಾದ ಒಂದು ಇಂಟೆರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಪ್ರತಿಭಾವಂತ ಹುಡುಗನ ಹೆಸರು ಸೈಲೇಶ್. ಈತ ವಿರುದುನಗರ ಜಿಲ್ಲೆಯ ಇಳಂತಿಕುಲಂ ಏರಿಯಾದ ನಲ್ಲಪೆರುಮಾಳ್ ಮತ್ತು ಮುತುಲಕ್ಷ್ಮೀ ದಂಪತಿಯ ಪುತ್ರ. ಇವರು ಕುಟುಂಬ 8 ವರ್ಷಗಳ ಹಿಂದೆಯೇ ಚೆನ್ನೈಗೆ ವಲಸೆ ಬಂದು ನೆಲೆಸಿದೆ. ಸದ್ಯ ಚೆನ್ನೈನ ಮೀಂಜೋರ್ನಲ್ಲಿ ಕುಟುಂಬ ವಾಸವಿದೆ.
ನಲ್ಲಪೆರುಮಾಳ್ ಅವರು ತಮ್ಮದೇಯಾದ ಐರನ್ ಬಿಸಿನೆಸ್ ಮಾಡುತ್ತಿದ್ದಾರೆ. ಮುತ್ತುಲಕ್ಷ್ಮೀ ತಮ್ಮ ಪತಿಗೆ ನೆರವಾಗಿದ್ದಾರೆ. ಈ ದಂಪತಿಯ ಹಿರಿಯ ಪುತ್ರನಾಗಿರುವ ಸೈಲೇಶ್ಗೆ ಮೊಬೈಲ್ ಫೋನ್ಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾನೆ. ಆತ ಯಾವಾಗಲೂ ಮೊಬೈಲ್ನಲ್ಲಿಯೇ ಮುಳುಗಿರುತ್ತಾನೆ. ಆದರೆ, ಈತ ಮೊಬೈಲ್ ಅನ್ನು ಯಾವುದೇ ಕಾರಣಕ್ಕೂ ಕೆಟ್ಟ ಉದ್ದೇಶಕ್ಕೆ ಬಳಸದೇ ಕಲಿಕೆಯ ದೃಷ್ಟಿಯಲ್ಲಿ ಉಪಯೋಗಿಸಿದರ ಫಲ ಇಂದು ಆತನ ಕೈಹಿಡಿದಿದೆ.
ಮೊಬೈಲ್ ಫೋನ್ ಬಳಕೆಯ ವ್ಯವಹಾರದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವ ಸೈಲೇಶ್ ಇದೀಗ 3 ಆ್ಯಪ್ಗಳನ್ನು ಅಭಿವೃದ್ಧಿಪಡಿಸಿದ್ದಾನೆ. ಎರಡು ಕಂಪನಿ ಈಗಾಗಲೇ ಈತನ ಎರಡು ಗೇಮ್ ಸಂಬಂಧಿತ ಆ್ಯಪ್ಗಳಲ್ಲಿ ಹಣ ಪಾವತಿ ಮಾಡಿವೆ. ಇದೀಗ ವಿಶ್ವದ ಅತಿದೊಡ್ಡ ಕಂಪನಿ ಅಮೇಜಾನ್ ಸೈಲೇಶ್ನನ್ನು ಸಂಪರ್ಕಿಸಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಸೈಲೇಶ್ ಅಮೇಜಾನ್ ಕಂಪನಿಗಾಗಿ ಆ್ಯಪ್ ಅಭಿವೃದ್ಧಿಪಡಿಸುವ ಕೆಲಸದಲ್ಲಿ ಬಿಜಿಯಾಗಿದ್ದಾನೆಂದು ತಿಳಿದುಬಂದಿದೆ.
ಆರಂಭದಲ್ಲಿ ಮೊಬೈಲ್ ಫೋನ್ ಅನ್ನು ಗೇಮಿಂಗ್ಗಾಗಿ ಬಳಸುತ್ತಿದ್ದ ಸೈಲೇಶ್, ನಂತರದಲ್ಲಿ ಟೆಕ್ನಾಲಜಿ ಮೇಲೆ ಹೆಚ್ಚು ಆಸಕ್ತಿ ಬೆಳೆಸಿಕೊಂಡನು. ಬಳಿಕ ಆ ಕ್ಷೇತ್ರದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಆರಂಭಿಸಿದನು. ಕೇವಲ ಆ್ಯಪ್ ರಚಿಸುವ ಯೋಚನೆ ಇದ್ದರೆ ಆ್ಯಪ್ ತಯಾರಿಸುವುದಿಲ್ಲ, ಅದಕ್ಕೆ ಸರಿಯಾದ ಮಾರ್ಗದರ್ಶನದ ಅಗತ್ಯವಿದೆ ಎನ್ನುತ್ತಾರೆ ಸೈಲೇಶ್. ನನ್ನ ಕಂಪ್ಯೂಟರ್ ಶಿಕ್ಷಕರು ಮತ್ತು ಸ್ನೇಹಿತರು ಬೆಂಬಲ ನೀಡಿದರು ಎಂದು ಅವರು ಹೇಳುತ್ತಾನೆ. (ಏಜೆನ್ಸೀಸ್)