ನ್ಯೂಸ್

ಗುಬ್ಬು ನಾರುತ್ತಿರುವ ಕಾಲುವೆ ಬಳಿ ವಿವಾಹ ವಾರ್ಷಿಕೋತ್ಸವ ಆಚರಿಸಿದ ದಂಪತಿ

ಉತ್ತರಪ್ರದೇಶ:  ರಸ್ತೆಯ ಮೇಲೆ ಕೊಳಕು, ಗಬ್ಬು ನಾರುತ್ತಿರುವ ಕಸದ ರಾಶಿಯ ನಡುವೆ ದಂಪತಿ ತಮ್ಮ 17 ನೇ  ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ. ಆಗ್ರಾ ನಗರದ ನಾಗ್ಲಾ ಕಾಲಿ ಪ್ರದೇಶದಲ್ಲಿ ಈ ಸುದ್ದಿಯಾಗಿದೆ.

17ನೇ  ವರ್ಷದ ವಿವಾಹ ವಾರ್ಷಿಕೋತ್ಸವವನ್ನು ವಧು-ವರರಂತೆ ವೇಷ ಧರಿಸಿದ ದಂಪತಿ ಪರಸ್ಪರ ಹೂಮಾಲೆ ಹಾಕಿಕೊಂಡರು. ಈ ವೇಳೆ ಸ್ಥಳೀಯ ನಿವಾಸಿಗಳು ರಸ್ತೆ, ಚರಂಡಿಯನ್ನು ಸರಿಯಾಗಿ ನಿರ್ಮಿಸದಿದ್ದರೆ ಮತ ಹಾಕುವುದಿಲ್ಲ ಎಂಬ ಘೋಷಣಾ ಫಲಕಗಳನ್ನು ಹಿಡಿದುಕೊಂಡರು. ಕೊಳಕು ಮತ್ತು ಗಬ್ಬು ನಾರುವ ಚರಂಡಿಯ ನಡುವೆ ಇಬ್ಬರೂ ಫೋಟೋ ತೆಗೆದರು. ಕೊಳಚೆ ಹಾಗೂ ಕಸದ ರಾಶಿಯತ್ತ ಜಿಲ್ಲಾಡಳಿತದ ಗಮನ ಸೆಳೆಯಲು ದಂಪತಿ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.

ಸ್ಥಳೀಯರ ಪ್ರಕಾರ, 15 ವರ್ಷಗಳಿಂದ ಈ ಸಮಸ್ಯೆ ಮುಂದುವರಿದಿದೆ, ಆದರೆ ಕಳೆದ ಎಂಟು ತಿಂಗಳಿನಿಂದ ರಸ್ತೆಯು ಕೊಳಕು ಚರಂಡಿಯಾಗಿ ಮಾರ್ಪಟ್ಟಿದ್ದು, ಈ ಭಾಗದ ಜನರು ಮನೆಯಿಂದ ಹೊರಬರಲು ಕಷ್ಟಪಡುತ್ತಿದ್ದಾರೆ ಈ ಕುರಿತಾಗಿ ಸರ್ಕಾರದ ಗಮನಕ್ಕೆ ತರಲು ದಂಪತಿ ಈ ಹೊಸ ಯೋಚನೆ ಮಾಡಿದ್ದಾರೆ ಎನ್ನಲಾಗಿದೆ.

30ಕ್ಕೂ ಹೆಚ್ಚು ಕಾಲೊನಿಗಳ ಜನರು ಈ ರಸ್ತೆಯ ಮೂಲಕ ಹಾದು ಹೋಗುತ್ತಾರೆ. ಕೊಳಚೆಯಿಂದಾಗಿ ಸ್ಥಳೀಯ ಜನರು ಈಗ ಎರಡು ಕಿಲೋಮೀಟರ್ ಸುತ್ತಾಡಬೇಕಾಗಿದೆ. ‘ಅಭಿವೃದ್ಧಿ ಇಲ್ಲ, ಮತ ಇಲ್ಲ’ ಎಂಬ ಭಿತ್ತಿಪತ್ರಗಳನ್ನು ಸಹ ಅಂಟಿಸಿದರೂ ಪ್ರಯೋಜನವಾಗಿಲ್ಲ. ನಿವಾಸಿಗಳು ದೂರು ನೀಡಿದರೂ ಸಾರ್ವಜನಿಕ ಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಳ್ಳದ ಕಾರಣ ಭಗವಾನ್ ಶರ್ಮಾ ಅವರು ತಮ್ಮ ಪತ್ನಿ ಉಮಾ ಶರ್ಮಾ ಅವರೊಂದಿಗೆ ಈ ವಿಶಿಷ್ಟ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.