ನ್ಯೂಸ್

ಆಗ್ರಾದಲ್ಲಿ 34 ಪ್ರಯಾಣಿಕರಿದ್ದ ಬಸ್​ ಹೈಜಾಕ್​: ಮಾಲೀಕನ ಸಾವೇ ಇದಕ್ಕೆ ಕಾರಣ!

ಲಖನೌ: ಫೈನಾನ್ಸ್​ ಕಂಪನಿ ಏಜೆಂಟ್​ ಓರ್ವ 34 ಪ್ರಯಾಣಿಕರಿದ್ದ ಬಸ್​ ಅನ್ನೇ ಹೈಜಾಕ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ಬುಧವಾರ ನಡೆದಿದೆ. ತೆಗೆದುಕೊಂಡಿದ್ದ ಸಾಲವನ್ನು ಮರುಪಾವತಿಸದೇ ಮಾಲೀಕ ಮೃತಪಟ್ಟ ಬೆನ್ನಲ್ಲೇ ಈ ಘಟನೆ ನಡೆದಿದೆ.

ಮಲ್ಪುರಾ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗೆ ಬಸ್​ ಹೈಜಾಕ್​ ಮಾಡಲಾಗಿದೆ. ಬಸ್​ ಹರಿಯಾಣದ ಗುರಂಗಾವ್​ನಿಂದ ಮಧ್ಯ ಪ್ರದೇಶದ ಗ್ವಾಲಿಯರ್​ಗೆ ತೆರಳುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಖಾಸಗಿ ಬಸ್​ ಆಗ್ರಾದ ನ್ಯೂ ಸದರನ್ ಬೈಪಾಸ್​ ಬಳಿಯ ರಾಯಗಢ್​ ಟೋಲ್​ ದಾಟುತ್ತಿದ್ದಂತೆ ಆರೋಪಿ ಏಜೆಂಟ್​ ಬಸ್​ ತಡೆದಿದ್ದಾನೆ. ಬಳಿಕ ಬಸ್​ನ ಕಂಟ್ರೋಲ್​ ಅನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದಾನೆ. ಈ ವೇಳೆ ಬಸ್ಸಿನಲ್ಲಿದ್ದ ಮೂವರು ಪ್ರಯಾಣಿಕರು ಹಿರಿಯ ಪೊಲೀಸ್​ ವರಿಷ್ಠಾಧಿಕಾರಿ ಬಬ್ಲೂ ಕುಮಾರ್​ ಅವರಿಗೆ ಕರೆ ಮಾಡಿ ಫೈನಾನ್ಸ್​ ಕಂಪನಿಯ ಏಜೆಂಟ್​ಗಳನ್ನು ಬಸ್ಸನ್ನು ಹೈಜಾಕ್​ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಬಬ್ಲೂ ಕುಮಾರ್​, ಗ್ವಾಲಿಯರ್​ ಮೂಲದ ಮೂವರು ಪ್ರಯಾಣಿಕರು ಇಂದು ದೂರು ನೀಡಿದ್ದಾರೆ. ಅವರು ಗುರಂಗಾವ್​ದಿಂದ ಪಟನಾಗೆ ಪ್ರಯಾಣಿಸುತ್ತಿದ್ದ ಬಸ್ಸನ್ನು ಓವರ್​ಟೇಕ್​ ಮಾಡಿ ಫೈನಾನ್ಸ್​ ಕಂಪನಿ ಏಜೆಂಟ್​ಗಳು ಹೈಜಾಕ್​ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಾಸಿದ್ದೇವೆ. ತನಿಖೆ ನಡೆಸುತ್ತೇವೆಂದು ಟ್ವೀಟ್​ ಮಾಡಿದ್ದಾರೆ.

ಸದ್ಯ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದು, ಬಸ್​ ಝಾನ್ಸಿ ತಲುಪಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಫೈನಾನ್ಸ್​ ಕಂಪನಿ ಅಕ್ರಮವಾಗಿ ಬಸ್​ ಅನ್ನು ವಶಪಡಿಸಿಕೊಂಡಿದ್ದಾರೆ. ಚಾಲಕ ಮತ್ತು ಪ್ರಯಾಣಿಕರು ಕ್ಷೇಮವಾಗಿದ್ದಾರೆ. ನಿನ್ನೆಯಷ್ಟೇ ಬಸ್​ ಮಾಲೀಕ ಮೃತಪಟ್ಟರು. ಇದರ ಬೆನ್ನಲ್ಲೇ ಏಜೆಂಟ್​ಗಳು ಈ ರೀತಿಯಾಗಿ ವರ್ತಿಸಿದ್ದಾರೆಂದು ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನಿಶ್​ ಅವಸ್ಥಿ ಹೇಳಿದ್ದಾರೆ. (ಏಜೆನ್ಸೀಸ್​)